Aishwarya Rai: ವೇದಿಕೆ ಮೇಲೆ ಗುರು ಮಣಿರತ್ನಂ ಕಾಲಿಗೆ ನಮಸ್ಕಾರ ಮಾಡಿದ ಐಶ್ವರ್ಯಾ ರೈ; ವಿಡಿಯೋ ವೈರಲ್
Mani Ratnam | Viral Video: ‘ನನಗೆ ಪೊನ್ನಿಯಿನ್ ಸೆಲ್ವನ್ ಚಿತ್ರ ಯಾಕೆ ವಿಶೇಷ ಎಂದರೆ ಇದಕ್ಕೆ ನಿರ್ದೇಶನ ಮಾಡಿರುವುದು ಮಣಿರತ್ನಂ. ಇಂಥ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಐಶ್ವರ್ಯಾ ರೈ ಹೇಳಿದ್ದಾರೆ.
ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಬಗ್ಗೆ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಎಲ್ಲಿಲ್ಲದ ಗೌರವ. ಅವರು ನಟಿಸಿದ ಮೊದಲ ಚಿತ್ರ ‘ಇರುವರ್’ಗೆ ನಿರ್ದೇಶನ ಮಾಡಿದ್ದೇ ಮಣಿರತ್ನಂ. ಆ ಸಿನಿಮಾ ತೆರೆಕಂಡಿದ್ದು 1997ರಲ್ಲಿ. ಆ ನಂತರ ಐಶ್ವರ್ಯಾ ರೈ (Aishwarya Rai) ಹಿಂದಿರುಗಿ ನೋಡಲೇ ಇಲ್ಲ. ಬ್ಯಾಕ್ ಟು ಬ್ಯಾಕ್ ಯಶಸ್ಸು ಗಳಿಸುತ್ತ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮೆರೆದರು. ಈಗ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಚಿತ್ರದಲ್ಲಿ ಐಶ್ವರ್ಯಾ ರೈ ಮತ್ತು ಮಣಿರತ್ನಂ ಅವರು ಮತ್ತೆ ಜೊತೆಯಾಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದ ವೇಳೆ ಮಣಿರತ್ನಂ ಕಾಲಿಗೆ ಐಶ್ವರ್ಯಾ ನಮಸ್ಕರಿಸಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.
‘ಪೊನ್ನಿಯಿನ್ ಸೆಲ್ವನ್’ ಚಿತ್ರ ಸೆಪ್ಟೆಂಬರ್ 30ರಂದು ಬಿಡುಗಡೆ ಆಗುತ್ತಿದೆ. ತಮಿಳಿನ ಈ ಸಿನಿಮಾ ಹಿಂದಿ, ಕನ್ನಡ, ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೆ ಡಬ್ ಆಗಿ ತೆರೆಕಾಣುತ್ತಿದೆ. ಆ ಕಾರಣದಿಂದ ಬೇರೆ ಬೇರೆ ನಗರಗಳಿಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಸೋಮವಾರ (ಸೆ.26) ದೆಹಲಿಯಲ್ಲಿ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಗುರು ಮಣಿರತ್ನಂ ಬಗ್ಗೆ ಮಾತನಾಡಿದರು.
ಮಣಿರತ್ನಂ ಜೊತೆಗೆ ಐಶ್ವರ್ಯಾ ರೈ ಬಚ್ಚನ್ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದು. ಈ ಹಿಂದೆ ‘ಇರುವರ್’, ‘ಗುರು’ ಮತ್ತು ‘ರಾವಣ್’ ಸಿನಿಮಾಗಳಲ್ಲಿ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದರು. ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಜಯಂ ರವಿ, ಚಿಯಾನ್ ವಿಕ್ರಮ್, ತ್ರಿಷಾ ಕೃಷ್ಣನ್, ಕಾರ್ತಿ, ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ. ಎರಡು ಭಾಗದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈಗ ಮೊದಲ ಭಾಗ ರಿಲೀಸ್ ಆಗುತ್ತಿದೆ. ಕಲ್ಕಿ ಕೃಷ್ಣಮೂರ್ತಿ ಬರೆದ ‘ಪೊನ್ನಿಯಿನ್ ಸೆಲ್ವನ್’ ಕೃತಿಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ.
View this post on Instagram
‘ಈ ರೀತಿಯ ಅನೇಕ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅದೃಷ್ಟ ನನ್ನದಾಗಿತ್ತು. ಅವುಗಳ ನಡುವೆ ಈ ಚಿತ್ರ ಯಾಕೆ ವಿಶೇಷ ಎಂದರೆ ಇದಕ್ಕೆ ನಿರ್ದೇಶನ ಮಾಡಿರುವುದು ಮಣಿರತ್ನಂ. ಅವಕಾಶ ನೀಡಿದ್ದಾಗಿ ಧನ್ಯವಾದಗಳು’ ಎಂದು ಐಶ್ವರ್ಯಾ ರೈ ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆ ಚೆನ್ನೈನಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಾಗ ರಜನಿಕಾಂತ್ ಅವರು ಮುಖ್ಯ ಅಥಿತಿಯಾಗಿ ಬಂದಿದ್ದರು. ಆಗ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಐಶ್ವರ್ಯಾ ರೈ ವಿನಯವಂತಿಕೆ ಮೆರೆದಿದ್ದರು. ಆ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:40 pm, Tue, 27 September 22