ಅಲ್ಲು ಅರ್ಜುನ್ ಇನ್ಸ್ಟಾಗ್ರಾಮ್ ಖಾತೆ ಅನ್ಫಾಲೋ ಮಾಡಿದ ರಾಮ್ ಚರಣ್; ಕಾರಣ?
ರಾಮ್ ಚರಣ್ ಅವರು ಅಲ್ಲು ಅರ್ಜುನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ. ಇತ್ತೀಚೆಗಿನ ಒಂದು ವಿವಾದವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲು ಅರವಿಂದ್ ಅವರು ರಾಮ್ ಚರಣ್ ಸಿನಿಮಾದ ಸೋಲಿನ ಕುರಿತು ಮಾತನಾಡಿದ್ದರಿಂದ ಇಷ್ಟೆಲ್ಲ ಕಿರಿಕ್ ಶುರುವಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಟಾಲಿವುಡ್ ಸ್ಟಾರ್ಗಳ ನಡುವೆ ಬಿರುಕು ಮೂಡಿದಂತಿದೆ. ಅಲ್ಲು ಫ್ಯಾಮಿಲಿ ಹಾಗೂ ಮೆಗಾ ಸ್ಟಾರ್ ಫ್ಯಾಮಿಲಿ ನಡುವೆ ಏನೋ ಕಿರಿಕ್ ಆಗಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕೆಲವೇ ದಿನಗಳ ಹಿಂದೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಮೇಲೆ ರಾಮ್ ಚರಣ್ ಅಭಿಮಾನಿಗಳು ಗರಂ ಆಗಿದ್ದರು. ಬಳಿಕ ಅಲ್ಲು ಅರವಿಂದ್ ಅವರು ಕ್ಷಮೆ ಕೇಳಿದರು. ಈ ಘಟನೆ ನಡೆದ ಬೆನ್ನಲ್ಲೇ ರಾಮ್ ಚರಣ್ ಅವರು ಅಲ್ಲು ಅರ್ಜುನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ ಫಾಲೋ ಮಾಡಿದ್ದಾರೆ ಎಂಬುದು ಚರ್ಚೆಯ ವಿಷಯ ಆಗಿದೆ.
ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿತು ಎಂಬುದು ಗೊತ್ತಿರುವ ವಿಷಯ. ಸುದ್ದಿಗೋಷ್ಠಿಯೊಂದರಲ್ಲಿ ‘ಗೇಮ್ ಚೇಂಜರ್’ ಸೋಲಿನ ಬಗ್ಗೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಮಾತನಾಡಿದ್ದರು. ಅದರಿಂದ ರಾಮ್ ಚರಣ್ ಅವರ ಅಭಿಮಾನಿಗಳಿಗೆ ಬೇಸರ ಆಯಿತು. ಬೇಕಂತಲೇ ಅಲ್ಲು ಅರವಿಂದ್ ಈ ರೀತಿ ಮಾತನಾಡಿದ್ದಾರೆ ಎಂದು ರಾಮ್ ಚರಣ್ ಅಭಿಮಾನಿಗಳು ತಕರಾರು ತೆಗೆದಿದ್ದರು.
ಅಲ್ಲು ಅರವಿಂದ್ ಅವರು ರಾಮ್ ಚರಣ್ ಅವರ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಬಳಿಕ ವಿವಾದ ಶಮನ ಆಯಿತು ಎಂದುಕೊಳ್ಳಲಾಗಿತ್ತು. ಆದರೆ ರಾಮ್ ಚರಣ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ನೋಡಿದ ಮೇಲೆ ಹೊಸ ವಿಷಯ ಕಣ್ಣು ಕುಕ್ಕಿದೆ. ಇಷ್ಟು ದಿನಗಳವರೆಗೆ ರಾಮ್ ಚರಣ್ ಅವರು ಇನ್ಸ್ಟಾಗ್ರಾಮ್ನಲ್ಲಿ ಅಲ್ಲು ಅರ್ಜುನ್ ಅವರನ್ನು ಫಾಲೋ ಮಾಡುತ್ತಿದ್ದರು. ಆದರೆ ಈಗ ಅನ್ಫಾಲೋ ಮಾಡಿದ್ದಾರೆ.
ಇದನ್ನೂ ಓದಿ: ತಪ್ಪು ಮಾತಾಡಿದೆ, ಕ್ಷಮಿಸಿ: ರಾಮ್ ಚರಣ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಅಲ್ಲು ಅರವಿಂದ್
ರಾಮ್ ಚರಣ್ ಅವರ ಈ ನಿರ್ಧಾರಕ್ಕೆ ಅಲ್ಲು ಅರವಿಂದ್ ನೀಡಿದ್ದ ಹೇಳಿಕೆಯೇ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ರಾಮ್ ಚರಣ್ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ. ಇನ್ನು, ಅಲ್ಲು ಅರ್ಜುನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪತ್ನಿ ಸ್ನೇಹಾ ರೆಡ್ಡಿಯನ್ನು ಹೊರತುಪಡಿಸಿ ಬೇರೆ ಯಾರನ್ನೂ ಫಾಲೋ ಮಾಡುತ್ತಿಲ್ಲ.
ಇನ್ಸ್ಟಾಗ್ರಾಮ್ನಲ್ಲಿ ಅಲ್ಲು ಅರ್ಜುನ್ ಅವರನ್ನು 2.8 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ರಾಮ್ ಚರಣ್ ಅವರಿಗೆ 2.6 ಕೋಟಿ ಫಾಲೋವರ್ಸ್ ಇದ್ದಾರೆ. ಪ್ರಸ್ತುತ ರಾಮ್ ಚರಣ್ ಅವರು 38 ಜನರನ್ನು ಫಾಲೋ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.