Bholaa Collection: ಅಜಯ್ ದೇವಗನ್ ನಟನೆಯ ‘ಭೋಲಾ’ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?
Ajay Devgn | Bholaa Movie Box Office Collection: ಅಜಯ್ ದೇವಗನ್ ಅಭಿನಯದ ‘ಭೋಲಾ’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿಲ್ಲ. ವೀಕೆಂಡ್ನಲ್ಲಿ ಕಲೆಕ್ಷನ್ ಹೆಚ್ಚಾದರೆ ಮಾತ್ರ ನಿರ್ಮಾಪಕರಿಗೆ ಲಾಭ ಆಗಲಿದೆ.
ಇತ್ತೀಚೆಗೆ ರಿಮೇಕ್ ಸಿನಿಮಾಗಳಿಗೆ ಬಾಲಿವುಡ್ನಲ್ಲಿ ಭವಿಷ್ಯವಿಲ್ಲ ಎಂಬ ಮಾತಿದೆ. ಹಾಗಿದ್ದರೂ ಕೂಡ ರಿಮೇಕ್ ಪ್ರಯತ್ನಗಳು ಮುಂದುವರಿಯುತ್ತಲೇ ಇವೆ. 2022ರಲ್ಲಿ ನಟ ಅಜಯ್ ದೇವಗನ್ (Ajay Devgn) ಅವರು ‘ದೃಶ್ಯಂ 2’ ಸಿನಿಮಾವನ್ನು ರಿಮೇಕ್ ಮಾಡಿ ಭರ್ಜರಿ ಗೆಲುವು ಪಡೆದಿದ್ದರು. ಅದೇ ಭರವಸೆಯಲ್ಲಿ ಅವರು ತಮಿಳಿನ ‘ಕೈದಿ’ ಸಿನಿಮಾವನ್ನು ಹಿಂದಿಗೆ ‘ಭೋಲಾ’ (Bholaa) ಶೀರ್ಷಿಕೆಯಲ್ಲಿ ರಿಮೇಕ್ ಮಾಡಿದರು. ಈ ಸಿನಿಮಾ ಮಾರ್ಚ್ 30ರಂದು ರಿಲೀಸ್ ಆಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ (Box Office Collection) ಮಾಡಿಲ್ಲ. ಮೊದಲ ದಿನ ಈ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಸಂಗ್ರಹ ಆಗಿರುವುದು 11.20 ಕೋಟಿ ರೂಪಾಯಿ ಮಾತ್ರ. ಅಜಯ್ ದೇವಗನ್ ರೀತಿಯ ಸ್ಟಾರ್ ನಟರ ಚಿತ್ರಕ್ಕೆ ಇದು ಹೇಳಿಕೊಳ್ಳುವಂತಹ ಮೊತ್ತ ಅಲ್ಲ.
‘ಭೋಲಾ’ ಸಿನಿಮಾ 3ಡಿ ಅವತರಣಿಕೆಯಲ್ಲಿ ಮೂಡಿಬಂದಿದೆ. ತಮಿಳಿನ ‘ಕೈದಿ’ ಸಿನಿಮಾದ ಕಥೆಯನ್ನು ಇಟ್ಟುಕೊಂಡು ಹಿಂದಿ ನೇಟಿವಿಟಿಗೆ ತಕ್ಕಂತೆ ಕೊಂಚ ಬದಲಾವಣೆ ಮಾಡಿಕೊಂಡು ಅಜಯ್ ದೇವಗನ್ ‘ಭೋಲಾ’ ಸಿನಿಮಾ ಮಾಡಿದ್ದಾರೆ. ಮೊದಲ ದಿನ ಅಡ್ವಾನ್ಸ್ ಬುಕಿಂಗ್ನಲ್ಲಿ ನೀರಸ ವಾತಾವರಣ ಇತ್ತು. ಸಂಜೆ ವೇಳೆಗೆ ನೇರವಾಗಿ ಚಿತ್ರಮಂದಿರಕ್ಕೆ ಕಾಲಿಟ್ಟವರ ಸಂಖ್ಯೆ ಹೆಚ್ಚಿತು. ಹಾಗೂ-ಹೀಗೂ ಮೊದಲ ದಿನ 11.20 ಕೋಟಿ ರೂಪಾಯಿ ಗಳಿಸುವಲ್ಲಿ ‘ಭೋಲಾ’ ಯಶಸ್ವಿ ಆಗಿದೆ.
ಇದನ್ನೂ ಓದಿ: Bholaa: ‘ನೀವು ಪದೇಪದೇ ಟಬು ಜತೆ ಸಿನಿಮಾ ಮಾಡೋದು ಯಾಕೆ?’: ನೇರ ಪ್ರಶ್ನೆಗೆ ಅಜಯ್ ದೇವಗನ್ ಉತ್ತರ
ಸಾಮಾನ್ಯವಾಗಿ ಹೊಸ ಸಿನಿಮಾಗಳು ಶುಕ್ರವಾರ ರಿಲೀಸ್ ಆಗುವುದು ವಾಡಿಕೆ. ಆದರೆ ರಾಮನವಮಿ ಪ್ರಯುಕ್ತ ಗುರುವಾರವೇ (ಮಾರ್ಚ್ 30) ‘ಭೋಲಾ’ ತೆರೆಕಂಡಿತು. ತೆಲುಗಿನಲ್ಲಿ ‘ದಸರಾ’ ಹಾಗೂ ಕನ್ನಡದಲ್ಲಿ ‘ಹೊಯ್ಸಳ’ ಚಿತ್ರಗಳು ಕೂಡ ಇದೇ ದಿನಾಂಕದಲ್ಲಿ ಬಿಡುಗಡೆ ಆಗಿವೆ. ಹಾಗಾಗಿ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ಜೋರಾಗಿದೆ. ವೀಕೆಂಡ್ನಲ್ಲಿ ‘ಭೋಲಾ’ ಚಿತ್ರಕ್ಕೆ ಉತ್ತಮ ಕಲೆಕ್ಷನ್ ಆದರೆ ಮಾತ್ರ ಹಾಕಿದ ಬಂಡವಾಳ ವಾಪಸ್ ಬರಲಿದೆ.
#Bholaa puts up a decent score on Day 1 [#RamNavmi]… Healthy footfalls during spot bookings – towards evening shows specifically – compensate for the low turnout in morning + noon shows… Thu ₹ 11.20 cr. #India biz.
Day 1 biz tilts more towards mass centres, with #Mumbai… pic.twitter.com/dbQ4M0juh4
— taran adarsh (@taran_adarsh) March 31, 2023
ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವವರಿಗೆ ‘ಭೋಲಾ’ ಸಿನಿಮಾ ಹಿಡಿಸಲಿದೆ ಎಂಬ ಅಭಿಪ್ರಾಯ ವಿಮರ್ಶಕರಿಂದ ವ್ಯಕ್ತವಾಗಿದೆ. ಉಳಿದಂತೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಕೆಲವು ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗಿಲ್ಲ. ವೀಕೆಂಡ್ ಮತ್ತು ಸೋಮವಾರದ ವೇಳೆಗೆ ‘ಭೋಲಾ’ ಹೇಗೆ ಕಲೆಕ್ಷನ್ ಮಾಡಲಿದೆ ಎಂಬುದರ ಆಧಾರದ ಮೇಲೆ ಇದರ ಭವಿಷ್ಯ ನಿರ್ಧಾರ ಆಗಲಿದೆ.
ಈ ಚಿತ್ರದಲ್ಲಿ ಟಬು, ಸಂಜಯ್ ಮಿಶ್ರಾ, ಗಜರಾಜ್ ರಾವ್ ಮುಂತಾದವರು ನಟಿಸಿದ್ದಾರೆ. ಕನ್ನಡಿಗ ರವಿ ಬಸ್ರೂರು ಅವರು ‘ಭೋಲಾ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿತ್ತು. ಆದರೆ ಅದೇ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.