ಗುಂಡಿನ ದಾಳಿ ಕೇಸ್​: ಯಾರ ಮೇಲೆ ಅನುಮಾನ ಇದೆ ಎಂಬುದು ತಿಳಿಸಿದ ಸಲ್ಮಾನ್​ ಖಾನ್​

ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಅವರ ಅಭಿಮಾನಿಗಳಿಗೆ ಆತಂಕ ಆಯಿತು. ಈ ಕೇಸ್​ಗೆ ಸಂಬಂಧಿಸಿದಂತೆ ಪೊಲೀಸರು ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಅದರ ವಿವರಗಳು ಲಭ್ಯವಾಗಿವೆ. ಲಾರೆನ್ಸ್​ ಬಿಷ್ಣೋಯ್​ ಗ್ಯಾಂಗ್​ ಬಗ್ಗೆ ಹೇಳಿಕೆಯಲ್ಲಿ ಸಲ್ಮಾನ್​ ಖಾನ್​ ಅವರು ಪ್ರಸ್ತಾಪಿಸಿದ್ದಾರೆ. ಈ ಮೊದಲು ನಡೆದಿದ್ದ ಕೊಲೆ ಪ್ರಕರಣಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಗುಂಡಿನ ದಾಳಿ ಕೇಸ್​: ಯಾರ ಮೇಲೆ ಅನುಮಾನ ಇದೆ ಎಂಬುದು ತಿಳಿಸಿದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​, ಗ್ಯಾಲಕ್ಸಿ ಅಪಾರ್ಟ್​ಮೆಂಟ್​
Follow us
|

Updated on: Jul 24, 2024 | 6:14 PM

ಕೆಲವು ತಿಂಗಳ ಹಿಂದೆ ನಟ ಸಲ್ಮಾನ್​ ಖಾನ್​ ಅವರ ಮನೆ ಮೇಲೆ ಗುಂಡಿನ ದಾಳಿ ಆಯಿತು. ಏಪ್ರಿಲ್ 14ರಂದು ನಸುಕಿನ ವೇಳೆ ಬಂದ ಇಬ್ಬರು ಕಿಡಿಗೇಡಿಗಳು ಸಲ್ಲು ಮನೆ ಮೇಲೆ ಗುಂಡು ಹಾರಿಸಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್​ ಖಾನ್​ ಅವರು ಈವರೆಗೂ ಸಾರ್ವಜನಿಕವಾಗಿ ಮಾತನಾಡಿಲ್ಲ. ಈಗ ಅವರ ಹೇಳಿಕೆಯ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಪೊಲೀಸರ ತನಿಖೆ ವೇಳೆ ಸಲ್ಮಾನ್​ ಖಾನ್​ ನೀಡಿದ ಹೇಳಿಕೆಯ ಪ್ರತಿ ಲಭ್ಯವಾಗಿದ್ದು, ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾದ ಅಂಶಗಳ ಬಗ್ಗೆ ಮಾಹಿತಿ ಬಹಿರಂಗ ಆಗಿದೆ.

ಜುಲೈ ಮೊದಲ ವಾರದಲ್ಲಿ ಕ್ರೈಂ ಬ್ರ್ಯಾಂಚ್​ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದರು. ಅದರಲ್ಲಿ ಸಲ್ಮಾನ್​ ಖಾನ್​ ಅವರ ಹೇಳಿಕೆಯ ಬಗ್ಗೆ ವಿವರ ಇದೆ. 1,735 ಪುಟಗಳು ಇರುವ ಚಾರ್ಜ್​ಶೀಟ್​ನಲ್ಲಿ ಸಲ್ಮಾನ್​ ಖಾನ್​ ಅವರು ತಮಗೆ ಯಾರ ಮೇಲೆ ಅನುಮಾನ ಇದೆ ಎಂಬುದನ್ನು ತಿಳಿಸಿದ್ದಾರೆ. ಘಟನೆ ನಡೆದ ದಿನ ಏನಾಯಿತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಗುಂಡಿನ ದಾಳಿ ನಡೆದ ಬಳಿಕ ಪ್ರತಿ ಕ್ಷಣವೂ ಎಚ್ಚರಿಕೆಯಿಂದ ಇರುವಂತೆ ತಮ್ಮ ಕುಟುಂಬದ ಸದಸ್ಯರಿಗೆ ಸಲ್ಮಾನ್​ ಖಾನ್​ ಸಲಹೆ ನೀಡಿದ್ದಾರೆ.

‘ಅಂದು ಮುಂಜಾನೆ ನನಗೆ ಪಟಾಕಿ ರೀತಿಯ ಸದ್ದು ಕೇಳಿಸಿತು. ಬೈಕ್​ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗ್ಯಾಲಕ್ಸಿ ಅಪಾರ್ಟ್​ಮೆಂಟ್​ನ ಮೊದಲ ಮಹಡಿ ಕಡೆಗೆ ಗುಂಡು ಹಾರಿಸಿದರು ಅಂತ ನಸುಕಿನ 4.55ರ ಸುಮಾರಿಗೆ ಪೊಲೀಸ್​ ಬಾಡಿಗಾರ್ಡ್​ ಬಂದು ವಿಷಯ ತಿಳಿಸಿದರು. ಈ ಮೊದಲು ಕೂಡ ನನಗೆ ಮತ್ತು ನನ್ನ ಕುಟುಂಬದವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆದಿತ್ತು. ಸೋಶಿಯಲ್ ಮೀಡಿಯಾ ಮೂಲಕ ಲಾರೆನ್ಸ್​ ಬಿಷ್ಣೋಯ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂಬುದು ತಿಳಿಯಿತು. ಹಾಗಾಗಿ ಆತನ ಗ್ಯಾಂಗ್​ನವರೇ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ನಾನು ನಂಬಿದ್ದೇನೆ’ ಎಂದಿದ್ದಾರೆ ಸಲ್ಮಾನ್​ ಖಾನ್​.

ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಸಲ್ಮಾನ್​ ಖಾನ್​ಗೆ ಕೊಲೆ ಬೆದರಿಕೆ ಹಾಕಿದ 25ರ ಯುವಕನ ಬಂಧನ

‘ಈ ಮೊದಲು ಕೂಡ ಲಾರೆನ್ಸ್​ ಬಿಷ್ಣೋಯ್​ ಹಾಗೂ ಆತನ ಗ್ಯಾಂಗ್​ನವರು ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಕೊಲ್ಲುವುದಾಗಿ ಸಂದರ್ಶನಗಳಲ್ಲಿ ಹೇಳಿದ್ದರು. ಈಗ ಕೂಡ ಅದೇ ಉದ್ದೇಶದಿಂದ ನನ್ನ ಮನೆ ಎದುರು ಆತನ ಗ್ಯಾಂಗ್​ ಸದಸ್ಯರು ದಾಳಿ ಮಾಡಿದ್ದಾರೆ ಎಂಬುದು ನನ್ನ ನಂಬಿಕೆ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ. ಪ್ರಕರಣದ ಬಗ್ಗೆ ಸಲ್ಮಾನ್​ ಖಾನ್​ ಜೊತೆ 4 ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಸಲ್ಮಾನ್​ ಖಾನ್​ ಅವರ ಫಾರ್ಮ್​ ಹೌಸ್​ ಒಳಗೆ ನುಸುಳುವ ಪ್ರಯತ್ನ ಕೂಡ ಈ ಹಿಂದೆ ಆಗಿತ್ತು. ನಕಲಿ ಗುರುತಿನ ಚೀಟಿ ತೋರಿಸಿ ಇಂಥ ಕೃತ್ಯ ಮಾಡಲಾಗಿತ್ತು. ಆ ಬಗ್ಗೆಯೂ ತಮ್ಮ ಹೇಳಿಕೆಯಲ್ಲಿ ಸಲ್ಮಾನ್​ ಖಾನ್​ ಪ್ರಸ್ತಾಪಿಸಿದ್ದಾರೆ. ಆ ಘಟನೆಗೆ ಸಂಬಂಧಿಸಿದಂತೆ ಸಲ್ಲು ಕಡೆಯವರು ಈ ಮೊದಲೇ ಪೊಲೀಸರಿಗೆ ದೂರು ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.