ವಿನೂತನ ಬೋಧನಾ ವಿಧಾನಗಳಿಂದ ವಿದ್ಯಾರ್ಥಿಗಳಿಗೆ ವಿಜ್ಞಾದಲ್ಲಿ ಆಸಕ್ತಿ ಮೂಡಿಸುತ್ತಿರುವ ಎಂ ಶಿವಕುಮಾರ್
ಎಂ ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಆಸಕ್ತಿದಾಯಕ ಮಾಡಲು ತಮ್ಮ ವಿನೂತನ ಬೋಧನಾ ವಿಧಾನಗಳನ್ನು ಬಳಸುತ್ತಿದ್ದಾರೆ.
ಅದೆಷ್ಟೋ ಮಕ್ಕಳಿಗೆ ಶಾಲೆಯಲ್ಲಿ ವಿಜ್ಞಾನ (Science) ಎಂದರೆ ಕಬ್ಬಿಣದ ಕಡಲೆ. ಶಾಲಾ ಕೊಠಡಿಯಲ್ಲಿ ಪಾಠ ಮಾಡುವ ಹಲವು ವೈಜ್ಞಾನಿಕ ಸಿದ್ದಂತಗಳು (Scientific theories) ಮಕ್ಕಳಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದೇ ಮಕ್ಕಳಿಗೆ ಲ್ಯಾಬ್ನಲ್ಲಿ ಪ್ರಯೋಗಗಳನ್ನು (Experiments) ಮಾಡಿ ತೋರಿಸಿ ವಿಷಯವನ್ನು ವಿವರಿಸಿದರೆ ಸ್ವಲ್ಪ ಮಟ್ಟಿಗೆ ಸುಲಭವೆನಿಸಬಹುದು. ಎಂ ಶಿವಕುಮಾರ್ (M Shivakumar) ಅವರು ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಆಸಕ್ತಿದಾಯಕ ಮಾಡಲು ತಮ್ಮ ವಿನೂತನ ಬೋಧನಾ ವಿಧಾನಗಳನ್ನು ಬಳಸುತ್ತಿದ್ದಾರೆ.
ಈ ಮೂಲಕ ಶಿವಕುಮಾರ್ ಅವರು ಯುವ ಮನಸ್ಸುಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿದ್ದಾರೆ. 8 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಸೆಮಿನಾರ್‌ಗಳು ಮತ್ತು ವಿಶೇಷ ತರಗತಿಗಳನ್ನು ನಡೆಸುವುದರಿಂದ, ಶಿವಕುಮಾರ್ ಅವರು ವಿದ್ಯಾರ್ಥಿಗಳ ಕಲ್ಪನೆಯನ್ನು ಸೆರೆಹಿಡಿಯುವ ಮಾದರಿಗಳನ್ನು ಬಳಸಿಕೊಂಡು ವಿಜ್ಞಾನಕ್ಕೆ ಜೀವ ತುಂಬಿದ್ದಾರೆ.
ಶಿವಕುಮಾರ್ ಅವರಿಗೆ ಬಾಲ್ಯದಲ್ಲಿಯೇ ವಿಜ್ಞಾನ ಮತ್ತು ವಿನ್ಯಾಸದತ್ತ ಒಲವಿತ್ತು, ನಂತರದ ದಿನಗಳಲ್ಲಿ ಬಿಎಂಎಸ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ಪೂರ್ಣಗೊಳಿಸುವ ಮೂಲಕ ತಮ್ಮ ಆಸಕ್ತಿಯನ್ನು ಅನುಸರಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ, ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ನಲ್ಲಿ (HMT) ಕೆಲಸ ಮಾಡಲು ಪ್ರಾರಂಭಿಸಿದರು. 1975 ರಲ್ಲಿ HMT ಅನ್ನು ತೆರೆಯುವ ವೇಳೆ ಶಿವಕುಮಾರ್ ಅವರು ಯಂತ್ರ ವಿನ್ಯಾಸದ ಉಸ್ತುವಾರಿ ವಹಿಸುವ ಮುಖ್ಯ ವಿನ್ಯಾಸಕರಾಗಿದ್ದರು.
ನಂತರದ ದಿನಗಳಲ್ಲಿ ತಮ್ಮದೇ ಇಂಡಸ್ಟ್ರಿ ಅನ್ನು ತೆರೆದರು. ಅಲ್ಲಿ ಶಿವಕುಮಾರ್ ಅವರು ವಿವಿಧ ಆಟೋಮೊಬೈಲ್ ಉದ್ಯಮಗಳಿಗೆ ವಿಶೇಷ-ಉದ್ದೇಶದ ಯಂತ್ರಗಳನ್ನು ವಿನ್ಯಾಸಗೊಳಿಸಿದರು. ಶಿವಕುಮಾರ್ ಅವರ ವೃತ್ತಿಜೀವನದುದ್ದಕ್ಕೂ, ವಿನ್ಯಾಸ ಮತ್ತು ಮಾಡೆಲಿಂಗ್‌ಗೆ ಮೇಲೆ ಇರುವ ಅವರ ಅಚಲವಾದ ಸಮರ್ಪಣೆಯನ್ನು ನಾವು ನೋಡಬಹುದು.
ನಿವೃತ್ತಿಯ ನಂತರ, ಶಿವಕುಮಾರ್ ಅವರು 2005 ರಲ್ಲಿ ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್‌ಗೆ ತಾಂತ್ರಿಕ ಸಲಹೆಗಾರರಾಗಿ ಕೊಡುಗೆ ನೀಡುವ ಮೂಲಕ ತಮ್ಮ ಉತ್ಸಾಹವನ್ನು ಜೀವಂತವಾಗಿಡಲು ನಿರ್ಧರಿಸಿದರು. ಇಲ್ಲಿ, ಅವರು ವಿದ್ಯಾರ್ಥಿಗಳ ಕಲಿಕೆಯ ಅನುಭವಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ವಿಜ್ಞಾನ ಮಾದರಿಗಳನ್ನು ವಿನ್ಯಾಸಗೊಳಿಸಿದರು. ಅಂದಿನಿಂದ, ಸಂಪನ್ಮೂಲ ವ್ಯಕ್ತಿಯಾಗಿ ಅವರ ಪ್ರಯಾಣ ಪ್ರಾರಂಭವಾಯಿತು. ಅಂದಿನಿಂದ ಇಂದಿನ ವರೆಗೂ ಅವರು ವಿಜ್ಞಾನದ ಅದ್ಭುತಗಳ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಹಲವಾರು ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಶಿವಕುಮಾರ್ ಅವರು ತಮ್ಮ ಸೆಮಿನಾರ್ಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಲ್ಲಿ ದೃಢವಾಗಿ ನಂಬುತ್ತಾರೆ. “ನಾನು ವಿದ್ಯಾರ್ಥಿಗಳ ಗಮನವನ್ನು ಸೆಳೆಯುವ ವಿಜ್ಞಾನ ಆಟಗಳೊಂದಿಗೆ ನನ್ನ ತರಗತಿಗಳನ್ನು ಪ್ರಾರಂಭಿಸುತ್ತೇನೆ. ಸೆಮಿನಾರ್‌ಗಳು ಮುಂದುವರೆದಂತೆ, ಆಟದ ಜೊತೆ ಪಾಠ ಮತ್ತು ಸಿದ್ಧಾಂತಗಳನ್ನು ವಿವರಿಸುತ್ತೇನೆ. ಇದು ವಿದ್ಯಾರ್ಥಿಗಳಿಗೆ ವಿಷಯವನ್ನು ಸ್ಪಷ್ಟವಾಗಿ ದೃಶ್ಯೀಕರಿಸಲು, ಸುಲಭವಾಗಿ ಅರ್ಥ ಮಾಡಿಕೊಳ್ಳಲು ಎಡೆ ಮಾಡಿ ಕೊಡುತ್ತದೆ ಮತ್ತು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ” ಎಂದು ಶಿವಕುಮಾರ್ ಹೇಳಿದ್ದಾರೆ.
ಸೆಮಿನಾರ್ಗಳ ನಂತರ ಹಲವು ಶಾಲಾ ಪ್ರಾಂಶುಪಾಲರು ಶಿವಕುಮಾರ್ ಅವರಿಗೆ ಕರೆ ಮಾಡಿ, ಅವರು ತರಗತಿಗಳು ವಿದ್ಯಾರ್ಥಿಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ವಿವಿರಿಸಿದ್ದಾರೆ ಎಂದು ಶಿವಕುಮಾರ್ ಟಿವಿ9 ಜೊತೆ ಮಾತನಾಡುವಾಗ ತಿಳಿಸಿದ್ದಾರೆ. ಅವರ ಸೆಮಿನಾರ್ಗಳಿಗೆ ಹಾಜರಾದ ನಂತರ ವಿದ್ಯಾರ್ಥಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಶಾಲೆಗಳು ವರದಿ ಮಾಡಿವೆ.
ವೈದಿಕ ಜ್ಞಾನಹೊಂದಿರುವ ಶಿವಕುಮಾರ್ ಅವರು ಮಕ್ಕಳಲ್ಲಿ ಗೊಂದಲವನ್ನು ತಪ್ಪಿಸಲು ಕಲಿಕೆಯ ಪ್ರಕ್ರಿಯೆಯಲ್ಲಿ ವೈದಿಕ ಜ್ಞಾನ ಮತ್ತು ವಿಜ್ಞಾನವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳುವ ಮಹತ್ವವನ್ನು ತಿಳಿಸಿದ್ದಾರೆ. ಬದಲಾಗಿ, ಬೆಳೆಯುತ್ತಿರುವಾಗ ಸ್ಪಷ್ಟ ಮತ್ತು ಕೇಂದ್ರೀಕೃತ ಮನಸ್ಸನ್ನು ಬೆಳೆಸಲು ವಿದ್ಯಾರ್ಥಿಗಳು ಒಂದು ಸಮಯದಲ್ಲಿ ಒಂದು ವಿಷಯವನ್ನು ಕರಗತ ಮಾಡಿಕೊಳ್ಳುವತ್ತ ಗಮನಹರಿಸಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: ಐಸಿಎಐ ಸಿಎ ಫಲಿತಾಂಶ 2023 ಶೀಘ್ರದಲ್ಲೇ ಪ್ರಕಟ, ಪರಿಶೀಲಿಸುವುದು ಹೇಗೆ?
ಎಂ. ಶಿವಕುಮಾರ್ ಅವರ ಕಲಿಕೆ ಅಸಂಖ್ಯಾತ ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುವುದರ ಜೊತೆಗೆ ವಿದ್ಯಾರ್ಥಿಗಳು ವಿಜ್ಞಾನವನ್ನು ಇನ್ನಷ್ಟು ಆಸಕ್ತಿದಾಯಕ ವಿಷಯವನ್ನಾಗಿ ಮಾಡಿದೆ. ಸಂವಾದಾತ್ಮಕ ಮತ್ತು ಕಾಲ್ಪನಿಕ ಬೋಧನಾ ವಿಧಾನಗಳ ಮೂಲಕ ಮುಂದಿನ ಪೀಳಿಗೆ ವಿಜ್ಞಾನವನ್ನು ಪ್ರೀತಿಸುವಂತೆ ಮಾಡುತ್ತಿದ್ದಾರೆ.
ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Tue, 1 August 23