‘ರಾಮಾಯಣ’ ಸಿನಿಮಾಗೆ ಅಮೆರಿಕದಲ್ಲಿ ‘ಪಿಜಿ 13’ ಪ್ರಮಾಣಪತ್ರ: ಚಿತ್ರದ ಅವಧಿ 3 ಗಂಟೆ 15 ನಿಮಿಷ
ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರು ನಟಿಸಿರುವ ‘ರಾಮಾಯಣ’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಈ ಸಿನಿಮಾವನ್ನು ವಿದೇಶದಲ್ಲಿಯೂ ಅದ್ದೂರಿಯಾಗಿ ರಿಲೀಸ್ ಮಾಡಲಾಗುತ್ತದೆ. ಅದಕ್ಕಾಗಿ ಅಮೆರಿಕದಲ್ಲಿ ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿನಿಮಾದ ಅವಧಿ ಎಷ್ಟು ಎಂಬ ಬಗ್ಗೆಯೂ ಈಗ ಮಾಹಿತಿ ಸಿಕ್ಕಿದೆ.

ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಈ ಚಿತ್ರದ ಅಂತಾರಾಷ್ಟ್ರೀಯ ಟ್ರೇಲರ್ ಅನಾವರಣಗೊಳ್ಳುತ್ತಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಬಹುನಿರೀಕ್ಷಿತ ಪೌರಾಣಿಕ ಚಿತ್ರವು ಚಿತ್ರಮಂದಿರಗಳಿಗೆ ಬರುವ ಮುನ್ನವೇ ಹಲವು ವಿಚಾರಗಳಿಂದ ಸುದ್ದಿಯಲ್ಲಿದೆ. ಇದೀಗ ವಿದೇಶದಲ್ಲಿ ಲಭಿಸಿರುವ ಸೆನ್ಸಾರ್ ಪ್ರಮಾಣಪತ್ರದ ಮೂಲಕ ಸಿನಿಮಾದ ಅವಧಿ ಹಾಗೂ ವಯಸ್ಸಿನ ಮಿತಿಯ ರೇಟಿಂಗ್ ಮಾಹಿತಿ ಹೊರಬಿದ್ದಿದೆ.
ಅಮೆರಿಕದ ‘ಮೋಷನ್ ಪಿಕ್ಚರ್ ಅಸೋಸಿಯೇಷನ್’ ಸಂಸ್ಥೆಯು ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರಕ್ಕೆ ಪಿಜಿ-13 ರೇಟಿಂಗ್ ನೀಡಿದೆ. ಅಂದರೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ಸಿನಿಮಾವನ್ನು ಪೋಷಕರ ಮಾರ್ಗದರ್ಶನದೊಂದಿಗೆ ವೀಕ್ಷಿಸುವುದು ಸೂಕ್ತ ಎಂದರ್ಥ. ಭಾರತದ ‘U/A’ ಪ್ರಮಾಣಪತ್ರವನ್ನು ಇದಕ್ಕೆ ಹೋಲಿಸಬಹುದಾಗಿದೆ.
ಚಿತ್ರದಲ್ಲಿರುವ ತೀವ್ರ ಸ್ವರೂಪದ ಆ್ಯಕ್ಷನ್ ದೃಶ್ಯಗಳು, ಯುದ್ಧದ ಸನ್ನಿವೇಶಗಳು ಹಾಗೂ ರಕ್ತಸಿಕ್ತವಾದ ಕೆಲವು ಭೀಕರ ದೃಶ್ಯಗಳ ಕಾರಣದಿಂದ ‘ಮೋಷನ್ ಪಿಕ್ಚರ್ ಅಸೋಸಿಯೇಷನ್’ ಸಂಸ್ಥೆಯು ಈ ರೇಟಿಂಗ್ ನೀಡಿದೆ. ಈ ಮೂಲಕ ಮಹಾಕಾವ್ಯದ ಯುದ್ಧ ದೃಶ್ಯಗಳು ಎಷ್ಟರ ಮಟ್ಟಿಗೆ ಅದ್ಧೂರಿಯಾಗಿ ಮತ್ತು ಗಂಭೀರವಾಗಿ ಮೂಡಿಬಂದಿರಲಿವೆ ಎಂಬುದರ ಮುನ್ಸೂಚನೆ ಸಿಕ್ಕಂತಾಗಿದೆ.
ಚಿತ್ರದ ಅವಧಿಯ ಬಗ್ಗೆಯೂ ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ‘ಐಮ್ಯಾಕ್ಸ್’ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಸಿನಿಮಾದ ಒಟ್ಟು ಅವಧಿ 3 ಗಂಟೆ 15 ನಿಮಿಷಗಳು. ಆದರೆ ಇಂಗ್ಲಿಷ್ ಭಾಷೆಯ ಆವೃತ್ತಿಯು ಕೊಂಚ ಚಿಕ್ಕದಾಗಿದ್ದು, ಸುಮಾರು 2 ಗಂಟೆ 45 ನಿಮಿಷಗಳ ಕಾಲ ಇರಲಿದೆ ಎಂದು ಟ್ರೇಡ್ ಮೂಲಗಳು ತಿಳಿಸಿವೆ. ಚಿತ್ರತಂಡದಿಂದ ಈ ಅವಧಿಯ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಜಟಾಯು ಪಾತ್ರದಲ್ಲಿ ಅನುಪಮ್ ಖೇರ್; ಪೋಸ್ಟರ್ ಬಿಡುಗಡೆ
ಒಂದು ವೇಳೆ ಈ 3 ಗಂಟೆ 15 ನಿಮಿಷಗಳ ಅವಧಿ ಖಚಿತವಾದರೆ, ಇದು ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ 3 ಗಂಟೆಗೂ ಹೆಚ್ಚು ಅವಧಿಯ ಎರಡನೇ ಸಿನಿಮಾವಾಗಲಿದೆ. ಈ ಹಿಂದೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾ 3 ಗಂಟೆ 21 ನಿಮಿಷಗಳ ಸುದೀರ್ಘ ಅವಧಿಯನ್ನು ಹೊಂದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




