Ratan Raajputh: ‘ನನ್ನ ಜತೆ ಮಲಗಿದ್ರೆ ಮಾತ್ರ ಕೆಲಸ ಕೊಡ್ತೀನಿ, ಮಗಳಾದ್ರೂ ಸರಿ’ ಎಂದಿದ್ದ ನಿರ್ಮಾಪಕ; ಕಹಿ ಸತ್ಯ ಹೇಳಿದ ನಟಿ
Casting Couch | Me Too: ‘ನೀವು ನನ್ನ ತಂದೆಯ ಸಮಾನರು. ನಿಮ್ಮನ್ನು ನಾನು ಗೌರವಿಸುತ್ತೇನೆ’ ಎಂದು ನಟಿ ರತನ್ ರಾಜಪೂತ್ ಹೇಳಿದ್ದರು. ಆಗ ಆ ವ್ಯಕ್ತಿಗೆ ಕೋಪ ಬಂದಿತ್ತು.
ಎಲ್ಲ ಭಾಷೆಯ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ (Casting Couch) ಇರುವ ಬಗ್ಗೆ ಈಗಾಗಲೇ ಅನೇಕ ನಟಿಯರು ಬಾಯಿಬಿಟ್ಟಿದ್ದಾರೆ. ಎಷ್ಟೋ ಮಹಿಳೆಯರು ಈ ಬಗ್ಗೆ ಮಾತನಾಡದೇ ಮೌನವಾಗಿ ಉಳಿದಿದ್ದೂ ಉಂಟು. ಇನ್ನೂ ಕೆಲವರು ತುಂಬ ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಮೀಟೂ (Me Too) ಆಂದೋಲನ ಶುರುವಾದ ಬಳಿಕ ಕಾಸ್ಟಿಂಗ್ ಕೌಚ್ನ ಅನೇಕ ಕಹಿ ಸತ್ಯಗಳ ಹೊರಬಿದ್ದಿವೆ. ಸಾಕಷ್ಟು ಜನರ ಮುಖವಾಡ ಕಳಚಿದೆ. ನಟಿ ರತನ್ ರಾಜಪೂತ್ (Ratan Raajputh) ಅವರು ಈಗ ಕೆಲವು ಶಾಕಿಂಗ್ ವಿಚಾರಗಳನ್ನು ತೆರೆದಿಟ್ಟದ್ದಾರೆ. ಚಿತ್ರರಂಗದಲ್ಲಿ ಕೆಲಸ ಕೇಳಿಕೊಂಡು ಬಂದಾಗ ನಿರ್ಮಾಪಕನೊಬ್ಬ ನಡೆದುಕೊಂಡ ರೀತಿ ನೋಡಿ ರತನ್ ಅವರಿಗೆ ಆಘಾತ ಉಂಟಾಗಿತ್ತು. ಆ ಘಟನೆಯ ಬಗ್ಗೆ ಅವರು ವಿವರಣೆ ನೀಡಿದ್ದಾರೆ.
ಕಿರುತೆರೆಯಲ್ಲಿ ನಟಿ ರತನ್ ರಾಜಪೂತ್ ಫೇಮಸ್. ಹಿಂದಿಯ ಒಂದಷ್ಟು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಹಿಂದಿ ಬಿಗ್ ಬಾಸ್ ಸೀಸನ್ 7ರಲ್ಲಿ ಅವರು ಸ್ಪರ್ಧಿಸಿದ್ದರು. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಅವರು ಹೊಂದಿದ್ದಾರೆ. ಮೂಲತಃ ಬಿಹಾರದವರಾದ ರತನ್ ಅವರು ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿಂದ ಒಂದಷ್ಟು ವರ್ಷಗಳ ಹಿಂದೆ ಮುಂಬೈಗೆ ಬಂದಿದ್ದರು. ಆಗ ಅವರಿಗೆ ಕೆಟ್ಟ ಅನುಭವ ಆಗಿತ್ತು.
14 ವರ್ಷಗಳ ಹಿಂದಿನ ಘಟನೆ. ರತನ್ ಆಗಷ್ಟೇ ಮುಂಬೈಗೆ ಬಂದಿದ್ದರು. 60-65 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಅವರಿಗೆ ಅವಮಾನ ಮಾಡಿದ್ದ. ‘ನಿನ್ನ ಕೂದಲು, ಚರ್ಮ ಹಾಗೂ ಬಟ್ಟೆ ಸರಿಯಿಲ್ಲ. ಅದನ್ನೆಲ್ಲ ಸರಿ ಮಾಡಿ ನಿನಗೆ ಬೇರೆ ಲುಕ್ ನೀಡಲು 2ರಿಂದ ಎರಡೂವರೆ ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಅಷ್ಟು ಹಣವನ್ನು ನಿನಗಾಗಿ ನಾನು ಏಕೆ ಖರ್ಚು ಮಾಡಲಿ? ಖರ್ಚು ಮಾಡಬೇಕು ಎಂಬುದಾದರೆ ನೀನು ನನ್ನನ್ನು ಗಾಡ್ ಫಾದರ್ ಮಾಡಿಕೊಳ್ಳಬೇಕು. ನನ್ನ ಜೊತೆ ಫ್ರೆಂಡ್ ರೀತಿ ಇರಬೇಕು’ ಅಂತ ಆತ ಹೇಳಿದ್ದ ಎಂಬುದನ್ನು ರತನ್ ಈಗ ಬಹಿರಂಗ ಪಡಿಸಿದ್ದಾರೆ.
ತಂದೆಯ ವಯಸ್ಸಿನ ವ್ಯಕ್ತಿಯ ಬಾಯಿಂದ ಈ ರೀತಿ ಮಾತುಗಳನ್ನು ಕೇಳಿಸಿಕೊಂಡಿದ್ದಕ್ಕೆ ರತನ್ ಅವರಿಗೆ ಶಾಕ್ ಆಗಿತ್ತು. ‘ನೀವು ನನ್ನ ತಂದೆಯ ಸಮಾನರು. ನಿಮ್ಮನ್ನು ನಾನು ಗೌರವಿಸುತ್ತೇನೆ’ ಎಂದು ರತನ್ ಹೇಳಿದ್ದರು. ಆಗ ಆ ವ್ಯಕ್ತಿಗೆ ಕೋಪ ಬಂತು. ‘ನನ್ನ ಮಗಳು ನಟಿಯಾದರೂ ಕೂಡ ನಾನು ಆಕೆಯ ಜೊತೆ ಮಲಗುತ್ತೇನೆ’ ಎಂದು ಆ ನೀಚ ನಿರ್ಮಾಪಕ ಹೇಳಿದ್ದ ಎಂಬುದನ್ನು ನಟಿ ರತನ್ ರಾಜಪೂತ್ ಈಗ ಬಾಯಿಬಿಟ್ಟಿದ್ದಾರೆ.
‘ಇದನ್ನು ಕೇಳಿ ನನಗೆ ಆಘಾತ ಆಯಿತು. ಕೂಡಲೇ ಅಲ್ಲಿಂದ ನಾನು ಹೊರಟುಬಂದೆ. ಆ ವ್ಯಕ್ತಿ ನನಗೆ ಏನೂ ಮಾಡಲಿಲ್ಲ. ಆದರೆ ಆತನ ಮಾತುಗಳು ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿದವು. ಒಂದು ತಿಂಗಳ ಕಾಲ ನಾನು ಯಾರನ್ನೂ ಭೇಟಿ ಮಾಡಲಿಲ್ಲ’ ಎಂದು ರತನ್ ರಾಜಪೂತ್ ಹೇಳಿದ್ದಾರೆ.
ರತನ್ ರಾಜಪೂತ್ ಬಹಿರಂಗ ಮಾಡಿರುವ ಈ ವಿಚಾರಗಳನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.