ದಶಕಗಳ ಕಾಲ ಪಟ್ಟ ಶ್ರಮಕ್ಕೆ ಈಗ ಫಲ: ‘ಹನುಮಾನ್ ಅಂಶ್’ ಸಿನಿಮಾ ನಟನ ಕತೆಯೇನು?
‘ಹನುಮಾನ್ ಅಂಶ್’ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಮಾಡುತ್ತಿದೆ. ಕೇವಲ 2 ಕೋಟಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಈಗಾಗಲೇ 65 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಲಾಭದ ಲೆಕ್ಕಾಚಾರದಲ್ಲಿ ‘ಧುರಂಧರ್ 2’ ಸಿನಿಮಾದ ಗಳಿಕೆಯನ್ನೂ ಸಹ ಹಿಂದಿಕ್ಕಿದೆ. ಸಿನಿಮಾ ನೋಡಿದವರೆಲ್ಲ ಸಿನಿಮಾದ ಮುಖ್ಯ ಪಾತ್ರಧಾರಿಯ ನಟನೆಯನ್ನು ಬಹುವಾಗಿ ಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ಯಾರು ಆ ನಟ? ಆತನ ಕತೆಯೇನು? ಮಾಹಿತಿ ಇಲ್ಲಿದೆ...

ಮುಖ್ಯಾಂಶಗಳು
- ಹನುಮಾನ್ ಅಂಶ್ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ.
- ಸಿನಿಮಾದ ನಾಯಕನ ನಟನೆ ಬಗ್ಗೆ ಭಾರಿ ಜನಪ್ರಿಯ ಆಗಿದೆ
- ಸಿನಿಮಾದ ನಟ ಯಾರು? ನಟನೆ ಹಿನ್ನೆಲೆ ಏನು?
ಎಲ್ಲಿ ನೋಡಿದರೂ ‘ಹನುಮಾನ್ ಅಂಶ್’ ಸಿನಿಮಾದ ಸುದ್ದಿಗಳೇ ಹರಿದಾಡುತ್ತಿವೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮ್ಯಾಜಿಕ್ ಮಾಡಿದೆ. ಕೇವಲ 1.8 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿರುವ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ 65 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಇದೀಗ ವಿದೇಶದಲ್ಲೂ ಬಿಡುಗಡೆಗೆ ಸಜ್ಜಾಗಿದ್ದು, ಅಲ್ಲಿಯೂ ಸಹ ದೊಡ್ಡದ ಗಳಿಕೆಯ ನಿರೀಕ್ಷೆಯಲ್ಲಿದೆ. ಬಜೆಟ್ ಅತ್ಯಂತ ಕಡಿಮೆ ಆಗಿದ್ದರೂ ಸಹ ಸಿನಿಮಾನಲ್ಲಿ ಕಲಾವಿದರ ನಟನೆ, ಸಂಗೀತ, ನಿರೂಪಣೆ, ಸಿನಿಮಾದ ಒಟ್ಟಾರೆ ಸರಳತೆಯಿಂದಾಗಿ ಸಿನಿಮಾ ಪ್ರೇಕ್ಷಕರಿಗೆ ಆಪ್ತವಾಗುತ್ತಿದೆ. ವಿಶೇಷವಾಗಿ ಸಿನಿಮಾನಲ್ಲಿ ಮುಖ್ಯ ಪಾತ್ರವಾದ ನೀಮ್ ಕರೋಲಿ ಬಾಬಾ ಅವರ ಪಾತ್ರದಲ್ಲಿ ನಟಿಸಿರುವ ಪ್ರಮುಖ ನಟನೆಗಂತೂ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮಾರು ಹೋಗಿದ್ದಾರೆ. ಅಂದಹಾಗೆ ಯಾರು ಈ ನಟ? ಇಲ್ಲಿದೆ ಮಾಹಿತಿ…
‘ಹನುಮಾನ್ ಅಂಶ್’ ಸಿನಿಮಾ ನೋಡಿದವರೆಲ್ಲ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿರುವ ನಟನ ಸರಳವಾದ ಆದರೆ ಪರಿಣಾಮಕಾರಿಯಾದ ನಟನೆಗೆ ಮಾರು ಹೋಗಿದ್ದಾರೆ. ಸಿನಿಮಾ ಹಿಟ್ ಆಗುವಲ್ಲಿ ಆತನ ನಟನೆ ಪ್ರಮುಖವಾದ ಅಂಶ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಕರೋಲಿ ಬಾಬಾ ಪಾತ್ರದಲ್ಲಿ ನಟಿಸಿರುವ ನಟನ ಹೆಸರು ಶೋಭಿನವ್ ಸತ್ಯ. ‘ಹನುಮಾನ್ ಅಂಶ್’ ಸಿನಿಮಾಕ್ಕೆ ಮುಂಚೆ ಒಂದೇ ಒಂದು ಸಿನಿಮಾನಲ್ಲೂ ನಟಿಸಿದೇ ಇದ್ದ ಶೋಭಿನವ್, ಈಗ ಇದ್ದಕ್ಕಿದ್ದಂತೆ ರಾಷ್ಟ್ರಪ್ರಶಸ್ತಿ ಪ್ರಶಸ್ತಿಗೆ ಸ್ಪರ್ಧಿ ಆಗುವ ಮಟ್ಟದ ನಟನೆ ಮಾಡಿದ್ದಾರೆ ಅದೂ ತಮ್ಮ ಮೊದಲನೇ ಸಿನಿಮಾನಲ್ಲೇ.
ಶೋಭಿವನ್ ಮೂಲತಃ ಲಖನೌನವರು. ನಟನಾಗಬೇಕೆಂದು ದಶಕಗಳ ಹಿಂದೆ ಪುಣೆಯ ಪ್ರತಿಷ್ಠಿತ ಎಫ್ಟಿಟಿಐ (ಫಿಲಂ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ಸೇರಿಕೊಂಡು ಅಲ್ಲಿ ಸಿನಿಮಾಕ್ಕೆ ಬೇಕಾದ ಕೆಲ ಕೌಶಲಗಳನ್ನು ಕಲಿತರು. ಮುಂಬೈಗೆ ಬಂದರೆ ಇಲ್ಲಿ ಅವರ ಕಲಿಕೆಗೆ ಬೆಲೆಯೇ ಇರಲಿಲ್ಲ. ಯಾರೂ ಸಿನಿಮಾಗಳಲ್ಲಿ ಅವಕಾಶ ಕೊಡಲಿಲ್ಲ. ಕೊನೆಗೆ ಔಪ್ಲೆಟ್ ಸ್ಕೂಲ್ ಆಫ್ ಆಕ್ಟಿಂಗ್ ಆಂಡ್ ಫಿಲಂನಲ್ಲಿ ಶಿಕ್ಷಕನಾಗಿ ಸೇರಿಕೊಂಡರು. ಜೊತೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ಕ್ಯಾಮೆರಾ ಹಿಂದೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರು.
ಯುನಿಟ್ ಬಾಯ್ನಿಂದ ಹಿಡಿದು ಸಹಾಯಕ ನಿರ್ದೇಶಕ, ಫಸ್ಟ್ ಯೂನಿಟ್ವರೆಗೆ ಹಲವಾರು ರೀತಿಯ ಕೆಲಸಗಳನ್ನು ಸುಮಾರು 10 ವರ್ಷಕ್ಕೂ ಹೆಚ್ಚು ಸಮಯದ ವರೆಗೆ ಮಾಡಿದರು ಶೋಭಿನವ್. ಈಗ ಬಿಡುಗಡೆ ಆಗಿರುವ ‘ಹನುಮಾನ್ ಅಂಶ್’ ಸಿನಿಮಾಕ್ಕೂ ಸಹ ಅವರು ಸಹಾಯಕ ನಿರ್ದೇಶಕನಾಗಿ ಹೋಗಿದ್ದರು. ಆದರೆ ಸಿನಿಮಾದ ನಿರ್ದೇಶಕ ವಿಶಾಲ್, ಶೋಭಿನವ್ ಅವರಲ್ಲಿ ನೈಸರ್ಗಿಕವಾಗಿ, ವ್ಯಕ್ತಿಗತವಾಗಿ ಇರುವ ಸರಳತೆಯನ್ನು ಗುರುತಿಸಿ ಆಡಿಷನ್ ನೀಡುವಂತೆ ಹೇಳಿದರು. ಎಫ್ಟಿಟಿಐ ಮತ್ತು ಔಪ್ಲೆಟ್ ಸ್ಕೂಲ್ ಆಫ್ ಆಕ್ಟಿಂಗ್ ಕಲಿತ ನಟನೆಯ ತರಗತಿಗಳಿಂದಾಗಿ ಅದ್ಭುತವಾಗಿ ಆಡಿಷನ್ ನೀಡಿದ ಶೋಭಿನವ್ ಪಾತ್ರ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ:ಸೂಪರ್ ಹಿಟ್ ‘ಹನುಮಾನ್ ಅಂಶ್’ ವಿದೇಶಿ ವಿತರಣೆ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲ್ಮ್ಸ್
ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಶೋಭಿನವ್ ಜೀವಿಸಿಬಿಟ್ಟಿದ್ದಾರೆ ಎಂದು ಸಿನಿಮಾ ನೋಡಿದ ಎಲ್ಲರೂ ಹೇಳುತ್ತಿದ್ದಾರೆ. ನಟನಾಗಲು ಬಂದು, ದಶಕದಿಂದ ಅವಕಾಶ ಸಿಕ್ಕದೆ ಒದ್ದಾಡಿದ್ದ ಶೋಭಿನವ್ ತಮಗೆ ಸಿಕ್ಕ ಮೊದಲ ಅವಕಾಶದಲ್ಲಿಯೇ ತಮ್ಮ ಎಲ್ಲ ಪ್ರತಿಭೆಯನ್ನೂ ಧಾರೆ ಎರೆದು ನಟನೆ ಮಾಡಿದ್ದಾರೆ. ಸಿನಿಮಾ ನೋಡಿದ ಕೆಲ ಸಿನಿ ಪಂಡಿತರು ಈ ಬಾರಿಯ ರಾಷ್ಟ್ರಪ್ರಶಸ್ತಿ ಶೋಭಿನವ್ಗೆ ಖಾತ್ರಿ ಎನ್ನುವ ಮಾತುಗಳನ್ನು ಸಹ ಹೇಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




