ವಿರಾಟ್ ಕೊಹ್ಲಿ ಆಟ ಆಡುವಾಗ ಕಿರುಚಾಡಿದ ಅನುಷ್ಕಾ ಶರ್ಮಾ; ಪುತ್ರಿ ವಮಿಕಾ ರಿಯಾಕ್ಷನ್ ಹೇಗಿತ್ತು?
ಸದ್ಯ ಶೂಟಿಂಗ್ಗಾಗಿ ಕೋಲ್ಕತ್ತಕ್ಕೆ ತೆರಳಿದ್ದಾರೆ. ಅಲ್ಲಿಂದಲೇ ಪತಿಯ ಆಟವನ್ನು ಹಾಗೂ ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ್ದಾರೆ.
ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಕಂಡಿದೆ. ವಿರಾಟ್ ಕೊಹ್ಲಿ (Virat Kohli) ಅವರ ಅಜೇಯ 82 ರನ್ಗಳ ಆಟದಿಂದ ಪಾಕ್ ವಿರುದ್ಧ ಟೀಂ ಇಂಡಿಯಾ ಗೆಲುವು ಕಂಡಿದೆ. ಈ ಮೂಲಕ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಗೆದ್ದು ಬೀಗಿದೆ. ವಿರಾಟ್ ಕೊಹ್ಲಿ ಅವರ ಆಟವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ವಿರಾಟ್ ಪತ್ನಿ, ನಟಿ ಅನುಷ್ಕಾ ಶರ್ಮಾ (Anushka Sharma) ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮ್ಯಾಚ್ನ ಫೋಟೋಗಳನ್ನು ಹಂಚಿಕೊಂಡಿರುವ ಅವರು ಕೊಹ್ಲಿ ಆಟಕ್ಕೆ ತಲೆಬಾಗಿದ್ದಾರೆ. ಮ್ಯಾಚ್ ನಡೆಯುವಾಗ ಅನುಷ್ಕಾ ಕಿರುಚಾಡಿದ್ದರಂತೆ. ಈ ವೇಳೆ ವಮಿಕಾ ಏನೂ ಅರ್ಥವಾಗದೆ ಕುಳಿತಿದ್ದಳು ಎಂದು ಅನುಷ್ಕಾ ಹೇಳಿದ್ದಾರೆ.
2018ರಲ್ಲಿ ಅನುಷ್ಕಾ ಶರ್ಮಾ ಅವರು ವಿರಾಟ್ ಅವರನ್ನು ಮದುವೆ ಆದರು. ಆ ಬಳಿಕ ಅನುಷ್ಕಾ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಕಡಿಮೆಯೇ. ಅನುಷ್ಕಾ ಹಾಗೂ ವಿರಾಟ್ಗೆ ಕಳೆದವರ್ಷ ಮಗು ಜನಿಸಿದೆ. ಮಗುವಿನ ಆರೈಕೆಯಲ್ಲಿ ಅನುಷ್ಕಾ ಬ್ಯುಸಿ ಇದ್ದರು. ಈಗ ಅವರು ಮರಳಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಸದ್ಯ ಶೂಟಿಂಗ್ಗಾಗಿ ಕೋಲ್ಕತ್ತಕ್ಕೆ ತೆರಳಿದ್ದಾರೆ. ಅಲ್ಲಿಂದಲೇ ಪತಿಯ ಆಟವನ್ನು ಹಾಗೂ ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ್ದಾರೆ.
ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸುತ್ತಿರುವ ಫೋಟೋ ಶೇರ್ ಮಾಡಿಕೊಂಡಿರುವ ಅನುಷ್ಕಾ, ‘ನೀವು ನಮ್ಮ ಜನರ ಮುಖದಲ್ಲಿ ಸಂತಸ ಮೂಡಿಸಿದ್ದೀರಿ. ಅದೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ’ ಎಂದು ಅನುಷ್ಕಾ ಬರಹ ಆರಂಭಿಸಿದ್ದಾರೆ.
‘ನೀವು ಅದ್ಭುತ ವ್ಯಕ್ತಿ. ನಿಮ್ಮ ಶ್ರದ್ಧೆ, ಸಂಕಲ್ಪ ಮತ್ತು ನಂಬಿಕೆ ನಿಜಕ್ಕೂ ಖುಷಿ ನೀಡುತ್ತದೆ. ನನ್ನ ಜೀವನದ ಅತ್ಯುತ್ತಮ ಪಂದ್ಯವನ್ನು ನಾನು ಈಗಷ್ಟೇ ನೋಡಿದ್ದೇನೆ. ನಾನು ಚಿತ್ರ ವಿಚಿತ್ರವಾಗಿ ಡ್ಯಾನ್ಸ್ ಮಾಡುತ್ತಿದ್ದೇನೆ. ಇದನ್ನು ಅರ್ಥ ಮಾಡಿಕೊಳ್ಳಲು ಆಕೆ ಇನ್ನೂ ಚಿಕ್ಕವಳು. ಅಮ್ಮ ಯಾಕೆ ಈ ರೀತಿ ನಡೆದುಕೊಳ್ಳುತ್ತಿದ್ದಾಳೆ ಎಂದು ಆಕೆಗೆ ಅನಿಸುತ್ತಿರಬಹುದು. ಅವಳ ತಂದೆ ಆ ರಾತ್ರಿ ತನ್ನ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು ಮತ್ತು ಕಠಿಣ ಹಂತವನ್ನು ದಾಟಿ ಬಂದ ತಂದೆ ಹಿಂದೆಂದಿಗಿಂತಲೂ ಬಲಶಾಲಿಯಾಗಿ ಹೊರಹೊಮ್ಮಿದರು ಎಂಬುದು ಅರ್ಥ ಆಗುತ್ತದೆ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ಯಾವಾಗಲೂ ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ ಅನುಷ್ಕಾ ಶರ್ಮಾ.
View this post on Instagram
ಇದನ್ನೂ ಓದಿ: ವಿದೇಶದಲ್ಲಿ ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಸುತ್ತಾಟ; ಇಲ್ಲಿವೆ ಫೋಟೋಗಳು
ಸೋಶಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಆಟದ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರರಂಗದ ಅನೇಕರು ಕೊಹ್ಲಿ ಆಟಕ್ಕೆ ತಲೆಬಾಗಿದ್ದಾರೆ.
Published On - 7:42 pm, Sun, 23 October 22