ಇನ್ನೂ ತಗ್ಗಿಲ್ಲ ‘ಛಾವ’ ಹವಾ; 23ನೇ ದಿನವೂ 13 ಕೋಟಿ ರೂ. ಕಲೆಕ್ಷನ್; ಒಟ್ಟು 516 ಕೋಟಿ ರೂ!
2025ರ ಅತಿ ದೊಡ್ಡ ಸಕ್ಸಸ್ ಸಿಕ್ಕಿರುವುದು ‘ಛಾವ’ ಸಿನಿಮಾಗೆ. ಈ ಚಿತ್ರದ ಕಲೆಕ್ಷನ್ 516 ಕೋಟಿ ರೂಪಾಯಿ ಮೀರಿದೆ. ಸಿನಿಮಾ ತೆರೆಕಂಡು 24 ದಿನಗಳು ಕಳೆದಿದ್ದರೂ ಕೂಡ ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

‘ಛಾವ’ ಸಿನಿಮಾ ಹಿಟ್ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಪರಿ ಧೂಳೆಬ್ಬಿಸುತ್ತದೆ ಎಂದು ಬಹುತೇಕರು ಊಹಿಸಿರಲಿಲ್ಲ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮುಂತಾದವರು ನಟಿಸಿದ ಈ ಸಿನಿಮಾ ಬಿಡುಗಡೆ ಆಗಿ 24 ದಿನಗಳು ಕಳೆದಿವೆ. ಇಂದಿಗೂ ಕೂಡ ಇದರ ಹವಾ ಕಡಿಮೆ ಆಗಿಲ್ಲ. 23ನೇ ದಿನದ ಬಾಕ್ಸ್ ಆಫೀಸ್ ಲೆಕ್ಕ ಸಿಕ್ಕಿದೆ. 23ನೇ ದಿನ ‘ಛಾವ’ (Chhaava) ಸಿನಿಮಾ ಬರೋಬ್ಬರಿ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂದಿನ ವೀಕೆಂಡ್ ಕೂಡ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುವ ಸಾಧ್ಯತೆ ಇದೆ.
ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಛಾವ’ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗಿದೆ. 23 ದಿನಕ್ಕೆ ಈ ಸಿನಿಮಾದ ಒಟ್ಟು ಕಲೆಕ್ಷನ್ 516 ಕೋಟಿ ರೂಪಾಯಿ! ಈ ಸಿನಿಮಾದ ಮೂಲಕ ವಿಕ್ಕಿ ಕೌಶಲ್ ಅವರು ಸೂಪರ್ ಸ್ಟಾರ್ ಆಗಿದ್ದಾರೆ. ಬಾಲಿವುಡ್ನಲ್ಲಿ ಅವರ ಚಾರ್ಮ್ ಹೆಚ್ಚಾಗಿದೆ. ಅವರ ವೃತ್ತಿ ಜೀವನದ ಅತಿ ದೊಡ್ಡ ಸಕ್ಸಸ್ ಈ ಸಿನಿಮಾ. ಆದ್ದರಿಂದ ಅವರು ಸಖತ್ ಖುಷಿಯಾಗಿದ್ದಾರೆ.
ಐತಿಹಾಸಿಕ ಕಥಾಹಂದರ ‘ಛಾವ’ ಸಿನಿಮಾದಲ್ಲಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರವನ್ನು ವಿಕ್ಕಿ ಕೌಶಲ್ ಅವರು ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಔರಂಗಜೇಬ್ ಪಾತ್ರವನ್ನು ಅಕ್ಷಯ್ ಖನ್ನಾ ನಿಭಾಯಿಸಿದ್ದಾರೆ. ಎಲ್ಲ ಕಲಾವಿದರ ನಟನೆಗೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ.
ಇದನ್ನೂ ಓದಿ: ‘ಛಾವಾ’ ಪ್ರಭಾವ, ಕೋಟೆ ಅಗಿದು ನಿಧಿಗಾಗಿ ಹುಡುಕಿದ ಜನ
‘ಛಾವ’ ಸಿನಿಮಾದ ಕಲೆಕ್ಷನ್ ಇತ್ತೀಚಿನ ದಿನಗಳಲ್ಲಿ ತಗ್ಗಿದ್ದು ನಿಜ. ಆದರೆ ಪ್ರತಿ ವೀಕೆಂಡ್ನಲ್ಲಿ ಮ್ಯಾಜಿಕ್ ಆಗುತ್ತಿದೆ. ಶುಕ್ರವಾರ (ಮಾರ್ಚ್ 7) 6.30 ಕೋಟಿ ರೂಪಾಯಿ ಕೆಲಕ್ಷನ್ ಆಗಿತ್ತು. ಶನಿವಾರ (ಮಾರ್ಚ್ 8) ಕಲೆಕ್ಷನ್ ಡಬಲ್ ಆಯಿತು. ಅಂದರೆ 13.70 ಕೋಟಿ ರೂಪಾಯಿ ಗಳಿಸಿತು. ಇನ್ನು, ಭಾನುವಾರ (ಮಾರ್ಚ್ 9) ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಭಾನುವಾರ ಸಹ 10 ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದು ಎಂಬ ನಿರೀಕ್ಷೆ ಇದೆ. ಈ ಸಿನಿಮಾಗೆ ಲಕ್ಷ್ಮಣ್ ಉಟೇಕರ್ ಅವರು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.