ಮಗಳ ಫೋಟೋ ತೆಗೆದರೆ ಕಾನೂನು ಕ್ರಮ: ಎಚ್ಚರಿಕೆ ನೀಡಿದ ರಣಬೀರ್, ಆಲಿಯಾ ಭಟ್
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿಯ ಮಗಳು ರಹಾ ಫೋಟೋ ಮತ್ತು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಆದರೆ ಇನ್ಮುಂದೆ ಮಗಳ ಫೋಟೋ ತೆಗೆಯುವಂತಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಮಗಳ ಫೋಟೋವನ್ನು ಅನಧಿಕೃತವಾಗಿ ಪ್ರಕಟ ಮಾಡಬಾರದು ಎಂದು ಕೂಡ ಅವರು ಹೇಳಿದ್ದಾರೆ.

ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅದರಲ್ಲೂ ಬಾಲಿವುಡ್ (Bollywood) ಸೆಲೆಬ್ರಿಟಿಗಳ ಹಿಂದೆ ಪಾಪರಾಜಿಗಳು ಇದ್ದೇ ಇರುತ್ತಾರೆ. ಸೆಲೆಬ್ರಿಟಿಗಳ ಮಕ್ಕಳ ಮೇಲೂ ಪಾಪರಾಜಿಗಳ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ದಂಪತಿಯ ಮಗ ತೈಮೂರ್ ಅಲಿ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದು ಇದೇ ಕಾರಣದಿಂದ. ಈಗ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ ದಂಪತಿಯ ಮಗಳು ರಹಾ ಫೋಟೋಗಳು ಕೂಡ ವೈರಲ್ ಆಗುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ದಂಪತಿ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮಾರ್ಚ್ 15ರಂದು ಆಲಿಯಾ ಭಟ್ ಅವರ ಹುಟ್ಟುಹಬ್ಬ. ಎರಡು ದಿನ ಮುಂಚಿತವಾಗಿಯೇ ಮಾಧ್ಯಮ ಪ್ರತಿನಿಧಿಗಳು ಹಾಗೂ ಪಾಪರಾಜಿಗಳ ಜೊತೆ ಆಲಿಯಾ ಭಟ್ ಅವರು ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ವೇಳೆ ಆಲಿಯಾ ಮತ್ತು ರಣಬೀರ್ ಕಪೂರ್ ಅವರು ಮಗಳ ಬಗ್ಗೆ ಒಂದು ಮನವಿ ಮಾಡಿದ್ದಾರೆ. ಯಾರೂ ಕೂಡ ತಮ್ಮ ಮಗಳ ಫೋಟೋ ತೆಗೆಯಬಾರದು ಮತ್ತು ಅನಧಿಕೃತವಾಗಿ ಬಳಸಬಾರದು ಎಂದು ಅವರು ಹೇಳಿದ್ದಾರೆ.
ಪಾಪರಾಜಿಗಳ ವೃತ್ತಿಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಗೌರವ ನೀಡುತ್ತಾರೆ. ಎಲ್ಲರನ್ನೂ ತಮ್ಮ ಕುಟುಂಬದ ರೀತಿ ಎಂದು ಅವರು ಪರಿಗಣಿಸಿದ್ದಾರೆ. ಹಾಗಾಗಿ ಮಗಳ ಫೋಟೋ ತೆಗೆಯುವುದು ಬೇಡ ಎಂದು ಮನವಿ ಮಾಡಿದ್ದಾರೆ. ಈ ಮನವಿಯನ್ನು ಎಲ್ಲರೂ ಪರಿಗಣಿಸುತ್ತಾರೆ ಎಂಬ ನಂಬಿಕೆ ಅವರಿಗೆ ಇದೆ. ಒಂದು ವೇಳೆ ಕೆಲವರು ಮಾತು ಕೇಳದೇ ಇದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದೇ ಬೇರೆ ಯಾವುದೇ ಆಯ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ.
ಆಲಿಯಾ ಭಟ್, ರಣಬೀರ್ ಕಪೂರ್ ಅವರು ವಿಮಾನ ನಿಲ್ದಾಣದಂತಹ ಜಾಗಗಳಲ್ಲಿ ಕಾಣಿಸಿಕೊಂಡಾಗ ಅವರ ಜೊತೆ ಪುತ್ರಿ ಕೂಡ ಇರುತ್ತಾಳೆ. ಆಕೆಗೆ ಈಗಿನ್ನೂ 2 ವರ್ಷ ವಯಸ್ಸು. ಮಗಳು ಅಲ್ಲಿಂದ ದಾಟಿ ಹೋಗುವ ತನಕ ಅಥವಾ ಆಕೆಯ ಮುಖ ಮುಚ್ಚಿಕೊಳ್ಳುವ ತನಕ ಪಾಪರಾಜಿಗಳು ಕಾಯಬೇಕು ಎಂದು ಆಲಿಯಾ ಹೇಳಿದ್ದಾರೆ. ಮಗಳ ಖಾಸಗಿತನಕ್ಕೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ನೋಡಿ: ಬಂಗಾರದಂತೆ ಪಳಪಳನೆ ಹೊಳೆದ ನಟಿ ಆಲಿಯಾ ಭಟ್
ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿತ್ತು. ವಿಮಾನ ನಿಲ್ದಾಣದಲ್ಲಿ ರಹಾ ಹೆಸರನ್ನು ಪಾಪರಾಜಿಗಳು ಜೋರಾಗಿ ಕೂಗಿದ್ದರು. ಆಗ ಪಾಪರಾಜಿಗಳ ಕಡೆಗೆ ರಹಾ ಕೈ ಬೀಸಿದಳು. ಆ ಕ್ಷಣ ತುಂಬ ಕ್ಯೂಟ್ ಆಗಿತ್ತು. ಆದರೆ ಎಲ್ಲ ಸಂದರ್ಭ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಮಗಳನ್ನು ಪಾಪರಾಜಿಗಳ ಕ್ಯಾಮೆರಾ ಕಣ್ಣಿನಿಂದ ದೂರ ಇಡಲು ಈ ದಂಪತಿ ನಿರ್ಧರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.