Samantha: ಹಾಲಿವುಡ್ ಮಂದಿಯೇ ‘ವಾವ್’ ಎನ್ನುವಂತೆ ‘ಯಶೋದಾ’ ಚಿತ್ರದಲ್ಲಿ ಸಾಹಸ ಮೆರೆದ ಸಮಂತಾ
Yannick Ben | Samantha Ruth Prabhu: ಟ್ರೇಲರ್ ಮೂಲಕ ‘ಯಶೋದಾ’ ಚಿತ್ರ ನಿರೀಕ್ಷೆ ಮೂಡಿಸಿದೆ. ಮುಖ್ಯ ಪಾತ್ರ ಮಾಡಿರುವ ಸಮಂತಾ ಅವರ ಬದ್ಧತೆ ಕಂಡು ಹಾಲಿವುಡ್ ಸ್ಟಂಟ್ ಮಾಸ್ಟರ್ ಯಾನಿಕ್ ಬೆನ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ದಿನದಿಂದ ದಿನಕ್ಕೆ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ನಟಿಸಿರುವ ‘ಯಶೋದಾ’ (Yashoda Movie) ಚಿತ್ರ ನ.11ರಂದು ಬಿಡುಗಡೆ ಆಗಲಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿರುವ ಟ್ರೇಲರ್ ಗಮನ ಸೆಳೆದಿದೆ. ಅದರಲ್ಲಿ ಅವರು ಭರ್ಜರಿ ಸಾಹಸ ಮೆರೆದಿರುವುದು ಕಾಣಿಸಿದೆ. ಸಮಂತಾ ಅವರಿಗೆ ಆ್ಯಕ್ಷನ್ ಹೇಳಿಕೊಟ್ಟಿರುವುದು ಹಾಲಿವುಡ್ ಸ್ಟಂಟ್ ಮಾಸ್ಟರ್ ಯಾನಿಕ್ ಬೆನ್. ಯಾವ ಸ್ಟಾರ್ ಹೀರೋಗೂ ಕಮ್ಮಿ ಇಲ್ಲದಂತೆ ಸಮಂತಾ ಫೈಟಿಂಗ್ ಮಾಡಿದ್ದಾರೆ ಎಂಬುದಕ್ಕೆ ಟ್ರೇಲರ್ನಲ್ಲಿ ಝಲಕ್ ಕಾಣಿಸಿದೆ. ಅವರ ಬದ್ಧತೆ ಕಂಡು ಯಾನಿಕ್ ಬೆನ್ (Yannick Ben) ಅವರು ವಾವ್ ಎಂದಿದ್ದಾರೆ. ಈ ಎಲ್ಲ ಕಾರಣದಿಂದಾಗಿ ‘ಯಶೋದಾ’ ಚಿತ್ರ ನಿರೀಕ್ಷೆ ಮೂಡಿಸಿದೆ.
ಸಮಂತಾ ಮತ್ತು ಯಾನಿಕ್ ಬೆನ್ ಅವರು ಈ ಹಿಂದೆ ‘ಫ್ಯಾಮಿಲಿ ಮ್ಯಾನ್ 2′ ವೆಬ್ ಸೀರೀಸ್‌ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈಗ ‘ಯಶೋದಾ’ ಚಿತ್ರಕ್ಕಾಗಿ ಮತ್ತೊಮ್ಮೆ ಒಂದಾಗಿದ್ದಾರೆ. ಸಮಂತಾ ಅವರ ಬದ್ಧತೆ ಮತ್ತು ಇಚ್ಛಾಶಕ್ತಿಯಿಂದಲೇ ಈ ಚಿತ್ರದ ಆ್ಯಕ್ಷನ್ ದೃಶ್ಯಗಳು ತುಂಬ ಚೆನ್ನಾಗಿ ಮೂಡಿಬಂದಿವೆ ಎಂಬುದು ಯಾನಿಕ್ ಬೆನ್ ಅವರ ಅಭಿಪ್ರಾಯ.
ಹಲವು ಬಗೆಯ ಸಮರ ಕಲೆಗಳಲ್ಲಿ ಯಾನಿಕ್ ಬೆನ್ ಅವರು ಪರಿಣತಿ ಹೊಂದಿದ್ದಾರೆ. ತಮ್ಮ ಕೌಶಲವನ್ನು ಹಾಲಿವುಡ್, ಬಾಲಿವುಡ್, ಟಾಲಿವುಡ್ ಸಿನಿಮಾಗಳಿಗೆ ಅವರು ಧಾರೆ ಎರೆದಿದ್ದಾರೆ. ಈಗ ‘ಯಶೋದಾ’ ಚಿತ್ರದಲ್ಲಿ ಸಮಂತಾ ಅವರಿಗೆ ಸಾಹಸ ಹೇಳಿಕೊಡುವ ಮೂಲಕ ಚಿತ್ರದ ಮೆರುಗನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ ಯಾನಿಕ್ ಬೆನ್.
‘ಯಶೋದಾ’ ಚಿತ್ರದಲ್ಲಿ ಸಮಂತಾ ಅವರು ಬಾಡಿಗೆ ತಾಯಿಯ ಪಾತ್ರ ಮಾಡಿದ್ದಾರೆ. ಟ್ರೇಲರ್ನಲ್ಲಿ ಈ ವಿಚಾರ ಬಹಿರಂಗ ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಸ್ಟಾರ್ ಹೀರೋಗಳ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುವ ಟ್ರೆಂಡ್ ಜೋರಾಗಿದೆ. ನಟಿಯರು ಕೂಡ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಮಂತಾ ಅವರ ‘ಯಶೋದಾ’ ಚಿತ್ರ ಬಿಡುಗಡೆ ಆಗುತ್ತಿದೆ.
ಸಮಂತಾ ಜೊತೆ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ, ಪ್ರಿಯಾಂಕಾ ಶರ್ಮಾ ಮುಂತಾದವರು ನಟಿಸಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹರಿ ಮತ್ತು ಹರೀಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.