ಮಾದಕ ವಸ್ತು ಹೊಂದಿದ್ದ ಗಾಯಕಿ ನಿಕ್ಕಿ ಮಿನಾಜ್ ಬಂಧನ, ಕೋಟ್ಯಂತರ ಹಣ ನಷ್ಟ
ಅಮೆರಿಕದ ಖ್ಯಾತ ಗಾಯಕಿ, ರ್ಯಾಪರ್, ಮಾಡೆಲ್ ನಿಕ್ಕಿ ಮಿನಾಜ್ ಅನ್ನು ನೆದರ್ಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ. ಆಮರ್ಸ್ಟರ್ಡ್ಯಾಂ ವಿಮಾನ ನಿಲ್ದಾಣದಲ್ಲಿ ನಿಕ್ಕಿ ಮಿನಾಜ್ ಬ್ಯಾಗ್ನಲ್ಲಿ ಡ್ರಗ್ಸ್ ಪತ್ತೆಯಾಗಿದೆ.
ಅಮೆರಿಕದ (America) ಖ್ಯಾತ ಗಾಯಕಿ, ರ್ಯಾಪರ್ ಮತ್ತು ಮಾಡೆಲ್ (Model) ಆಗಿರುವ ನಿಕ್ಕಿ ಮಿನಾಜ್ ಅನ್ನು ನೆದರ್ಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ. ನಿಕಿ ಮಿನಾಜ್ ನಿಷೇಧಿತ ಮಾದಕ ವಸ್ತುವನ್ನು ತಮ್ಮ ಬಳಿ ಹೊಂದಿದ್ದಾರೆಂಬ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ. ಇಡೀ ಘಟನೆಯನ್ನು ನಿಕ್ಕಿ ಮಿನಾಜ್ ಇನ್ಸ್ಟಾಗ್ರಾಂನಲ್ಲಿ ಲೈವ್ ವಿಡಿಯೋ ಮಾಡಿದ್ದಾರೆ. ಆಮ್ಸ್ಟರ್ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನಿಕ್ಕಿ ಮಿನಾಜ್ ಅನ್ನು ಪೊಲೀಸರು ಇನ್ನೂ ವಿಚಾರಣೆಯಲ್ಲಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಇಂಗ್ಲೆಂಡ್ನ ಮ್ಯಾಂಚೆಸ್ಟರ್ಗೆ ವಿಮಾನ ಹತ್ತಲು ಏರ್ಪೋರ್ಟ್ಗೆ ಬಂದ ನಿಕ್ಕಿ ಮಿನಾಜ್ರನ್ನು ತಪಾಸಣೆಗೆ ಒಳಪಡಿಸಿದಾಗ ಅವರ ಬ್ಯಾಗ್ನಲ್ಲಿ ಕೆಲವು ‘ಸಾಫ್ಟ್ ಡ್ರಗ್ಸ್’ ಪತ್ತೆಯಾಗಿವೆ. ಆ ವಸ್ತುಗಳು ನೆದರ್ಲ್ಯಾಂಡ್ಸ್ನಲ್ಲಿ ನಿಷೇಧಿತವಾಗಿವೆ. ಪೊಲೀಸರು ನಿಕ್ಕಿ ಮಿನಾಜ್ರನ್ನು ತಪಾಸಣೆ ಒಳಪಡಿಸಿದಾಗಲೇ ಅವರು ಮೊಬೈಲ್ ಮೂಲಕ ಲೈವ್ ವಿಡಿಯೋ ಘಟನೆಯನ್ನು ಚಿತ್ರೀಕರಣ ಮಾಡಿದ್ದಾರೆ.
ಪೊಲೀಸರು ಮಾದಕ ವಸ್ತುಗಳನ್ನು ವಶಪಡಿಸಿಕೊಂಡ ಬಳಿಕ, ನಿಕ್ಕಿ ಮಿನಾಜ್, ‘ಆ ವಸ್ತುಗಳು ನನಗೆ ಸೇರಿದ್ದಲ್ಲ, ನನ್ನ ಭದ್ರತಾ ಸಿಬ್ಬಂದಿಗೆ ಸೇರಿದ್ದು’ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಆ ಹೇಳಿಕೆಯನ್ನು ಸ್ವೀಕರಿಸಿಲ್ಲ. ಅಂತಿಮವಾಗಿ ಪೊಲೀಸರು, ನಿಕ್ಕಿ ಮಿನಾಜ್ರನ್ನು ತಮ್ಮ ಕಾರಿನಲ್ಲಿ ಕೂರಲು ಹೇಳಿದ್ದಾರೆ. ಆದರೆ ಆಗ ನಿಕ್ಕಿ ಮಿನಾಜ್ ತುಸು ಪ್ರತಿಭಟಿಸಿದ್ದಾರೆ. ‘ಈಗೇನು? ನನ್ನನ್ನು ಬಂಧಿಸುತ್ತೀರಿಯೇ’ ಎಂದು ಪ್ರಶ್ನೆ ಮಾಡಿದ್ದರು. ಪೊಲೀಸರು ಅದಕ್ಕೆ ಉತ್ತರಿಸದೇ ಕಾರಿನಲ್ಲಿ ಕುಳಿತುಕೊಳ್ಳಿ ಎಂದಷ್ಟೆ ಹೇಳಿರುವುದು ವಿಡಿಯೋನಲ್ಲಿ ದಾಖಲಾಗಿದೆ.
ಇದನ್ನೂ ಓದಿ:‘ಪುಷ್ಪ’ ಚಿತ್ರದ ‘ತಗ್ಗೋದೆ ಇಲ್ಲ’ ಡೈಲಾಗ್ನ ಕಾಪಿ ಮಾಡಿದ ಹಾಲಿವುಡ್ ಗಾಯಕ
ನಿಕ್ಕಿ ಮಿನಾಜ್, ಇಂಗ್ಲೆಂಡ್ನಲ್ಲಿ ಕೆಲವು ಲೈವ್ ಕಾರ್ಯಕ್ರಮಗಳನ್ನು ನೀಡಲಿದ್ದರು. ಮ್ಯಾಂಚೆಸ್ಟರ್ ಸೇರಿದಂತೆ ಇನ್ನೂ ಕೆಲವು ಪ್ರಮುಖ ನಗರಗಳಲ್ಲಿ ನಿಕ್ಕಿ ಮಿನಾಜ್ರ ಲೈವ್ ಗಿಗ್ ಶೋಗಳನ್ನು ಆಯೋಜಿಸಲಾಗಿತ್ತು. ಟಿಕೆಟ್ ಮಾರಾಟವೂ ನಡೆದು ಕಾರ್ಯಕ್ರಮದ ಸಕಲ ಸಿದ್ಧತೆ ಮುಗಿದಿತ್ತು. ಆದರೆ ಈಗ ನಿಕ್ಕಿ ಮಿನಾಜ್ರ ಬಂಧನದಿಂದಾಗಿ ಕಾರ್ಯಕ್ರಮಗಳು ರದ್ದಾಗಿದ್ದು ನೂರಾರು ಕೋಟಿ ಹಣ ನಷ್ಟವಾಗಿದೆ.
ನಿಕ್ಕಿ ಮಿನಾಜ್ ಅಮೆರಿಕದ ಜನಪ್ರಿಯ ಗಾಯಕಿ ಹಾಗೂ ಮಾಡೆಲ್ ಆಗಿದ್ದಾರೆ. ಅವರ ‘ಪಿಂಕ್ ಫ್ರೈಡೆ’ ಆಲ್ಬಂ ಬಹಳ ಜನಪ್ರಿಯ ಅದೇ ಹೆಸರಿನಲ್ಲಿ ಮೂರು ಆಲ್ಬಂ ಹೊರತಂದಿದ್ದಾರೆ. ನಿಕ್ಕಿ ಅವರ ಹಲವು ಲೈವ್ ಟೂರ್ಗಳು ‘ಪಿಂಕ್ ಫ್ರೈಡೇ’ ಹೆಸರಿನಲ್ಲಿಯೇ ಆಗಿ ಯಶಸ್ವಿಯೂ ಆಗಿವೆ. ಕೆಲವು ಸಿನಿಮಾಗಳಲ್ಲಿಯೂ ನಿಕ್ಕಿ ಕೆಲಸ ಮಾಡಿದ್ದಾರೆ. ‘ಐಎಸ್ ಏಜ್’, ‘ಆಂಗ್ರಿ ಬರ್ಡ್ಸ್’ ಕಾರ್ಟೂನ್ ಸಿನಿಮಾಕ್ಕೆ ಧ್ವನಿ ನೀಡಿದ್ದಾರೆ. ‘ಬಾರ್ಬರ್ ಶಾಪ್’, ‘ದಿ ಅತರ್ ವುಮೆನ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ