ಜಾನ್ವಿ ಕಪೂರ್​ ನಟಿ ಆಗೋದು ತಾಯಿ ಶ್ರೀದೇವಿಗೆ ಇಷ್ಟ ಇರಲಿಲ್ಲ; ಕಾರಣ ಏನು?

ಜಾನ್ವಿ ಕಪೂರ್​ ನಟಿ ಆಗೋದು ತಾಯಿ ಶ್ರೀದೇವಿಗೆ ಇಷ್ಟ ಇರಲಿಲ್ಲ; ಕಾರಣ ಏನು?
ಜಾನ್ವಿ ಕಪೂರ್, ಶ್ರೀದೇವಿ

ಜಾನ್ವಿ ಕಪೂರ್​ ನಟಿಸಿದ ಮೊದಲ ಸಿನಿಮಾ ರಿಲೀಸ್​ ಆಗೋಕಿಂತ ಮುಂಚೆಯೇ ಶ್ರೀದೇವಿ ವಿಧಿವಶರಾಗಿದ್ದು ನೋವಿನ ಸಂಗತಿ. ದೊಡ್ಡ ಪರದೆಯ ಮೇಲೆ ಮಗಳ ಚಿತ್ರವನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ.

TV9kannada Web Team

| Edited By: Madan Kumar

Mar 06, 2022 | 3:27 PM

ನಟಿ ಜಾನ್ವಿ ಕಪೂರ್​ (Janhvi Kapoor) ಅವರು ಚಿತ್ರರಂಗಕ್ಕೆ ಕಾಲಿಟ್ಟು ಕೆಲವೇ ವರ್ಷಗಳು ಕಳೆದಿವೆ. ಬಣ್ಣದ ಲೋಕದಲ್ಲಿ ಅವರಿನ್ನೂ ಭದ್ರವಾಗಿ ನೆಲೆ ಕಂಡುಕೊಳ್ಳುವುದು ಬಾಕಿ ಇದೆ. ಮೊದಲ ಸಿನಿಮಾ ‘ಧಡಕ್​’ ಮೂಲಕ ಯಶಸ್ಸು ಸಿಕ್ಕರೂ ಕೂಡ ನಂತರದ ದಿನಗಳಲ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಮಾಡಿದ ಸಿನಿಮಾಗಳು ಅಂದುಕೊಂಡ ರೀತಿಯಲ್ಲಿ ಕೈ ಹಿಡಿಯಲಿಲ್ಲ. ಅದೇನೇ ಇದ್ದರೂ ಜಾನ್ವಿ ಕಪೂರ್​ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗಿಲ್ಲ. ಇಂದು (ಮಾ.6) ಅವರ ಹುಟ್ಟುಹಬ್ಬ (Janhvi Kapoor Birthday). ಆ ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು, ಕುಟುಂಬದವರು ಜಾನ್ವಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಶ್ರೀದೇವಿ (Sridevi) ಮಗಳು ಎಂಬ ಕಾರಣಕ್ಕೆ ಜಾನ್ವಿ ಅವರಿಗೆ ಪ್ರೀತಿ ತೋರಿಸುವ ಒಂದು ದೊಡ್ಡ ವರ್ಗ ಇದೆ. ಆದರೆ ಅಸಲಿ ವಿಚಾರ ಏನೆಂದರೆ, ಜಾನ್ವಿ ಕಪೂರ್​ ಅವರು ಸಿನಿಮಾ ಜಗತ್ತಿಗೆ ಕಾಲಿಡುವುದು ಶ್ರೀದೇವಿಗೆ ಇಷ್ಟ ಇರಲಿಲ್ಲ. ಮಗಳು ಬೇರೆ ರೀತಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ಬಯಸಿದ್ದರು. ಆದರೆ ಆಗಿದ್ದೇ ಬೇರೆ. ಕಡೆಗೂ ಬಣ್ಣದ ಲೋಕದ ಸೆಳೆತದಿಂದ ಜಾನ್ವಿ ಕಪೂರ್​ ಅವರು ನಟಿಯಾಗಿಯೇ ವೃತ್ತಿಜೀವನ ಆಯ್ಕೆ ಮಾಡಿಕೊಂಡರು.

ಜಾನ್ವಿ ಕಪೂರ್​ ನಟಿಸಿದ ಮೊದಲ ಸಿನಿಮಾ ರಿಲೀಸ್​ ಆಗೋಕಿಂತ ಮುಂಚೆಯೇ ಶ್ರೀದೇವಿ ವಿಧಿವಶರಾಗಿದ್ದು ನೋವಿನ ಸಂಗತಿ. ದೊಡ್ಡ ಪರದೆಯ ಮೇಲೆ ಮಗಳ ಸಿನಿಮಾವನ್ನು ನೋಡಲು ಅವರಿಗೆ ಸಾಧ್ಯವಾಗಲಿಲ್ಲ. 2018ರ ಫೆ.24ರಂದು ಅವರು ದುಬೈನಲ್ಲಿ ಕೊನೆಯುಸಿರು ಎಳೆದರು. ಅದೇ ವರ್ಷ ಜುಲೈ 20ರಂದು ‘ಧಡಕ್​’ ಸಿನಿಮಾ ರಿಲೀಸ್​ ಆಯಿತು.

‘ಧಡಕ್​’ ಚಿತ್ರಕ್ಕೆ ಶಶಾಂಕ್​​ ಕೈತಾನ್​ ನಿರ್ದೇಶನ ಮಾಡಿದ್ದರು. ಜಾನ್ವಿಗೆ ಜೋಡಿಯಾಗಿ ಇಶಾನ್​ ಖಟ್ಟರ್​ ನಟಿಸಿದ್ದರು. ಮರಾಠಿಯ ‘ಸೈರಾಟ್​’ ಚಿತ್ರದ ಹಿಂದಿ ರಿಮೇಕ್​ ಆಗಿ ‘ಧಡಕ್​’ ಮೂಡಿಬಂತು. ನಿರ್ಮಾಣದ ಹೊಣೆಯನ್ನು ಹೊತ್ತಿದ್ದು ಖ್ಯಾತ ನಿರ್ಮಾಪಕ ಕರಣ್​ ಜೋಹರ್​. ಆ ಮೂಲಕ ಜಾನ್ವಿಯನ್ನು ಬಾಲಿವುಡ್​ಗೆ ಪರಿಚಯಿಸಿದ ಖ್ಯಾತಿ ಅವರಿಗೆ ಸಲುತ್ತದೆ.

ಶ್ರೀದೇವಿ ಮತ್ತು ಬೋನಿ ಕಪೂರ್​ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಪುತ್ರಿ ಜಾನ್ವಿ ಕಪೂರ್​, ಎರಡನೇ ಪುತ್ರಿ ಖುಷಿ ಕಪೂರ್​. ‘ನಾನು ಚಿತ್ರರಂಗಕ್ಕೆ ಬರುವುದು ಅಮ್ಮನಿಗೆ ಇಷ್ಟ ಇರಲಿಲ್ಲ. ಸಿನಿಮಾ ಲೋಕಕ್ಕೆ ನಾನು ಹೊಂದಿಕೊಳ್ಳಲು ಸಾಧ್ಯವಿಲ್ಲ ಅಂತ ಅವರು ಭಾವಿಸಿದ್ದರು. ತಂಗಿ ಖುಷಿ ಕಪೂರ್ ಚಿತ್ರರಂಗಕ್ಕೆ ಬರುವುದರ ಬಗ್ಗೆ ಅಮ್ಮನಿಗೆ ಯಾವುದೇ ಆತಂಕ ಇರಲಿಲ್ಲ. ನಾನು ತುಂಬ ಆರಾಮಾಗಿ ಜೀವನ ಸಾಗಿಸಲಿ ಅಂತ ಅವರು ಬಯಸಿದ್ದರು’ ಎಂದು ಈ ಹಿಂದೆ ವೋಗ್​ ಮ್ಯಾಗಜಿನ್​ಗೆ ನೀಡಿದ ಸಂದರ್ಶನದಲ್ಲಿ ಜಾನ್ವಿ ಕಪೂರ್​ ಹೇಳಿಕೊಂಡಿದ್ದರು.

ಖುಷಿ ಕಪೂರ್​ ಎಂಟ್ರಿಗೆ ಸಿದ್ಧವಾಗುತ್ತಿದೆ ವೇದಿಕೆ:

ಸ್ಟಾರ್​ ನಟ-ನಟಿಯರ ಮಕ್ಕಳ ಸಿನಿಮಾ ಎಂಟ್ರಿ ಬಗ್ಗೆ ಗಾಸಿಪ್​ಗಳು ಹರಡುವುದು ಸಹಜ. ಆದರೆ ಖುಷಿ ಕಪೂರ್​ ವಿಚಾರದಲ್ಲಿ ಕೇಳಿಬಂದಿರುವುದು ಗಾಸಿಪ್​ ಅಲ್ಲ. ಅವರ ತಂದೆ ಬೋನಿ ಕಪೂರ್​ ಅವರೇ ಖಚಿತ ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ಮಾಪಕನಾಗಿ ನಾನು ನನ್ನ ಅನುಭವಗಳ ಆಧಾರದಲ್ಲಿ ಅವರಿಗೆ ಸಲಹೆ ನೀಡುತ್ತೇನೆ. ಕಮರ್ಷಿಯಲ್​ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಆದರೆ ಅಂತಿಮ ನಿರ್ಧಾರ ಅವರದ್ದೇ ಆಗಿರಲಿದೆ’ ಎಂದು ಮಕ್ಕಳ ಸಿನಿಮಾ ಜರ್ನಿ ಬಗ್ಗೆ ಬೋನಿ ಕಪೂರ್​ ಮಾತನಾಡಿದ್ದಾರೆ.

ಇದನ್ನೂ ಓದಿ:

ಶ್ರೀದೇವಿ ಅವರ ಅಪರೂಪದ ಫೋಟೋ ಹಂಚಿಕೊಂಡ ಪತಿ ಬೋನಿ ಕಪೂರ್​

ಶ್ರೀದೇವಿ ಮಗಳ ಬಜಾರಿತನ ಹೇಗಿದೆ ನೋಡಿ; ವೈರಲ್​ ಆಯ್ತು ಜಾನ್ವಿ ಕಪೂರ್​ ಜಗಳದ ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada