ಜಾನ್ ಸೀನಾ ಜೊತೆ ಪ್ರಿಯಾಂಕಾ ಚೋಪ್ರಾ, ಭರ್ಜರಿ ಆಕ್ಷನ್ ಸಿನಿಮಾ, ಶೀಘ್ರವೇ ಬಿಡುಗಡೆ
Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಮತ್ತು ಭಾರತೀಯ ಚಿತ್ರರಂಗ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ದೊಡ್ಡ ಹಾಲಿವುಡ್ ಸ್ಟಾರ್ಗಳೊಟ್ಟಿಗೆ ಅವರು ನಟಿಸುತ್ತಿದ್ದಾರೆ. ಡಬ್ಲುಡಬ್ಲುಇ ಸ್ಟಾರ್ ಜಾನ್ ಸೀನಾ ಜೊತೆಗೆ ಪ್ರಿಯಾಂಕಾ ಚೋಪ್ರಾ ನಟಿಸಿರುವ ಹೊಸ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಲಿವುಡ್ (Hollywood) ಮತ್ತು ಭಾರತೀಯ ಚಿತ್ರರಂಗ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅತ್ತ ಹಾಲಿವುಡ್ನಲ್ಲೂ ದೊಡ್ಡ ಪ್ರೊಡಕ್ಷನ್ ಹೌಸ್ಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಭರ್ಜರಿ ಆಕ್ಷನ್ ವೆಬ್ ಸರಣಿ ‘ಸಿಟಾಡೆಲ್’ನಲ್ಲಿ ನಟಿಸಿದ್ದ ಪ್ರಿಯಾಂಕಾ ಚೋಪ್ರಾ ಇದೀಗ ಅದಕ್ಕೂ ದೊಡ್ಡ ಆಕ್ಷನ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ.
ಡಬ್ಲುಡಬ್ಲುಇ ಚಾಂಪಿಯನ್ ಆಗಿದ್ದ ಜಾನ್ ಸೀನಾ, ಪ್ರಿಯಾಂಕಾ ಚೋಪ್ರಾ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ಬ್ರಿಟೀಷ್ ನಟ ಇದ್ರಿಸ್ ಇಲ್ಬಾ ಅವರುಗಳು ಒಟ್ಟಿಗೆ ನಟಿಸಿರುವ ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಜಾನ್ ಸೀನಾ, ಅಮೆರಿಕದ ಅಧ್ಯಕ್ಷನ ಪಾತ್ರದಲ್ಲಿ, ಇದ್ರಿಸ್ ಇಲ್ಬಾ ಬ್ರಿಟನ್ ಪ್ರಧಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರದ್ದು ಈ ಇಬ್ಬರನ್ನೂ ರಕ್ಷಿಸುವ ಎಂಐ6 ಏಜೆಂಟ್ನ ಪಾತ್ರ. ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಮತ್ತು ಕಾಮಿಡಿ ಇದೆ.
ಸಿನಿಮಾದ ಟ್ರೈಲರ್ನಲ್ಲಿ ತೋರಿಸಿರುವಂತೆ ಜಾನ್ ಸೀನಾ ಹಾಗೂ ಇದ್ರಿಸ್ ಇಲ್ಬಾ ಅವರುಗಳು ರಾಜತಾಂತ್ರಿಕ ಪ್ರವಾಸದಲ್ಲಿ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ವಿಮಾನದ ಮೇಲೆ ದಾಳಿಯಾಗುತ್ತದೆ. ಇಬ್ಬರೂ ಸಹ ವಿಮಾನದಿಂದ ಹೇಗೋ ತಪ್ಪಿಸಿಕೊಂಡು ಅರಣ್ಯ ಸೇರಿಕೊಳ್ಳುತ್ತಾರೆ. ಅಲ್ಲಿಂದ ಅವರ ಮೇಲೆ ವೈರಿಗಳ ಸತತ ದಾಳಿ ಶುರುವಾಗುತ್ತದೆ. ನಟಿ ಪ್ರಿಯಾಂಕಾ ಚೋಪ್ರಾ ಈ ಇಬ್ಬರನ್ನೂ ಅಪಾಯದಿಂದ ರಕ್ಷಿಸುತ್ತಾರೆ. ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಜೊತೆಗೆ ಸಾಕಷ್ಟು ಕಾಮಿಡಿ ದೃಶ್ಯಗಳು ಸಹ ಇವೆ.
ಇದನ್ನೂ ಓದಿ:‘ಕ್ರಿಶ್ 4’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ? ಬಾಲಿವುಡ್ ಕಡೆಗೆ ಮತ್ತೆ ಒಲವು
‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾವನ್ನು ರಷಿಯನ್ ಸಿನಿಮಾ ನಿರ್ದೇಶಕ ಇಲ್ಯಾ ನೈಶಲರ್ ನಿರ್ದೇಶನ ಮಾಡಿದ್ದಾರೆ. ದಿ ಸ್ಯಾಫರನ್ ಕಂಪೆನಿ, ಬಿಗ್ ಇಂಡಿ ಪಿಕ್ಚರ್ಸ್ನವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾವು ಜುಲೈ 02ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.
‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾ ಸೇರಿದಂತೆ ಪ್ರಿಯಾಂಕಾ ಚೋಪ್ರಾ ಕೈಯಲ್ಲಿ ಬರೋಬ್ಬರಿ ಆರು ಸಿನಿಮಾಗಳಿವೆ. ಹಾಲಿವುಡ್ ಸಿನಿಮಾಗಳಾದ ‘ದಿ ಬ್ಲಫ್’, ‘ಜಡ್ಜ್ಮೆಂಟ್ ಡೇ’ ಸಿನಿಮಾಗಳಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಇದರ ಹೊರತಾಗಿ ರಾಜಮೌಳಿ ನಿರ್ದೇಶನದ ಸಿನಿಮಾ, ಹೃತಿಕ್ ನಟಿಸಿ ನಿರ್ದೇಶಿಸಲಿರುವ ‘ಕ್ರಿಶ್ 4’ ಮತ್ತು ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶನದ ಸೈ-ಫೈ ಸಿನಿಮಾನಲ್ಲಿಯೂ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




