ಶಾಲೆಗಳಲ್ಲಿ ದುಬಾರಿ ಬೆಲೆಗೆ ಪುಸ್ತಕ, ಸಮವಸ್ತ್ರ ಮಾರಾಟ: ಸಿಡಿದೆದ್ದ ಪೋಷಕರಿಂದ ಸಿಬಿಎಸ್ಇಗೆ ದೂರು
ಮಾರಾಟಗಾರರು ಮತ್ತು ಉದ್ಯಮಿಗಳಿಂದ ಶಾಲೆಗಳು ಕಿಕ್ ಬ್ಯಾಕ್ ಪಡೆಯುತ್ತಿವೆ. ಈ ದುರ್ವರ್ತನೆಗೆ ಕಡಿವಾಣ ಹಾಕಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.
ಬೆಂಗಳೂರು: ನಗರ ವ್ಯಾಪ್ತಿಯ ವಿವಿಧ ಖಾಸಗಿ ಶಾಲೆಗಳಲ್ಲಿ ಪುಸ್ತಕ ಮತ್ತು ಸಮವಸ್ತ್ರಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಸಿಬ್ಬಂದಿ ನಮಗೆ ಎಷ್ಟೆಲ್ಲಾ ಪುಸ್ತಕಗಳು ಬೇಕು ಮತ್ತು ಎಂಥ ಸಮವಸ್ತ್ರ ಬೇಕು ಎಂಬ ಮಾಹಿತಿ ಕೊಟ್ಟರೆ ಸಾಕು, ನಾವು ಹೊರಗೆ ಪುಸ್ತಕ ಖರೀದಿಸುತ್ತೇವೆ. ಸಮವಸ್ತ್ರವನ್ನೂ ಹೊಲಿಸುತ್ತೇವೆ. ಆದರೆ ಶಾಲೆಗಳು ತಮ್ಮಿಂದಲೇ ಖರೀದಿಸಬೇಕು ಎಂದು ತಾಕೀತು ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಎಂಆರ್ಪಿಗಿಂತಲೂ ಕಡಿಮೆ ಬೆಲೆಗೆ ಸಿಗುವ ಪುಸ್ತಕಗಳನ್ನು ದುಬಾರಿ ಬೆಲೆಗೆ ಮಾರಲಾಗುತ್ತಿದೆ ಎಂದು ಹಲವು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆಗಳ ದುರ್ವರ್ತನೆ ಬಗ್ಗೆ ಸಿಬಿಎಸ್ಇ (Central Board of Secondary Education – CBSE) ಗಮನ ಸೆಳೆದಿದ್ದ ಪೋಷಕರ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಬಿಎಸ್ಇ ಅಧಿಕಾರಿಗಳು ಸಂಬಂಧಿಸಿದ ಖಾಸಗಿ ಶಾಲೆಗೆ ನಿರ್ದೇಶನ ನೀಡಿದ್ದಾರೆ. ಈ ಪತ್ರವನ್ನು ಕರ್ನಾಟಕ ಪೋಷಕರ ವೇದಿಕೆ (Voice of Parents Karnataka – VOPK) ಟ್ವೀಟ್ ಮಾಡಿದೆ. ಈ ಲಿಖಿತ ಉತ್ತರದಲ್ಲಿ ಮಂಡಳಿಯು ‘ಶಾಲೆಯ ಆವರಣದಲ್ಲಿಯೇ ಪಠ್ಯಪುಸ್ತಕ, ಬರೆಯುವ ಪುಸ್ತಕ ಮತ್ತು ಸಮವಸ್ತ್ರ ಖರೀದಿಸಬೇಕು’ ಎಂದು ನಿರ್ಬಂಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
‘ಮಗುವಿನ ಕಲಿಕೆಗೆ ಅಗತ್ಯವಿರುವ ಪುಸ್ತಕಗಳ ಪಟ್ಟಿಯನ್ನು ಕಡ್ಡಾಯವಾಗಿ ಕೊಡಬೇಕು. ಎಂಆರ್ಪಿ ನಮೂದಿಸದೇ ಶಾಲೆಗಳ ಲೇಬಲ್ ಅಥವಾ ಬ್ರಾಂಡ್ ಮೇಲೆ ಪುಸ್ತಕಗಳನ್ನು ಮಾರಬಾರದು. ಸಾರಿಗೆ ಶುಲ್ಕವನ್ನು ಪಾರದರ್ಶಕವಾಗಿ ವಿವರಿಸಬೇಕು. ಪೋಷಕರ ಆತಂಕ ಮತ್ತು ಕಾಳಜಿಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಬೇಕು’ ಎಂದು ಸಿಬಿಎಸ್ಇ ಮಂಡಳಿಯ ನೋಂದಣಿ ವಿಭಾಗವು ಪೋಷಕರ ದೂರು ಆಧರಿಸಿ ವೈಟ್ಫೀಲ್ಡ್ನ ಶಾಲೆಯೊಂದಕ್ಕೆ ನಿರ್ದೇಶನ ನೀಡಿದೆ.
Mail from CBSE board to Principal of Bengaluru school on allegations of forcing parents to buy uniforms & books from them pic.twitter.com/ClYwj6tupv
— Voice Of Parents Association ® (@VoiceOfParents2) July 2, 2022
ಸಿಬಿಎಸ್ಇ ಮಂಡಳಿಯ ನಿರ್ದೇಶನವನ್ನು ಹಲವು ಪೋಷಕರು ಸ್ವಾಗತಿಸಿದ್ದಾರೆ. ‘ಖಾಸಗಿ ಶಾಲೆಗಳ ದುರ್ವರ್ತನೆಯಿಂದ ಕಷ್ಟ ಅನುಭವಿಸುತ್ತಿರುವ ಎಲ್ಲ ಪೋಷಕರೂ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಹೀಗೆಯೇ ದನಿ ಎತ್ತಬೇಕು. ಆಗ ಮಾತ್ರ ಪರಿಸ್ಥಿತಿ ಸುಧಾರಿಸುತ್ತದೆ. ಶಾಲೆಗಳಲ್ಲಿ ಇಂಥ ಅಕ್ರಮ ನಡೆಯುತ್ತಿದೆ ಎನ್ನುವ ಸಂಗತಿ ಸಿಬಿಎಸ್ಇ ಅಧಿಕಾರಿಗಳಿಗೆ ತಿಳಿದಿಲ್ಲವೇ? ಬೆಂಗಳೂರಿನಲ್ಲಿಯೇ ಇರುವ ಶಿಕ್ಷಣ ಸಚಿವರ ಅರಿವಿಗೆ ಬಂದಿಲ್ಲವೇ’ ಎಂದು ಕೆಲ ಪೋಷಕರು ಪ್ರಶ್ನಿಸಿದ್ದಾರೆ.
Does your school through various means force you to buy uniforms & books from school or specific vendors?
Please retweet for maximum participation
— Voice Of Parents Association ® (@VoiceOfParents2) June 30, 2022
ಕಿಕ್ಬ್ಯಾಕ್ ಆರೋಪ
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಹುತೇಕ ಪೋಷಕರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಎಂಆರ್ಪಿಗಿಂತಲೂ ಶೇ 50ರಷ್ಟು ಹೆಚ್ಚಿಗೆ ಮೊತ್ತಕ್ಕೆ ಪುಸ್ತಕಗಳನ್ನು ಮಾರಲಾಗುತ್ತಿದೆ. ಶಾಲೆಗಳಿಂದಲೇ ಪುಸ್ತಕಗಳನ್ನು ಖರೀದಿಸಬೇಕು ಎಂದು ಷರತ್ತು ವಿಧಿಸಿ ನಮ್ಮನ್ನು ಅಸಹಾಯಕರನ್ನಾಗಿಸಲಾಗಿದೆ’ ಎಂದು ಪೋಷಕರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕೆಲ ಪೋಷಕರ ಆಕ್ಷೇಪ ಮತ್ತೊಂದು ರೀತಿಯದ್ದು. ‘ನಿರ್ದಿಷ್ಟ ಅಂಗಡಿ ಅಥವಾ ಮಾರಾಟಗಾರನಿಂದಲೇ ಪುಸ್ತಕ, ಶೂ, ಸಮವಸ್ತ್ರ ಖರೀದಿಸಬೇಕು ಎಂದು ಶಾಲೆಗಳ ಆಡಳಿತ ಮಂಡಳಿಗಳು ತಾಕೀತು ಮಾಡುತ್ತಿವೆ. ನಿರ್ದಿಷ್ಟವಾಗಿ ಇಂಥದ್ದೇ ಬ್ರಾಂಡ್ನ ಶೂ, ಲೇಖನ ಸಾಮಗ್ರಿ ಖರೀದಿಸಬೇಕೆಂದು ಸೂಚಸುತ್ತಿವೆ. ಈ ಮಾರಾಟಗಾರರು ಮತ್ತು ಉದ್ಯಮಿಗಳಿಂದ ಶಾಲೆಗಳು ಕಿಕ್ ಬ್ಯಾಕ್ ಪಡೆಯುತ್ತಿವೆ. ಈ ದುರ್ವರ್ತನೆಗೆ ಕಡಿವಾಣ ಹಾಕಬೇಕಿದೆ’ ಎಂದೂ ಹಲವು ಆಗ್ರಹಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಸಮಿತಿ ಮತ್ತು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೂ ಹಲವು ದೂರುಗಳು ದಾಖಲಾಗಿವೆ.
‘ನನ್ನ ಮಗಳನ್ನು ಬೆಂಗಳೂರಿನ ಅತ್ಯುತ್ತಮ ಎನಿಸಿಕೊಂಡಿರುವ ಶಾಲೆಗೆ ಕಳಿಸುತ್ತಿದ್ದೇನೆ. ಅಲ್ಲಿ 200 ಪುಟದ ಲಾಂಗ್ ನೋಟ್ಬುಕ್ ಇಂಥದ್ದೇ ಕಂಪನಿಯದ್ದು ಆಗಿರಬೇಕು ಎನ್ನುತ್ತಾರೆ. ಅವರೇ ತರಿಸಿಕೊಡುತ್ತಾರೆ. ಆದರೆ ಎಂಆರ್ಪಿಗಿಂತಲೂ ದುಪ್ಪಟ್ಟು ಹಣ ವಸೂಲು ಮಾಡುತ್ತಾರೆ. ದುಬಾರಿ ಫೀಸ್ ಕೊಟ್ಟು ಶಾಲೆಗೆ ಸೇರಿಸಿರುವ ನಾವು ಈ ಖರ್ಚು ಹೇಗೆ ಹೊಂದಿಸುವುದು’ ಎಂದು ಹೆಸರು ಹೇಳಲು ಇಚ್ಛಿಸದ ಪೋಷಕರೊಬ್ಬರ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ಜಾಲತಾಣ ವರದಿ ಮಾಡಿದೆ.
For a Non standard quality T shirt which is not even worth 250/- Orchids school is charging for 950/- this is extremely unacceptable for jeans they charge 1200/- and for jacket 1700/- what kind of charges are these and why our govt is quite??????
— Sandeep Dumawat (@SandeepD777) July 2, 2022
ಮಾರಾಟ ದಂಧೆ
‘ಒಂದು ಶಾಲೆಯಲ್ಲಿ 1,500 ಮಕ್ಕಳು ಓದುತ್ತಿದ್ದಾರೆ ಎಂದುಕೊಳ್ಳಿ. ಒಂದು ಮಗುವಿಗೆ ಸರಾಸರಿ ಎಷ್ಟು ಪುಸ್ತಕ ಬೇಕಾಗುತ್ತದೆ ಎಂಬ ಅಂದಾಜು ಗೊತ್ತಿದೆಯೇ? ಪುಸ್ತಕ, ಸಮವಸ್ತ್ರ, ಶೂ ಮಾರಾಟ ದಂಧೆಯಿಂದ ಶಾಲೆಗಳು ದೊಡ್ಡಮಟ್ಟದ ಹಣ ಪಡೆಯುತ್ತಿವೆ’ ಎಂದು ಕರ್ನಾಟಕ ಪೋಷಕರ ವೇದಿಕೆಯ ಪ್ರತಿನಿಧಿಗಳು ಹೇಳಿದ್ದಾರೆ. ‘ಇದು ಕೇವಲ ಆರ್ಥಿಕ ಹೊರೆ ಮಾತ್ರವಲ್ಲ. ಮಾನಸಿಕ ಕಿರುಕುಳವೂ ಹೌದು’ ಎಂದು ಮತ್ತೋರ್ವ ಪೋಷಕರು ಪ್ರತಿಕ್ರಿಯಿಸಿದರು.
ಇದೆಂಥ ಕರ್ಮ
‘ನನಗೆ ಅಥವಾ ನನ್ನ ಮಗನಿಗೆ ಆಸಕ್ತಿಯಿಲ್ಲದಿದ್ದರೂ ಕಡ್ಡಾಯ ಎನ್ನುವ ಕಾರಣಕ್ಕೆ ಅವನನ್ನು ಕರಾಟೆ ಅಥವಾ ಈಜಿನ ಅಭ್ಯಾಸಕ್ಕೆ ಸೇರಿಸಲೇಬೇಕಾಗಿದೆ. ಅದಕ್ಕೂ ತಿಂಗಳಿಗೆ ಇಷ್ಟು ಎಂದು ಫೀಸ್ ವಸೂಲು ಮಾಡುತ್ತಿದ್ದಾರೆ. ನಾವು ಪ್ರಶ್ನಿಸಿದರೆ ಮುಂದಿನ ವರ್ಷ ನಿಮ್ಮ ಮಗನಿಗೆ ಸೀಟು ಕೊಡುವುದಿಲ್ಲ ಎಂದು ಹೆದರಿಸುತ್ತಾರೆ. ಇದಕ್ಕೇನು ಪರಿಹಾರ’ ಎಂದು ಮತ್ತೊಬ್ಬ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ನಿಯಮಗಳು ಏನು ಹೇಳುತ್ತವೆ
ಸಿಬಿಎಸ್ಇ ನಿಯಮಗಳ ಪ್ರಕಾರ ಶಾಲೆಗಳು ಕೇವಲ ಪುಸ್ತಕದ ಪಟ್ಟಿ, ಸಮವಸ್ತ್ರದ ನಿಯಮ ಹಾಗೂ ಶೂಗಳ ವಿವರ ಕೊಡಬೇಕು. ಪೋಷಕರು ನಿಗದಿತ ದಿನಾಂಕದ ಒಳಗೆ ತಮ್ಮ ಮಕ್ಕಳಿಗೆ ತಮಗೆ ಬೇಕಾದ ಅಂಗಡಿಯಿಂದ ಅದನ್ನು ಕೊಡಿಸಬಹುದು. ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವಿಂಗಡನೆ, ನಿಯಂತ್ರಣ ಮತ್ತು ಪಠ್ಯಕ್ರಮ ನಿಗದಿ) ತಿದ್ದುಪಡಿ ನಿಯಮ, 2018ರ ಪ್ರಕಾರ ಪೋಷಕರಿಂದ ಯಾವುದೇ ನೆಪದಲ್ಲಿ ಹೆಚ್ಚುವರಿ ಹಣ ವಸೂಲು ಮಾಡುವಂತಿಲ್ಲ.
ಇಷ್ಟು ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದರೂ ನಗರದ ಪೋಷಕರಿಗೆ ದುಬಾರಿ ಬೆಲೆಗೆ ಪುಸ್ತಕ, ಸಮವಸ್ತ್ರ, ಶೂ ಖರೀದಿಸುವ ಸಂಕಷ್ಟ ತಪ್ಪಿಲ್ಲ.
Published On - 7:24 am, Mon, 11 July 22