ರಾಘವ್ ಚಡ್ಡಾ ಬಿಜೆಪಿ ಸೇರಿದ್ದಕ್ಕೆ ಟ್ರೋಲ್ ಆಗುತ್ತಿರುವ ಪತ್ನಿ ಪರಿಣೀತಿ ಚೋಪ್ರಾ
ರಾಘವ್ ಚಡ್ಡಾ ಅವರು ಬಿಜೆಪಿ ಸೇರಿದ ಬಳಿಕ ನೆಟ್ಟಿಗರು ಸಖತ್ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಟ್ರೋಲಿಗರ ಖಾರದ ಮಾತುಗಳಿಂದ ತಪ್ಪಿಸಿಕೊಳ್ಳಲು ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾಗೂ ಸಾಧ್ಯವಾಗಿಲ್ಲ. ‘ನಿಮ್ಮ ಗಂಡನನ್ನ ನೋಡಿ ನೀವು ನಟನೆ ಕಲಿಯಿರಿ’ ಎಂದು ಜನರು ಕಮೆಂಟ್ ಮಾಡಿದ್ದಾರೆ.

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ (BJP) ಸೇರಿರುವುದು ಭಾರಿ ಚರ್ಚೆಗೆ ಕಾರಣ ಆಗಿದೆ. ಅವರು ಬಿಜೆಪಿ ಸೇರಿದ 24 ಗಂಟೆಗಳ ಒಳಗೆ, ಇನ್‌ಸ್ಟಾಗ್ರಾಮ್ ಫಾಲೋವರ್‌ಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಈವರೆಗೂ 20 ಲಕ್ಷಕ್ಕೂ ಅಧಿಕ ಜನರು ರಾಘವ್ ಚಡ್ಡಾ (Raghav Chadha) ಅವರನ್ನು ಅನ್ಫಾಲೋ ಮಾಡಿದ್ದಾರೆ. ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ, ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾ (Parineeti Chopra) ಅವರನ್ನು ಕೂಡ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಪರಿಣೀತಿ ಚೋಪ್ರಾ ಅವರ ಪೋಸ್ಟ್ ತುಂಬ ನೆಗೆಟಿವ್ ಕಮೆಂಟ್ಗಳೇ ತುಂಬಿ ಹೋಗಿವೆ.
ರಾಘವ್ ಚಡ್ಡಾ ಅವರು ಬಿಜೆಪಿ ಸೇರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಸೇರುವ ಅವರ ನಿರ್ಧಾರವನ್ನು ಜನರು ಕಟುವಾಗಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ, ಅವರು ಈ ಹಿಂದೆ ಬಿಜೆಪಿಯನ್ನು ಟೀಕಿಸಿದ್ದ ಹಳೆಯ ವಿಡಿಯೋಗಳು ಮತ್ತು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಅವರ ಈ ರಾಜಕೀಯ ಬದಲಾವಣೆಯ ಕುರಿತಾದ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ಅದೇ ರೀತಿ, ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾ ಅವರ ಒಂದು ಹಳೇ ವಿಡಿಯೋ ಕೂಡ ವೈರಲ್ ಆಗುತ್ತಿದೆ. ‘ನಾನು ಎಂದಿಗೂ ರಾಜಕಾರಣಿಯನ್ನು ಮದುವೆ ಆಗಲ್ಲ’ ಎಂದು ಪರಿಣೀತಿ ಚೋಪ್ರಾ ಅವರು ಹೇಳಿದ್ದರು. ಆದರೆ ಆ ಮಾತನ್ನು ಮರೆತು ಅವರು ಮದುವೆ ಆಗಿದ್ದೇ ರಾಜಕಾರಣಿ ರಾಘವ್ ಚಡ್ಡಾ ಅವರನ್ನು. ಹಾಗಾಗಿ, ಮಾತು ಬದಲಿಸುವುದರಲ್ಲಿ ಗಂಡ-ಹೆಂಡತಿ ಇಬ್ಬರೂ ಒಂದೇ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
View this post on Instagram
ಇನ್ಸ್ಟಾಗ್ರಾಮ್ನಲ್ಲಿ ಪರಿಣೀತಿ ಚೋಪ್ರಾ ಅವರು ಹಂಚಿಕೊಂಡ ಎಲ್ಲ ಪೋಸ್ಟ್ಗಳಿಗೂ ನೆಗೆಟಿವ್ ಕಮೆಂಟ್ಗಳು ಬರುತ್ತಿವೆ. ‘ನಿಮಗಿಂತ ನಿಮ್ಮ ಗಂಡನೇ ಅತ್ಯುತ್ತಮ ನಟ. ಅವರಿಂದ ನೀವು ನಟನೆ ಕಲಿಯಿರಿ’ ಎಂದು ಟೀಕಿಸಲಾಗುತ್ತಿದೆ. ರಾಘವ್ ಚಡ್ಡಾ ಅವರು ಸೀರೆ ಧರಿಸಿ, ಬಿಜೆಪಿ ಕಚೇರಿಯಲ್ಲಿ ಟೀ, ಸಮೋಸಾ ನೀಡುತ್ತಿರುವ ರೀತಿಯಲ್ಲಿ ಎಡಿಟ್ ಮಾಡಿದ ಫೋಟೋವನ್ನು ಕೂಡ ಕೆಲವರು ಕಮೆಂಟ್ ಸೆಕ್ಷನ್ನಲ್ಲಿ ಹಾಕಿದ್ದಾರೆ.
ಇದನ್ನೂ ಓದಿ: ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾ ಬಿಕಿನಿ ಫೋಟೋ ವೈರಲ್; ಅಸಲಿಯತ್ತು ಏನು?
‘ರಾಘವ್ ಚಡ್ಡಾ ಅಲ್ಲ, ರಾಘವ್ ಚಡ್ಡಿ (ಆರ್ಎಸ್ಎಸ್). ಅವರ ಮುಖವಾಡ ಈಗ ಬಯಲಾಗಿದೆ’ ಎಂದು ಕೂಡ ಹಲವರು ಟೀಕಿಸಿದ್ದಾರೆ. ‘ಅನಕ್ಷರಸ್ಥ ಗುಂಡಾಗಳ ಪಕ್ಷವೇ ಬಿಜೆಪಿ. ಅದು ವಾಷಿಂಗ್ ಮಷಿನ್ ಪಾರ್ಟಿ’ ಎಂದು ರಾಘವ್ ಚಡ್ಡಾ ಈ ಮೊದಲು ನೀಡಿದ ಹೇಳಿಕೆಗಳನ್ನು ಜನರು ಈಗ ಅವರಿಗೆ ನೆನಪಿಸುತ್ತಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಪರಿಣೀತಿ ಚೋಪ್ರಾ ಅವರ ಪೋಸ್ಟ್ಗಳಲ್ಲಿ ಕಮೆಂಟ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




