ಸಿಬ್ಬಂದಿಯ ಚಪ್ಪಲಿಯಲ್ಲಿ ಹೊಡೆದ ಗಾಯಕ ರಾಹತ್ ಫತೇ ಅಲಿ ಖಾನ್: ವಿಡಿಯೋ ವೈರಲ್
Rahat fateh ali khan: ಭಾರತದಲ್ಲಿಯೂ ಪ್ರಸಿದ್ಧರಾಗಿರುವ ಪಾಕಿಸ್ತಾನಿ ಗಾಯಕ ರಾಹತ್ ಫತೇ ಅಲಿ ಖಾನ್, ವ್ಯಕ್ತಿಯೊಬ್ಬರನ್ನು ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಸ್ಪಷ್ಟನೆಯನ್ನೂ ಸಹ ಗಾಯಕ ನೀಡಿದ್ದಾರೆ.
ಜನಪ್ರಿಯ ಗಾಯಕ ಪಾಕಿಸ್ತಾನದ ರಾಹತ್ ಫತೇ ಅಲಿ ಖಾನ್ (rahat fateh ali khan), ತಮ್ಮ ಸುಮಧುರ ಹಾಡುಗಳಿಂದ ವಿಶ್ವದಾದ್ಯಂತ ಜನಪ್ರಿಯರು. ಭಾರತದಲ್ಲಿಯೂ ಹಲವಾರು ಹಾಡುಗಳನ್ನು ಹಾಡಿದ್ದಾರೆ, ಲೈವ್ ಶೋಗಳನ್ನು ರಾಹತ್ ಫತೇ ಅಲಿ ಖಾನ್ ನಡೆಸಿಕೊಟ್ಟಿದ್ದಾರೆ. ಇದೀಗ ಅವರ ಖಾಸಗಿ ವಿಡಿಯೋ ವೈರಲ್ (Viral) ಆಗಿದ್ದು, ವಿಡಿಯೋನಲ್ಲಿ ರಾಹತ್ ಫತೇ ಅಲಿ ಖಾನ್ ವ್ಯಕ್ತಿಯೊಬ್ಬರನ್ನು ಅಮಾನುಷವಾಗಿ ಚಪ್ಪಲಿಯಲ್ಲಿ ಹೊಡೆಯುತ್ತಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ರಾಹತ್ ಫತೇ ಅಲಿ ಖಾನ್ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
‘ಇಲ್ಲಿಯೇ ಇಟ್ಟಿದ್ದೆ ಆ ವಸ್ತು ಎಲ್ಲಿದೆ’ ಎಂದು ಕೇಳುತ್ತಾ ರಾಹತ್ ಫತೇ ಅಲಿ ಖಾನ್ ವ್ಯಕ್ತಿಯೊಬ್ಬರನ್ನು ಪದೇ-ಪದೇ ಚಪ್ಪಲಿಯಲ್ಲಿ ಹೊಡೆಯುತ್ತಿರುವ ದೃಶ್ಯ ವಿಡಿಯೋನಲ್ಲಿದೆ. ರಾಹತ್ ಫತೇ ಅಲಿ ಖಾನ್ನಿಂದ ಹೊಡೆತ ತಿನ್ನುತ್ತಿರುವ ವ್ಯಕ್ತಿ, ಅವರ ಖಾಸಗಿ ಸಿಬ್ಬಂದಿಯೇ ಎನ್ನಲಾಗಿದೆ. ವಿಡಿಯೋನಲ್ಲಿ ‘ಬಾಟಲಿ’ ಒಂದನ್ನು ಆ ವ್ಯಕ್ತಿ ಎತ್ತಿಕೊಂಡಿದ್ದಾನೆ ಎಂಬ ಕಾರಣಕ್ಕೆ ರಾಹತ್ ಅವರು ತಮ್ಮ ಸಿಬ್ಬಂದಿಯನ್ನು ಹೊಡೆಯುತ್ತಿರುವುದು ತಿಳಿದು ಬರುತ್ತಿದೆ.
ವಿಡಿಯೋವನ್ನು ನೆಟ್ಟಿಗರು ಹಂಚಿಕೊಂಡಿದ್ದು, ‘ಒಂದು ಬಾಟಲಿ ಮದ್ಯಕ್ಕಾಗಿ ರಾಹತ್ ಫತೇ ಅಲಿ ಖಾನ್ ತಮ್ಮ ಸಿಬ್ಬಂದಿಯನ್ನು ಕೆಟ್ಟದಾಗಿ ಹೊಡೆದಿದ್ದಾರೆ. ದೊಡ್ಡ ಜನರ ನಿಜವಾದ ಮುಖ ಇದು’ ಎಂಬರ್ಥದ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಹಲವರು ರಾಹತ್ರ ಈ ಕೃತ್ಯವನ್ನು ಕಠುಪದಗಳಲ್ಲಿ ಖಂಡಿಸಿದ್ದಾರೆ. ರಾಹತ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಸಹ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕನ್ನಡದ ಹಾಡು ಹಾಡಿ ಮೆಚ್ಚುಗೆ ಪಡೆದ ಗಾಯಕಿ ಶಿವಶ್ರೀ
ವಿಡಿಯೋ ವೈರಲ್ ಆದ ಬಳಿಕ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿರುವ ರಾಹತ್, ತಮ್ಮಿಂದ ಹೊಡೆತ ತಿಂದ ವ್ಯಕ್ತಿಯನ್ನು ಸಹ ಪರಿಚಯಿಸಿದ್ದು, ‘ಈತ ನನ್ನ ಶಿಷ್ಯ. ಒಬ್ಬ ಗುರು ಹಾಗೂ ಶಿಷ್ಯನ ಸಂಬಂಧ ಹೀಗೆಯೇ ಇರುತ್ತದೆ. ಶಿಷ್ಯ ತಪ್ಪು ಮಾಡಿದಾಗ ಗುರುವಾದವನು ಪ್ರೀತಿಯ ಸುರಿಮಳೆ ಸುರಿಸುತ್ತಾನೆ. ಅದೇ ಶಿಷ್ಯ ತಪ್ಪು ಮಾಡಿದಾಗ ದಂಡಿಸಲೇ ಬೇಕಾಗುತ್ತದೆ’ ಎಂದು ಸಹಜವಾಗಿ ತಾವು ಮಾಡಿದ್ದು ದೊಡ್ಡ ತಪ್ಪಲ್ಲವೆಂಬಂತೆ ಸ್ಪಷ್ಟೀಕರಣ ನೀಡಿದ್ದಾರೆ.
ವಿಡಿಯೋನಲ್ಲಿ ಹೊಡೆತ ತಿಂದಿರುವ ಆ ವ್ಯಕ್ತಿಯ ತಂದೆಯನ್ನೂ ಪರಿಚಯಿಸಿದ್ದು, ಆ ವ್ಯಕ್ತಿಯೂ ಸಹ ರಾಹತ್ ಅವರ ಬೆಂಬಲಿಸುತ್ತಾ ಹೇಳಿಕೆ ನೀಡಿದ್ದಾರೆ. ಹೊಡೆತ ತಿಂದ ವ್ಯಕ್ತಿಯೂ ಸಹ, ‘ನಮ್ಮ ಗುರುಗಳು ನಮ್ಮನ್ನು ಬಹಳ ಪ್ರೀತಿಸುತ್ತಾರೆ. ನಮ್ಮ ಗುರುಗಳಿಗೆ ಅವಮಾನ ಮಾಡಲೆಂದು, ಅವರ ಜನಪ್ರಿಯತೆ ಕುಂದುಂಟು ಮಾಡಲೆಂದು ವಿಡಿಯೋ ವೈರಲ್ ಮಾಡಲಾಗುತ್ತಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ