‘ಅವರನ್ನು ಮಾತ್ರ ಅಪರಾಧಿಯನ್ನಾಗಿ ಮಾಡುವುದು ಸರಿಯಲ್ಲ’; ಅಲ್ಲು ಅರ್ಜುನ್ ಪರ ಬ್ಯಾಟ್ ಬೀಸಿದ ಪವನ್ ಕಲ್ಯಾಣ್
ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ‘ಪುಷ್ಪ 2’ ಸಿನಿಮಾ ವೀಕ್ಷಣೆ ವೇಳೆ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿ ಅಲ್ಲು ಅರ್ಜುನ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದ್ದು, ಅವರನ್ನು ಬಂಧಿಸಲಾಗಿತ್ತು. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಈ ಘಟನೆಯನ್ನು ಖಂಡಿಸಿದ್ದು, ಸಿನಿಮಾ ಇಂಡಸ್ಟ್ರಿ ಈ ಘಟನೆಯಿಂದ ಪಾಠ ಕಲಿಯಬೇಕೆಂದು ಹೇಳಿದ್ದಾರೆ.
ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸೆನ್ಸೇಷನ್ ಸೃಷ್ಟಿಸಿದೆ. ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ವೀಕ್ಷಿಸಲು ತೆರಳಿದ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದ್ದರಿಂದ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಅಲ್ಲು ಅರ್ಜುನ್ ಅವರನ್ನು ಬಂಧನ ಕೂಡ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಕೋಲಿನಲ್ಲಿ ಹೋಗೋದಕ್ಕೆ ಕೊಡಲಿ ತೆಗೆದುಕೊಂಡರು’ ಎಂಬ ಅಭಿಪ್ರಾಯವನ್ನು ಅವರು ಹೊರಹಾಕಿದ್ದಾರೆ.
‘ಘಟನೆಯ ಹಿಂದೆ ಏನಾಗಿದೆ ಎಂಬ ಸಂಪೂರ್ಣ ಮಾಹಿತಿ ನನಗೆ ತಿಳಿದಿಲ್ಲ. ಕಾನೂನು ಎಲ್ಲರಿಗೂ ಒಂದೇ. ನಾನು ಈ ರೀತಿಯ ಘಟನೆಗಳಲ್ಲಿ ಪೊಲೀಸರನ್ನು ದೂರುವುದಿಲ್ಲ. ಅವರು ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಾರೆ. ಥಿಯೇಟರ್ ಸಿಬ್ಬಂದಿಯಾದರೂ ಅಲ್ಲು ಅರ್ಜುನ್‌ಗೆ ಪರಿಸ್ಥಿತಿಯ ಬಗ್ಗೆ ಮೊದಲೇ ತಿಳಿಸಬೇಕಿತ್ತು. ಥಿಯೇಟರ್ನಲ್ಲಿ ಕುಳಿತ ಬಳಿಕ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿ ಅಲ್ಲು ಅರ್ಜುನ್ ಅವರನ್ನು ಕರೆದುಕೊಂಡು ಹೋಗಬಹುದಿತ್ತು’ ಎಂದಿದ್ದಾರೆ ಪವನ್ ಕಲ್ಯಾಣ್.
‘ಅಲ್ಲು ಅರ್ಜುನ್ ಕಡೆಯವರು ಸಂತ್ರಸ್ತ ಕುಟುಂಬವನ್ನು ಆದಷ್ಟು ಬೇಗ ಭೇಟಿ ಮಾಡಿದರೆ ಉತ್ತಮ. ರೇವತಿ ಸಾವು ನನಗೆ ಶಾಕ್ ಎನಿಸಿದೆ. ಈ ವಿಚಾರದಲ್ಲಿ ಮಾನವೀಯತೆಯ ಕೊರತೆ ಎದ್ದು ಕಾಣಿಸಿದೆ. ಎಲ್ಲರೂ ರೇವತಿಯ ಮನೆಗೆ ಹೋಗಿ ವಿಷಾದ ವ್ಯಕ್ತಪಡಿಸಿ, ಧೈರ್ಯ ತುಂಬಬೇಕಿತ್ತು’ ಎಂದು ಪವನ್ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ.
‘ಸಿನಿಮಾ ಎಂಬುದು ಎಲ್ಲರೂ ಸೇರಿ ಮಾಡುವ ಪ್ರಯತ್ನ. ಇಲ್ಲಿ ಅಲ್ಲು ಅರ್ಜುನ್ ಅವರನ್ನು ಮಾತ್ರ ಅಪರಾಧಿಯನ್ನಾಗಿ ಮಾಡುವುದು ಸರಿಯಲ್ಲ. ಘಟನೆಯಿಂದ ತೀವ್ರ ನೋವಾಗಿದೆ. ಸಿಎಂ ರೇವಂತ್ ರೆಡ್ಡಿ ಪ್ರತಿಕ್ರಿಯೆ ಸೇರಿದಂತೆ ಕಾಲ್ತುಳಿತದ ನಂತರ ತೆಗೆದುಕೊಂಡ ನಿರ್ಧಾರಗಳು ಆಯಾ ಸಂದರ್ಭಕ್ಕೆ ಅನುಗುಣವಾಗಿದೆ’ ಎಂದು ಪವನ್ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆಗಿನ ಬಾಂಧವ್ಯದ ಬಗ್ಗೆ ರೇವಂತ್ ರೆಡ್ಡಿ ಮಾತು
‘ಚಿರಂಜೀವಿ ಕೂಡ ಅಭಿಮಾನಿಗಳನ್ನು ಭೇಟಿ ಮಾಡಲು ಥಿಯೇಟರ್ಗೆ ಭೇಟಿ ನೀಡುತ್ತಿದ್ದರು. ಆದರೆ, ಕೆಲವೊಮ್ಮೆ ಅಭಿಮಾನಿಗಳ ಕಣ್ತಪ್ಪಿಸಲು ಅವರು ವೇಷ ಬದಲಿಸಿ ಹೋಗುತ್ತಿದ್ದರು. ನಮ್ಮ ಸಿನಿಮಾ ಇಂಡಸ್ಟ್ರಿ ಈಗ ನಡೆದ ಘಟನೆಯಿಂದ ಕಲಿಯಬೇಕಿದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.