AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಚಿತ್ರರಂಗ ನನ್ನನ್ನು ಬ್ಯಾನ್ ಮಾಡಿದಾಗ ಬೆಂಬಲ ಕೊಟ್ಟಿದ್ದು ಸಮಂತಾ: ನಟಿಯ ಸಹಾಯ ನೆನೆದ ಗಾಯಕಿ

ತಮಿಳು ಚಿತ್ರರಂಗದಿಂದ ಬ್ಯಾನ್ ಆಗಿದ್ದ ಗಾಯಕಿ ಚಿನ್ಮಯಿ ಶ್ರೀಪಾದ, ಆ ಸಮಯದಲ್ಲಿ ನಟಿ ಸಮಂತಾ ತಮಗೆ ಮಾಡಿದ ಸಹಾಯ, ನೀಡಿದ ಬೆಂಬಲವನ್ನು ನೆನಪಿಸಿಕೊಂಡಿದ್ದಾರೆ.

Samantha: ಚಿತ್ರರಂಗ ನನ್ನನ್ನು ಬ್ಯಾನ್ ಮಾಡಿದಾಗ ಬೆಂಬಲ ಕೊಟ್ಟಿದ್ದು ಸಮಂತಾ: ನಟಿಯ ಸಹಾಯ ನೆನೆದ ಗಾಯಕಿ
ಸಮಂತಾ
ಮಂಜುನಾಥ ಸಿ.
|

Updated on: Mar 03, 2023 | 6:39 PM

Share

ನಟಿ ಸಮಂತಾ (Samantha) ತಮ್ಮ ಗಟ್ಟಿ ವ್ಯಕ್ತಿತ್ವವನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ವಿಚ್ಛೇದನ, ಅದರ ಬೆನ್ನಲ್ಲೇ ಬಂದ ಸಾಮಾಜಿಕ ನಿಂದನೆ, ಸುಳ್ಳು ಸುದ್ದಿ, ಸತತ ಟ್ರೋಲಿಂಗ್ ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ ಎದ್ದು ನಿಂತಿದ್ದಾರೆ. ತಾವು ಗಟ್ಟಿಯಾಗಿರುವುದು ಮಾತ್ರವಲ್ಲ, ಸಂಕಷ್ಟಕ್ಕೆ ಸಿಲುಕಿದ ತನ್ನವರಿಗೆ ಸದಾ ಬೆಂಬಲ ಒದಗಿಸುತ್ತಲೇ ಬಂದಿದ್ದಾರೆ. ಅದಕ್ಕೆ ತಾಜಾ ಸಾಕ್ಷಿಯೊಂದು ಇಲ್ಲಿದೆ.

ಚಿನ್ಮಯಿ ಶ್ರೀಪಾದ (Chimayi Sripada), ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಅದರಲ್ಲಿಯೂ ತೆಲುಗು-ತಮಿಳು ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಜನಪ್ರಿಯ ಹೆಸರು. ನೂರಾರು ಹಿಟ್ ಹಾಡುಗಳನ್ನು ಚಿನ್ಮಯಿ ಹಾಡಿದ್ದಾರೆ. ಆದರೆ 2018 ರಲ್ಲಿ ತಮಿಳು ಚಿತ್ರರಂಗ ಈ ಗಾಯಕಿಯನ್ನು ಅನಿರ್ದಿಷ್ಟಾವಧಿಗೆ ಬ್ಯಾನ್ ಮಾಡಿಬಿಟ್ಟಿತ್ತು. ಅದೂ, ತಮಗಾದ ಕಷ್ಟ ಹೇಳಿಕೊಂಡಿದ್ದಕ್ಕೆ.

2018 ರಲ್ಲಿ ಉಚ್ರಾಯ ಸ್ಥಿತಿಯಲ್ಲಿದ್ದ ಮೀ ಟೂ ಚಳವಳಿ ಸಮಯದಲ್ಲಿ ಗಾಯಕಿ ಚಿನ್ಮಯಿ ಶ್ರೀಪಾದ ತಮಗೆ ಚಿತ್ರರಂಗದಲ್ಲಿ ಉಂಟಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗವಾಗಿ ಮಾತನಾಡಿ ಖ್ಯಾತ ಗೀತರಚನೆಕಾರ, ಕತೆಗಾರ ವೈರಮುತ್ತು, ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಗಾಯಕ ಕಾರ್ತಿಕ್, ಮ್ಯಾಂಡೊಲಿನ್ ರಾಜೇಶ್ ಅವರುಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ವೈರಮುತ್ತು ಪರವಹಿಸಿದ ತಮಿಳು ಚಿತ್ರರಂಗ ಗಾಯಕಿಯನ್ನು ಬ್ಯಾನ್ ಮಾಡಿತ್ತು. ಅಲ್ಲದೆ ಡಬ್ಬಿಂಗ್ ಕಲಾವಿದರ ಯೂನಿಯನ್ ಸಹ ಚಿನ್ಮಯಿ ಅವರನ್ನು ಬ್ಯಾನ್ ಮಾಡಿತ್ತು.

ಅದೇ ಸಮಯದಲ್ಲಿ ತಮಿಳು ಬ್ರಾಹ್ಮಣ ಸಮುದಾಯ ಹಾಗೂ ಇತರೆ ಹಲವರಿಂದ ಚಿನ್ಮಯಿ ವಿರುದ್ಧ ನಿಂದನೆ, ದೂರುಗಳು ಕೇಳಿ ಬಂದವು. ತೀವ್ರ ಸಂಕಷ್ಟದಲ್ಲಿದ್ದ ಚಿನ್ಮಯಿಗೆ ಆ ಸಮಯದಲ್ಲಿ ಬೆನ್ನಿಗೆ ನಿಂತಿದ್ದು ನಟಿ ಸಮಂತಾ. ಈ ವಿಷಯವನ್ನು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಚಿನ್ಮಯಿ ಹೇಳಿಕೊಂಡಿದ್ದಾರೆ.

ಆ ಸಮಯದಲ್ಲಿ ಹೆಚ್ಚು ಮಂದಿ ನನ್ನನ್ನು ನಂಬಿರಲಿಲ್ಲ. ಆದರೆ ನಂಬಿದ ಕೆಲವೇ ಕೆಲವರಲ್ಲಿ ನಟಿ ಸಮಂತಾ ಸಹ ಒಬ್ಬರು. ಆ ಸೂಕ್ಷ್ಮ ಸಮಯದಲ್ಲಿ ವೈಯಕ್ತಿಕ ಬೆಂಬಲ ಸೂಚಿಸಿದ ಜೊತೆಗೆ ಟ್ವಿಟ್ಟರ್ ಮೂಲಕ ಬಹಿರಂಗವಾಗಿಯೂ ಬೆಂಬಲ ಸೂಚಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಚಿನ್ಮಯಿ.

ಚಿನ್ಮಯಿ ವಿರುದ್ಧ ಬ್ಯಾನ್ ಹೇರಿದ ಸಮಯದಲ್ಲಿ ಟ್ವೀಟ್ ಮಾಡಿದ್ದ ನಟಿ ಸಮಂತಾ, ”ನಾನು ಕಂಡ ಅತ್ಯಂತ ನೇರ, ನಿಷ್ಠುರ ಹಾಗೂ ಪ್ರಾಮಾಣಿಕ ವ್ಯಕ್ತಿಗಳೆಂದರೆ ಚಿನ್ಮಯಿ ಹಾಗೂ ಅವರ ಪತಿ ರಾಹುಲ್. ಚಿನ್ಮಯಿಯನ್ನು ನಾನು ಕಳೆದ ಹತ್ತು ವರ್ಷಗಳಿಂದಲೂ ಬಲ್ಲೆ” ಎಂದಿದ್ದರು.

”ಚಿತ್ರರಂಗದಲ್ಲಿ ಮಹಿಳೆಯರ ಸುತ್ತ ಇರುವ ಹಲವು ಅಡ್ಡಿಗಳನ್ನು, ಗೋಡೆಗಳನ್ನು ಸಮಂತಾ ಮುರಿದಿದ್ದಾರೆ. ಸಂಕಷ್ಟದಲ್ಲಿರುವ ಹಲವರಿಗೆ ಸಮಂತಾ ಸಹಾಯ ಮಾಡಿದ್ದಾರೆ” ಎಂದಿದ್ದಾರೆ ಚಿನ್ಮಯಿ.

ಸಮಂತಾರ ಮೊದಲ ಸಿನಿಮಾ ‘ಯೇ ಮಾಯ ಚೇಸಾವೆ’ ಇಂದಲೂ ಸಮಂತಾಗೆ ಡಬ್ಬಿಂಗ್ ಮಾಡುತ್ತಿರುವುದು ಚಿನ್ಮಯಿ. ಸಂಮತಾರ ಇತ್ತೀಚೆಗಿನ ‘ಯಶೋಧ’ ಸಿನಿಮಾಕ್ಕೆ ಸಮಂತಾ ಸ್ವತಃ ತಾವೇ ಡಬ್ ಮಾಡಿದ್ದಾರೆ. ಆದರೆ ಆ ಸಿನಿಮಾದ ಹಿಂದಿ ಆವೃತ್ತಿಗೆ ಚಿನ್ಮಯಿ ಅವರೇ ಡಬ್ ಮಾಡಿದ್ದಾರೆ. ಈ ಇಬ್ಬರೂ ಆಪ್ತ ಗೆಳತಿಯರು ಸಹ.

ಸಮಂತಾಗೆ ಮಾತ್ರವೇ ಅಲ್ಲದೆ ಪೂಜಾ ಹೆಗ್ಡೆ, ನಯನತಾರಾ, ಭೂಮಿಕಾ ಚಾವ್ಲಾ, ಕಂಗನಾ ರಣಾವತ್, ಕಾಜಲ್, ತ್ರಿಷಾ, ಸಮೀರಾ ರೆಡ್ಡಿ, ಆಮಿ ಜಾಕ್ಸನ್, ಪ್ರಿಯಾಂಕಾ ಚೋಪ್ರಾ, ಸೊನಾಕ್ಷಿ ಸಿನ್ಹ, ರಕುಲ್ ಪ್ರೀತ್ ಸಿಂಗ್ ಇನ್ನೂ ಹಲವರಿಗೆ ಚಿನ್ಮಯಿ ಕಂಠದಾನ ಮಾಡಿದ್ದಾರೆ.  ತಮಿಳು-ತೆಲುಗಿನಲ್ಲಿ ಹಲವಾರು ಹಾಡು ಹಾಡಿರುವ ಚಿನ್ಮಯಿ, ಹಿಂದಿ ಹಾಗೂ ಕನ್ನಡದಲ್ಲಿಯೂ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ