ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ
ಹೈದರಾಬಾದ್ಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿರಂಜೀವಿ ಹಾಗೂ ರಾಮ್ ಚರಣ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಸಿನಿಮಾರಂಗಕ್ಕೆ ಕಂಟಕವಾಗಿರುವ ಎಐ ಹಾಗೂ ಡೀಪ್‌ಫೇಕ್ ಬಗ್ಗೆ ಚರ್ಚೆ ಅವರು ಮಾಡಿದ್ದಾರೆ. ಆ ಸಂದರ್ಭದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಟಾಲಿವುಡ್ ನಟರಾದ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ಅವರು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಿ ಆತಿಥ್ಯ ನೀಡಿದ್ದಾರೆ. ಸೋಮವಾರ (ಅಕ್ಟೋಬರ್ 2) ನಡೆದ ಈ ಭೇಟಿಯಲ್ಲಿ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಕೂಡ ಉಪಸ್ಥಿತರಿದ್ದರು. ಈ ಭೇಟಿಯ ವೇಳೆ ಕೇವಲ ಸೌಜನ್ಯದ ಮಾತುಕತೆಯಷ್ಟೇ ಅಲ್ಲದೆ, ಪ್ರಸ್ತುತ ಚಿತ್ರರಂಗವನ್ನು ಕಾಡುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಡೀಪ್‌ಫೇಕ್ ತಂತ್ರಜ್ಞಾನದ ದುರ್ಬಳಕೆ ಕುರಿತು ಗೃಹ ಸಚಿವರೊಂದಿಗೆ ಪ್ರಮುಖ ಚರ್ಚೆ ನಡೆಸಲಾಗಿದೆ.
ಭೇಟಿಯ ನಂತರ ಅಮಿತ್ ಶಾ ಅವರೊಂದಿಗೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಮ್ ಚರಣ್, ‘ನಮ್ಮ ತಂದೆ ಚಿರಂಜೀವಿ ಅವರೊಂದಿಗೆ ಗೌರವಾನ್ವಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿ ಅವರನ್ನು ಭೇಟಿಯಾಗಿರುವುದು ಅತ್ಯಂತ ಗೌರವದ ಸಂಗತಿ’ ಎಂದು ಬರೆದುಕೊಂಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅವರು ಕೇಂದ್ರ ಸಚಿವರಿಗೆ ಹೂಗುಚ್ಛ, ವಿಶೇಷ ವಿಗ್ರಹ ಹಾಗೂ ಸಾಂಪ್ರದಾಯಿಕ ಶಲ್ಯವನ್ನು ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಿನಿಮಾರಂಗ ಹಾಗೂ ನಟರ ಮೇಲೆ ಎಐ ಮತ್ತು ಡೀಪ್‌ಫೇಕ್ ತಂತ್ರಜ್ಞಾನದ ದುರ್ಬಳಕೆ ಬೀರುತ್ತಿರುವ ಗಂಭೀರ ಪರಿಣಾಮಗಳ ಬಗ್ಗೆ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ್ದಾಗಿ ರಾಮ್ ಚರಣ್ ತಿಳಿಸಿದ್ದಾರೆ. ‘ಬೆಳೆಯುತ್ತಿರುವ ಎಐ ಹಾಗೂ ಡೀಪ್‌ಫೇಕ್ ತಂತ್ರಜ್ಞಾನದ ದುರ್ಬಳಕೆ ಮತ್ತು ಅದು ಕಲಾವಿದರು ಹಾಗೂ ನಮ್ಮ ಉದ್ಯಮದ ಮೇಲೆ ಬೀರುತ್ತಿರುವ ಗಂಭೀರ ಪರಿಣಾಮಗಳ ಬಗ್ಗೆ ನಾವು ವ್ಯಕ್ತಪಡಿಸಿದ ಕಳವಳಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ನನಗೆ ಧೈರ್ಯ ತಂದಿದೆ’ ಎಂದು ಅವರು ಹೇಳಿದ್ದಾರೆ.
View this post on Instagram
ಅಲ್ಲದೆ, ಈ ವಿಷಯವನ್ನು ಸರ್ಕಾರವು ತುರ್ತಾಗಿ ಪರಿಶೀಲಿಸಲಿದೆ ಹಾಗೂ ಇಂತಹ ದುರ್ಬಳಕೆಗಳ ವಿರುದ್ಧ ಕಠಿಣ ಕ್ರಮಗಳು ಮತ್ತು ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ರಾಮ್ ಚರಣ್ ತಿಳಿಸಿದ್ದು, ಅವರ ಸಮಯ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಶ್ರೀಕೃಷ್ಣನ ಪಾತ್ರದಲ್ಲಿ ರಾಮ್ ಚರಣ್? ‘ಲಾಲೋ’ ತೆಲುಗು ರಿಮೇಕ್ ಬಗ್ಗೆ ಗಾಸಿಪ್
‘ಆರ್‌ಆರ್‌ಆರ್’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ತೆರೆಕಂಡ ರಾಮ್ ಚರಣ್ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿದ್ದರೂ, ಅವರು ಈಗ ಹೊಸ ಉತ್ಸಾಹದಲ್ಲಿದ್ದಾರೆ. ನಿರ್ದೇಶಕ ಸುಕುಮಾರ್ ಅವರೊಂದಿಗೆ ಕೈಜೋಡಿಸಿರುವ ರಾಮ್ ಚರಣ್ ಅವರ ಮುಂದಿನ ಪ್ಯಾನ್-ಇಂಡಿಯಾ ಚಿತ್ರಕ್ಕೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅದ್ಧೂರಿ ಪೂಜೆಯೊಂದಿಗೆ ಚಾಲನೆ ನೀಡಲಾಗಿದೆ. ಈ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




