ಅಶ್ಲೀಲ ಕಮೆಂಟ್, ಅತ್ಯಾಚಾರ ಬೆದರಿಕೆ: 12 ಮಂದಿ ದರ್ಶನ್ ಫ್ಯಾನ್ಸ್ ವಿರುದ್ಧ ಮತ್ತೆ ಕೇಸ್
ನಟಿ ರಮ್ಯಾ, ಸೋನು ಶೆಟ್ಟಿ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಕಮೆಂಟ್ ಮತ್ತು ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಹಿಂದೆಯೇ ಪ್ರಕರಣ ದಾಖಲಾಗಿದ್ದು, ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೆ ದರ್ಶನ್ ಅವರ 12 ಮಂದಿ ಅಭಿಮಾನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಶ್ಲೀಲ ಕಮೆಂಟ್, ಅತ್ಯಾಚಾರ ಬೆದರಿಕೆ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 27: ಶಿಕ್ಷಕಿಯೊಬ್ಬರ ವಿರುದ್ಧ ಅಶ್ಲೀಲ ಕಮೆಂಟ್, ಅತ್ಯಾಚಾರ ಬೆದರಿಕೆ ಒಡ್ಡಿದ ಆರೋಪದಡಿ ನಟ ದರ್ಶನ್ (Darshan) ಅವರ 12 ಮಂದಿ ಅಭಿಮಾನಿಗಳ ವಿರುದ್ಧ ಬೆಂಗಳೂರಿನ (Bengaluru) ವಿಜಯನಗರದ ಗೋವಿಂದರಾಜನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಜಿತ್ ಆನಂದ್ ಹೆಗಡೆ ಎಂಬವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ನಟಿ ರಮ್ಯಾ ಹಾಗೂ ಸೋನು ಶೆಟ್ಟಿ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸಿದ ಆರೋಪಗಳು ದರ್ಶನ್ ಅಭಿಮಾನಿಗಳ ಮೇಲಿವೆ.
ಅಜಿತ್ ಆನಂದ್ ಹೆಗಡೆ ಅವರು ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 24ರಂದು ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ‘ಖದರ್ ಕನ್ನಡಿಗ’ ಎಂಬ ಫೇಸ್ ಬುಕ್ ಪೇಜ್‌ನಲ್ಲಿ ಅಶ್ಲೀಲವಾಗಿ ಸಂದೇಶ ಪ್ರಕಟಿಸಲಾಗಿದೆ. ಹೆತ್ತವರ ಅನುಮತಿ ಇಲ್ಲದೆ ಪುಟ್ಟ ಮಕ್ಕಳ ಫೋಟೋಗಳನ್ನು ಕೂಡ ಬಳಸಿಕೊಂಡು, ಗುರುತು ಮರೆ ಮಾಚದೆ ಕಿಡಿಗೇಡಿಗಳು ಪೋಸ್ಟ್ ಮಾಡಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.
ಅಲ್ಲದೆ, ದೂರುದಾರರ ಪತ್ನಿಯು ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದು ಗಣತಿ ಸಲುವಾಗಿ ಕರ್ತವ್ಯಕ್ಕೆ ಹೋಗಲು ಭಯದ ವಾತಾವರಣ ಸೃಷ್ಟಿಸಲಾಗಿದೆ. ದರ್ಶನ್ ಅಭಿಮಾನಿಗಳು ಅತ್ಯಾಚಾರದ ಬೆದರಿಕೆಯನ್ನು ಕೂಡ ಹಾಕಿದ್ದಾರೆ. ಪತ್ನಿಯ ಭದ್ರತೆ ಹಾಗೂ ಖಾಸಗಿತನಕ್ಕೆ ಧಕ್ಕೆ ಬಂದಿದ್ದು ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಅಜಿತ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಅಶ್ಲೀಲ ಕಮೆಂಟ್ ಮಾಡಿದ ದರ್ಶನ್ ಫ್ಯಾನ್ಸ್; 7 ವರ್ಷ ಜೈಲು ಶಿಕ್ಷೆ ಆಗುತ್ತೆ ಹುಷಾರ್
ಸದ್ಯ, ಈ ದೂರಿನ ಆಧಾರದಲ್ಲಿ ಖದರ್ ಕನ್ನಡಿಗ ಫೇಸ್ಬುಕ್ ಪೇಜ್ ಹಾಗೂ 12 ಮಂದಿ ವಿರುದ್ಧ ಪ್ರಕರಣದ ದಾಖಲಾಗಿದೆ. ನಟಿ ರಮ್ಯಾ ವಿರುದ್ಧ ಬೆದರಿಕೆಯೊಡ್ಡಿ ಪೋಸ್ಟ್ ಮಾಡಿದ್ದ ಕೃತ್ಯ ಸಂಬಂಧ ದರ್ಶನ್ ಅಭಿಮಾನಿಗಳಿಗೆ ಪೊಲೀಸರು ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು. ಆದಾಗ್ಯೂ, ಅಂಥ ಪ್ರಕರಣಗಳು ಮರುಕಳಿಸುತ್ತಲೇ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:14 pm, Sat, 27 September 25




