Vijayendra Prasad: ‘ನಾನು ಕಥೆ ಕದಿಯುತ್ತೇನೆ’; ಯಶಸ್ಸಿನ ರಹಸ್ಯ ಬಿಚ್ಚಿಟ್ಟ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್
IFFI Goa: ಸಿನಿಮಾ ಕ್ಷೇತ್ರದಲ್ಲಿ ಬರಹಗಾರರಾಗಿ ತೊಡಗಿಸಿಕೊಳ್ಳಬೇಕು ಎಂಬ ಆಸೆ ಅನೇಕರಿಗೆ ಇದೆ. ಅಂಥವರಿಗೆಲ್ಲ ವಿಜಯೇಂದ್ರ ಪ್ರಸಾದ್ ಅವರು ಸ್ಫೂರ್ತಿ ಆಗಿದ್ದಾರೆ.
ಖ್ಯಾತ ನಿರ್ದೇಶಕ ರಾಜಮೌಳಿ (SS Rajamouli) ಅವರ ಯಶಸ್ಸಿನ ಹಿಂದೆ ಅವರ ಕುಟುಂಬದವರ ಕೊಡುಗೆ ಸಾಕಷ್ಟಿದೆ. ಅದರಲ್ಲೂ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಬರೆದ ಕಥೆಗಳಿಂದಾಗಿ ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ‘ಬಾಹುಬಲಿ’, ‘ಮಗಧೀರ’, ‘ಸಿಂಹಾದ್ರಿ’, ‘ವಿಕ್ರಮಾರ್ಕುಡು’, ‘ಆರ್ಆರ್ಆರ್’ (RRR) ಸೇರಿದಂತೆ ಹಲವು ಚಿತ್ರಗಳಿಗೆ ಕಥೆ ಬರೆದಿದ್ದು ವಿಜಯೇಂದ್ರ ಪ್ರಸಾದ್ ಅವರೇ. ಸಲ್ಮಾನ್ ಖಾನ್ ನಟನೆಯ ಸೂಪರ್ ಹಿಟ್ ಚಿತ್ರ ‘ಬಜರಂಗಿ ಭಾಯಿಜಾನ್’ ಚಿತ್ರದ ಕಥೆ ಕೂಡ ವಿಜಯೇಂದ್ರ ಪ್ರಸಾದ್ (Vijayendra Prasad) ಅವರ ಬತ್ತಳಿಕೆಯಿಂದ ಬಂದಿದ್ದು. ಇಂಥ ರೂಚಕ ಕಥೆಗಳ ಸೀಕ್ರೆಟ್ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ‘ನಾನು ಕಥೆ ಕದಿಯುತ್ತೇನೆ’ ಎಂದು ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಗೋವಾದಲ್ಲಿ ನ.20ರಿಂದ ಅಂತಾರಾಷ್ಟ್ರೀಯ ಭಾರತೀಯ ಸಿನಿಮೋತ್ಸವ ನಡೆಯುತ್ತಿದೆ. ಇದರಲ್ಲಿನ ಒಂದು ಸಂವಾದ ಕಾರ್ಯಕ್ರಮದಲ್ಲಿ ವಿಜಯೇಂದ್ರ ಪ್ರಸಾದ್ ಅವರು ಭಾಗವಹಿಸಿದ್ದಾರೆ. ಈ ವೇಳೆ ಅವರು ಸಿನಿಮಾಗಾಗಿ ಕಥೆ ಬರೆಯುವ ಪ್ರಕ್ರಿಯೆಯ ಬಗ್ಗೆ ಮಾತನಾಡಿದ್ದಾರೆ.
‘ನಾನು ಕಥೆ ಬರೆಯುವುದಿಲ್ಲ. ಕಥೆ ಕದಿಯುತ್ತೇನೆ. ನಿಮ್ಮ ನಡುವೆ ಇರುವ ಕಥೆಯನ್ನೇ ಕದಿಯುತ್ತೇನೆ. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಾಗಿರಲಿ ಅಥವಾ ನಿಜ ಜೀವನದ ಘಟನೆಗಳೇ ಆಗಿರಲಿ.. ಎಲ್ಲ ಕಡೆಗಳಲ್ಲಿ ಕಥೆಗಳಿವೆ. ಅದನ್ನು ನೀವು ನಿಮ್ಮದೇ ಆದಂತಹ ವಿಶೇಷ ಶೈಲಿಯಲ್ಲಿ ಪ್ರಸ್ತುತ ಪಡಿಸಬೇಕು’ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಬರಹಗಾರರಾಗಿ ತೊಡಗಿಸಿಕೊಳ್ಳಬೇಕು ಎಂಬ ಆಸೆ ಅನೇಕರಿಗೆ ಇದೆ. ಅಂಥವರಿಗೆಲ್ಲ ವಿಜಯೇಂದ್ರ ಪ್ರಸಾದ್ ಅವರು ಸ್ಫೂರ್ತಿ ಆಗಿದ್ದಾರೆ. ಅವರು ಕಥೆ ಬರೆದ ‘ಆರ್ಆರ್ಆರ್’ ಸಿನಿಮಾ ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಯಿತು. ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ಈಗ ಅದರ ಸೀಕ್ವೆಲ್ಗಾಗಿ ಸಿದ್ಧತೆ ನಡೆಯುತ್ತಿದೆ.
‘ಆರ್ಆರ್ಆರ್’ ಸಿನಿಮಾ ನೋಡಿ ವಿದೇಶದಲ್ಲಿನ ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಎರಡನೇ ಪಾರ್ಟ್ ಮೂಡಿಬರುತ್ತಿದೆ ಎಂಬುದನ್ನು ಇತ್ತೀಚೆಗೆ ಬಹಿರಂಗ ಪಡಿಸಲಾಗಿದೆ. ಅದಕ್ಕಾಗಿ ತಾವು ಕಥೆ ಬರೆಯುತ್ತಿರುವುದು ನಿಜ ಎಂದು ವಿಜಯೇಂದ್ರ ಪ್ರಸಾದ್ ಖಚಿತ ಪಡಿಸಿದ್ದಾರೆ.
‘ಕಥೆ ಬರೆಯುವುದು ಎಂದರೆ ಶೂನ್ಯದಿಂದ ಏನನ್ನಾದರೂ ಸೃಷ್ಟಿಸುವುದು. ಒಂದು ಸುಳ್ಳನ್ನು ಸತ್ಯ ಎಂಬಂತೆ ಪ್ರಸ್ತುತ ಪಡಿಸಬೇಕು. ಉತ್ತಮವಾಗಿ ಸುಳ್ಳುಗಳನ್ನು ಹೇಳಬಲ್ಲಂತಹ ವ್ಯಕ್ತಿ ಉತ್ತಮ ಕಥೆಗಾರನಾಗಬಲ್ಲ’ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
ಕಥೆಗಾರನಾಗಿ ವಿಜಯೇಂದ್ರ ಪ್ರಸಾದ್ ಅವರಿಗೆ ಸಾಕಷ್ಟು ಬೇಡಿಕೆ ಇದೆ. ಭಾರತೀಯ ಚಿತ್ರರಂಗದಲ್ಲಿ ಅವರು ಸಖತ್ ಬ್ಯುಸಿ ಕಥೆಗಾರನಾಗಿದ್ದಾರೆ. ಕಥೆ ಬರೆದಿದ್ದಕ್ಕಾಗಿ ಅವರು ಕೈ ತುಂಬ ಸಂಭಾವನೆ ಪಡೆಯುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.