AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಾಮ ದೇವಸ್ಥಾನಕ್ಕೆ 10 ಲಕ್ಷ ದೇಣಿಗೆ ನೀಡಿದ ‘ಆದಿಪುರುಷ್’ ಪ್ರಭಾಸ್

Adipurush: ಆದಿಪುರುಷ್ ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಿರುವ ಪ್ರಭಾಸ್ 10 ಲಕ್ಷ ರುಪಾಯಿ ದೇಣಿಗೆಯನ್ನು ಭದ್ರಾಚಲಂನ ಸೀತಾರಾಮ ದೇವಾಲಯಕ್ಕೆ ನೀಡಿದ್ದಾರೆ.

ಶ್ರೀರಾಮ ದೇವಸ್ಥಾನಕ್ಕೆ 10 ಲಕ್ಷ ದೇಣಿಗೆ ನೀಡಿದ 'ಆದಿಪುರುಷ್' ಪ್ರಭಾಸ್
ಪ್ರಭಾಸ್-ಆದಿಪುರುಷ್
ಮಂಜುನಾಥ ಸಿ.
|

Updated on: May 14, 2023 | 9:17 PM

Share

ಆದಿಪುರುಷ್ (Adipurush) ಸಿನಿಮಾದಲ್ಲಿ ಶ್ರೀರಾಮನ (Sriram) ಪಾತ್ರದಲ್ಲಿ ನಟಿಸಿರುವ ನಟ ಪ್ರಭಾಸ್ (Prabhas) ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಹಲವು ಕಾರಣಗಳಿಗೆ ಈ ಸಿನಿಮಾ ಪ್ರಭಾಸ್​ಗೆ ಮುಖ್ಯವಾಗಿದೆ. ಭಾರಿ ಬಜೆಟ್​ನ ಈ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿವೆ. ಟೀಸರ್ ಬಿಡುಗಡೆ ಆಗಿದ್ದಾಗ ತೀವ್ರ ಹಿನ್ನಡೆ ಅನುಭವಿಸಿದ್ದ ಈ ಸಿನಿಮಾ, ಇದೀಗ ಟ್ರೈಲರ್ ಬಿಡುಗಡೆ ಆದ ಬಳಿಕ ಸಿನಿಮಾದ ಬಗ್ಗೆ ತುಸು ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ನಡುವೆ ನಡುವೆ ನಟ ಪ್ರಭಾಸ್ ಶ್ರೀರಾಮ ದೇಗುಲಕ್ಕೆ 10 ಲಕ್ಷ ದೇಣಿಗೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಭದ್ರಾಚಲಂನ ಜನಪ್ರಿಯ ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯಕ್ಕೆ 10 ಲಕ್ಷ ದೇಣಿಗೆಯನ್ನು ನಟ ಪ್ರಭಾಸ್ ನೀಡಿದ್ದಾರೆ. ಪ್ರಭಾಸ್ ಕುಟುಂಬ ಸದಸ್ಯರು ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ರಮಾ ದೇವಿ ಅವರಿಗೆ 10 ಲಕ್ಷದ ಚೆಕ್ ಹಸ್ತಾಂತರಿಸಿದ್ದಾರೆ. ಚೆಕ್ ಹಸ್ತಾಂತರಿಸುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪ್ರಭಾಸ್​ರ ಈ ನಡೆ ಇದೀಗ ಚರ್ಚೆಗೆ ಕಾರಣವಾಗಿದೆ. ಸಿನಿಮಾ ಪ್ರಚಾರ ತಂತ್ರವೆಂದು ಕೆಲವರು ಟೀಕಿಸಿದರೆ, ಪ್ರಭಾಸ್​ಗೆ ಇರುವ ದೇವರ ಭಕ್ತಿ ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೀಸೆ ಬಿಟ್ಟು, ಉತ್ತಮ ದೇಹದಾರ್ಡ್ಯದೊಟ್ಟಿಗೆ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟ್ರೈಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಟ್ರೈಲರ್​ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾಗ ತೀವ್ರ ಟೀಕೆಗೆ ಚಿತ್ರತಂಡ ಗುರಿಯಾಗಿತ್ತು ಮಾತ್ರವಲ್ಲದೆ ಹಲವರು, ರಾಮಾಯಣದ ಕತೆ ತಿದ್ದಿರುವ ಆರೋಪ ಮಾಡಿ ದಾವೆಗಳನ್ನು ಹೂಡಿದ್ದರು.

ಆದಿಪುರುಷ್ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ನಟ ಸನ್ನಿ ಸಿಂಗ್ ಲಕ್ಷ್ಮಣ ಪಾತ್ರದಲ್ಲಿ ನಟಿಸಿದ್ದರೆ ಹನುಮಂತನ ಪಾತ್ರದಲ್ಲಿ ದೇವದತ್ತ ನಾಗೆ ನಟಿಸಿದ್ದಾರೆ. ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ಓಂ ರಾವತ್ ನಿರ್ದೇಶನ ಮಾಡಿದ್ದು ಟಿ-ಸೀರೀಸ್ ಮಾಲೀಕ ಭೂಷಣ್ ಕುಮಾರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭವಾಗಿದ್ದು ಸಿನಿಮಾವು ಜೂನ್ 16ಕ್ಕೆ ಬಿಡುಗಡೆ ಆಗಲಿದೆ.

ಪ್ರಭಾಸ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದಿಪುರುಷ್ ಸಿನಿಮಾದ ಬಳಿಕ ಪ್ರಭಾಸ್​ರ ಪ್ರಾಜೆಕ್ಟ್ ಕೆ ಸಿನಿಮಾ ಬಿಡುಗಡೆ ಆಗಲಿದೆ ಆ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಪ್ರಾಜೆಕ್ಟ್ ಕೆ ಬಳಿಕ ಅರ್ಜುನ್ ರೆಡ್ಡಿ ನಿರ್ದೇಶಕ ಸಂದೀಪ್ ವಂಗ ಜೊತೆಗೆ ಸ್ಪಿರಿಟ್ ಹೆಸರಿನ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ. ಅದಾದ ಬಳಿಕ ಹಾರರ್ ಸಿನಿಮಾ ಒಂದರಲ್ಲಿ ಪ್ರಭಾಸ್ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ