ಹೀನಾಯ ಸೋಲು ಕಂಡ ಕಂಗನಾ ರಣಾವತ್; 50 ಲಕ್ಷ ರೂ. ದಾಟಲಿಲ್ಲ ‘ಧಾಕಡ್’ ಸಿನಿಮಾ ಗಳಿಕೆ
‘ಧಾಕಡ್’ ಸಿನಿಮಾ ಬಗ್ಗೆ ಕಂಗನಾಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಕಾರಣಕ್ಕೆ ಅವರು ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಆದರೆ, ಕಂಗನಾ ಸಿನಿಮಾ 50 ಲಕ್ಷ ರೂಪಾಯಿ ಗಳಿಸಿ ಮೊದಲ ದಿನದ ಆಟ ಮುಗಿಸಿದೆ.
ಕಂಗನಾ ರಣಾವತ್ (Kangana Ranaut) ಬಾಲಿವುಡ್ನಲ್ಲಿ ವಿವಾದಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ನ ಅನೇಕ ಸ್ಟಾರ್ಗಳ ಬಗ್ಗೆ ಅವರಿಗೆ ಅಸಮಾಧಾನ ಇದೆ. ಕಂಗನಾ ಅವರ ಮಾತುಗಳು ಅನೇಕರಿಗೆ ಇಷ್ಟ ಆಗುವುದಿಲ್ಲ. ಅವರ ಜತೆ ಸ್ನೇಹಕ್ಕಿಂತಲೂ ವಿರೋಧ ಕಟ್ಟಿಕೊಂಡವರೇ ಜಾಸ್ತಿ. ಈಗ ಅವರ ನಟನೆಯ ‘ಧಾಕಡ್’ ಸಿನಿಮಾ (Dhaakad Movie) ಹೀನಾಯವಾಗಿ ಸೋತಿದೆ. ಈ ಸೋಲಿನಿಂದ ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕಾಗಬಹುದು. ಸ್ಟಾರ್ ಪಾತ್ರವರ್ಗ ಇದೆ ಎಂದಾದರೆ ಬಾಲಿವುಡ್ ಸಿನಿಮಾ ಮೊದಲ ದಿನ ಒಂದು ಕೋಟಿ ರೂಪಾಯಿ ಆದರೂ ಗಳಿಕೆ ಮಾಡುತ್ತದೆ. ಆದರೆ, ಕಂಗನಾ ಸಿನಿಮಾ 50 ಲಕ್ಷ ರೂಪಾಯಿ ಗಳಿಸಲು ಒದ್ದಾಡಿದೆ.
‘ಧಾಕಡ್’ ಸಿನಿಮಾ ಬಗ್ಗೆ ಕಂಗನಾಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಕಾರಣಕ್ಕೆ ಅವರು ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಬಾಲಿವುಡ್ನಲ್ಲಿ ಸಿನಿಮಾಗಳು ಸತತ ಸೋಲು ಕಾಣುತ್ತಿವೆ. ಇಂಥ ಸಂದರ್ಭದಲ್ಲಿ ಕ್ರಾಂತಿ ಮಾಡುವ ಉದ್ದೇಶ ಅವರದ್ದಾಗಿತ್ತು. ಆದರೆ, ಅವರು ಕಂಡಿದ್ದು ಮಾತ್ರ ಹೀನಾಯ ಸೋಲು.
ಬಾಲಿವುಡ್ನಲ್ಲಿ ‘ಭೂಲ್ ಭುಲಯ್ಯ 2’ ಹಾಗೂ ‘ಧಾಕಡ್’ ಸಿನಿಮಾ ಮೇ 20ರಂದು ಬಿಡುಗಡೆ ಆದವು. ‘ಭೂಲ್ ಭುಲಯ್ಯ 2’ ಮೊದಲ ದಿನ ಗಳಿಸಿದ್ದು ಬರೋಬ್ಬರಿ 14 ಕೋಟಿ ರೂಪಾಯಿ. ಆದರೆ, ಕಂಗನಾ ಸಿನಿಮಾ 50 ಲಕ್ಷ ರೂಪಾಯಿ ಗಳಿಸಿ ಮೊದಲ ದಿನದ ಆಟ ಮುಗಿಸಿದೆ.
ಇದನ್ನೂ ಓದಿ: ಕಂಗನಾ ರಣಾವತ್ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್; ಏನದು?
‘ಧಾಕಡ್’ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಈ ಮಧ್ಯೆ ವಿಮರ್ಶಕರು ಚಿತ್ರವನ್ನು ತೆಗಳಿದರು. ಇದರಿಂದ ಸಿನಿಮಾದ ಕಲೆಕ್ಷನ್ ಕುಗ್ಗಿದೆ. ಇಂದು (ಮೇ 21) ಹಾಗೂ ನಾಳೆ (ಮೇ 22) ಚಿತ್ರ ಒಂದು ಹಂತದವರೆಗೆ ಕಲೆಕ್ಷನ್ ಮಾಡಬಹುದು. ಆ ಬಳಿಕ ಸಿನಿಮಾ ಚಿತ್ರಮಂದಿರದಿಂದ ಕಾಲ್ಕೀಳುವುದು ಪಕ್ಕಾ ಎನ್ನಲಾಗುತ್ತಿದೆ. ಈ ಚಿತ್ರದಿಂದ ನಿರ್ಮಾಪಕರು ಕೈ ಸುಟ್ಟುಕೊಂಡಂತಾಗಿದೆ.
ಇದನ್ನೂ ಓದಿ: ‘ಧಾಕಡ್’ ರಿಲೀಸ್ಗೂ ಮುನ್ನ ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದ ಕಂಗನಾ ರಣಾವತ್
ಸಿನಿಮಾ ಸೋತರೂ ಕಂಗನಾ ಬಾಲಿವುಡ್ನ ಒಳಿತಿನ ಬಗ್ಗೆ ಚಿಂತೆ ಮಾಡಿದಂತಿದೆ. ‘ಭೂಲ್ ಭುಲಯ್ಯ 2’ ಗೆದ್ದಿರುವುದು ಮಂಕಾದ ಬಾಲಿವುಡ್ಗೆ ಹೊಸ ಚೈತನ್ಯ ತಂದುಕೊಟ್ಟಿದೆ. ಈ ಕಾರಣಕ್ಕೆ ಕಂಗನಾ ‘ಭೂಲ್ ಭುಲಯ್ಯ 2’ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಅವರ ಈ ನಡೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಕಂಗನಾಗೆ ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.