ದೀಪಿಕಾಗೆ ಕೇಸರಿ ಬಣ್ಣದ ಬಿಕಿನಿ ನೀಡಿದ್ದು ಹೇಗೆ? ಕಡೆಗೂ ಮೌನ ಮುರಿದ ನಿರ್ದೇಶಕ ಸಿದ್ದಾರ್ಥ್ ಆನಂದ್
Pathaan Movie | Siddharth Anand: ಬಿಡುಗಡೆಗೂ ಮುನ್ನ ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ‘ಪಠಾಣ್’ ಸಿನಿಮಾದಲ್ಲಿ ಕೇಸರಿ ಬಿಕಿನಿ ದೃಶ್ಯಕ್ಕೆ ನಿರ್ದೇಶಕರು ಕತ್ತರಿ ಹಾಕಲಿಲ್ಲ. ಆ ಕುರಿತು ಸಿದ್ದಾರ್ಥ್ ಆನಂದ್ ಮಾತನಾಡಿದ್ದಾರೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾ (Pathaan Movie) ಸೂಪರ್ ಹಿಟ್ ಆಗಿದೆ. ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಸಿ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ. ಆದರೆ ಈ ಸಿನಿಮಾದ ಬಿಡುಗಡೆಗೂ ಮುನ್ನ ಪರಿಸ್ಥಿತಿ ಬೇರೆಯದೇ ರೀತಿ ಇತ್ತು. ‘ಪಠಾಣ್’ ಸಿನಿಮಾವನ್ನು ಒಂದು ವರ್ಗದ ನೆಟ್ಟಿಗರು ಬಹಿಷ್ಕಾರ ಮಾಡಲು ಮುಂದಾಗಿದ್ದರು. ಅದಕ್ಕೆ ಕಾರಣ ಆಗಿದ್ದು ದೀಪಿಕಾ ಪಡುಕೋಣೆ (Deepika Padukone) ಧರಿಸಿದ್ದ ಕೇಸರಿ ಬಣ್ಣ ಬಿಕಿನಿ. ಈ ಬಿಕಿನಿ ಧರಿಸಿ ‘ಬೇಷರಂ ರಂಗ್..’ ಎಂದು ದೀಪಿಕಾ ಹಾಡಿ ಕುಣಿದಿದ್ದನ್ನು ಕೆಲವು ಹಿಂದೂ ಪರ ಸಂಘಟನೆಗಳು ವಿರೋಧಿಸಿದ್ದವು. ಅಷ್ಟಕ್ಕೂ ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ಅವರು ದೀಪಿಕಾ ಪಡುಕೋಣೆಗೆ ಕೇಸರಿ ಬಣ್ಣದ ಬಿಕಿನಿ ಧರಿಸುವಂತೆ ಸೂಚಿಸಿದ್ದು ಯಾಕೆ? ಈ ಬಗ್ಗೆ ಈಗ ಅವರು ಮೌನ ಮುರಿದಿದ್ದಾರೆ.
ಸಿದ್ದಾರ್ಥ್ ಆನಂದ್ ಅವರು ಬಾಲಿವುಡ್ನಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ. ‘ವಾರ್’, ‘ಪಠಾಣ್’ ಸಿನಿಮಾಗಳಿಂದಾಗಿ ಅವರ ಖ್ಯಾತಿ ಹೆಚ್ಚಿದೆ. ಸಾಹಸಮಯ ಸಿನಿಮಾಗಳನ್ನು ಮಾಡುವಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ‘ನೂಸ್18 ರೈಸಿಂಗ್ ಇಂಡಿಯಾ ಸಮಿಟ್ 2023’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಾರ್ಥ್ ಆನಂದ್ ಅವರು ಬಿಕಿನಿ ಕಾಂಟ್ರವರ್ಸಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ‘ಪಠಾಣ್’ ಚಿತ್ರದಿಂದ ಶಾರುಖ್ ಗೆದ್ದಿದ್ದಕ್ಕೆ ಎಲ್ಲರಿಗೂ ಖುಷಿ ಆಗಿದ್ದೇಕೆ? ರಾಜ್ಕುಮಾರ್ ರಾವ್ ನೀಡಿದ ಉತ್ತರ ಇಲ್ಲಿದೆ
‘ನಾವು ಹಾಗೇ ಸುಮ್ಮನೆ ಕಾಸ್ಟ್ಯೂಮ್ ಸೆಲೆಕ್ಟ್ ಮಾಡಿದೆವು. ಆ ಬಗ್ಗೆ ಹೆಚ್ಚೇನೂ ಯೋಚಿಸಿರಲಿಲ್ಲ. ಆ ಬಣ್ಣ ತುಂಬ ಚೆನ್ನಾಗಿ ಕಾಣುತ್ತಿತ್ತು. ಸೂರ್ಯನ ಬೆಳಕು ಚೆನ್ನಾಗಿತ್ತು. ಹುಲ್ಲು ಹಚ್ಚ ಹಸಿರಾಗಿತ್ತು. ನೀರು ನೀಲಿಯಾಗಿ ಕಾಣುತ್ತಿತ್ತು. ಅದರ ನಡುವೆ ಕೇಸರಿ ಬಣ್ಣ ತುಂಬ ಚೆನ್ನಾಗಿ ಕಾಣಿಸುತ್ತಿತ್ತು. ತೆರೆ ಮೇಲೆ ಅದನ್ನು ನೋಡಿದಾಗ ನಮ್ಮ ಉದ್ದೇಶ ಕೆಟ್ಟದ್ದಾಗಿರಲಿಲ್ಲ ಎಂಬುದು ಪ್ರೇಕ್ಷಕರಿಗೆ ಅರ್ಥ ಆಗುತ್ತದೆ ಅಂತ ನಾವು ಅಂದುಕೊಂಡಿದ್ದೆವು’ ಎಂದು ಸಿದ್ದಾರ್ಥ್ ಆನಂದ್ ಹೇಳಿದ್ದಾರೆ.
ಇದನ್ನೂ ಓದಿ: ‘ಕಥೆಯಿಲ್ಲದ ವಿಡಿಯೋ ಗೇಮ್ ರೀತಿ ಇದೆ ಪಠಾಣ್’: ಪಾಕಿಸ್ತಾನದ ಮಂದಿಯಿಂದ ಕೇಳಿಬಂತು ಟೀಕೆ
ಬಿಡುಗಡೆಗೂ ಮುನ್ನ ಎಷ್ಟೇ ವಿರೋಧ ವ್ಯಕ್ತವಾದರೂ ಕೂಡ ‘ಪಠಾಣ್’ ಸಿನಿಮಾದಲ್ಲಿ ಕೇಸರಿ ಬಿಕಿನಿ ದೃಶ್ಯಕ್ಕೆ ನಿರ್ದೇಶಕರು ಕತ್ತರಿ ಹಾಕಲಿಲ್ಲ. ಅಂದುಕೊಂಡಂತೆಯೇ ಸಿನಿಮಾ ಬಿಡುಗಡೆ ಬಳಿಕ ಯಾವುದೇ ವಿವಾದ ಆಗಲಿಲ್ಲ. ಇದು ರಾಷ್ಟ್ರ ಭಕ್ತಿ ಕಥಾಹಂದರದ ಸಿನಿಮಾ ಆದ್ದರಿಂದ ಜನರು ಸಖತ್ ಬೆಂಬಲ ಸೂಚಿಸಿದರು. ಅಂತಿಮವಾಗಿ ‘ಪಠಾಣ್’ ಸಿನಿಮಾ ಗೆದ್ದು ಬೀಗಿತು. ಇಷ್ಟು ವರ್ಷಗಳ ಕಾಲ ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಅವರು ಈ ಚಿತ್ರದಿಂದ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.