ಅಪ್ಪು ಸಮಾಧಿಗೆ ಭೇಟಿ ನೀಡಿದ ಲೈಂಗಿಕ ದೌರ್ಜನ್ಯ ಆರೋಪಿ ಜಾನಿ ಮಾಸ್ಟರ್
Jaani Master: ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಕಳೆದ ವರ್ಷ ಬಂಧನಕ್ಕೆ ಒಳಗಾಗಿ ಆ ನಂತರ ಜಾಮೀನಿನ ಮೇಲೆ ಹೊರಬಂದಿರುವ ತೆಲುಗು ಚಿತ್ರರಂಗದ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ನಿನ್ನೆ (ಜನವರಿ 28) ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅಪ್ಪು ಹಾಗೂ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು. ಬೆಂಗಳೂರಲ್ಲಿ ಹೊಸ ಪ್ರಾಜೆಕ್ಟ್ ಪ್ರಾರಂಭ ಮಾಡುತ್ತಿದ್ದಾರೆ ಜಾನಿ ಮಾಸ್ಟರ್.
![ಅಪ್ಪು ಸಮಾಧಿಗೆ ಭೇಟಿ ನೀಡಿದ ಲೈಂಗಿಕ ದೌರ್ಜನ್ಯ ಆರೋಪಿ ಜಾನಿ ಮಾಸ್ಟರ್](https://images.tv9kannada.com/wp-content/uploads/2025/01/jaa.jpg?w=1280)
ತೆಲುಗು ಚಿತ್ರರಂಗದ ಜನಪ್ರಿಯ ಸೆಲೆಬ್ರಿಟಿ, ರಾಷ್ಟ್ರಪ್ರಶಸ್ತಿ ವಿಜೇತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಕಂಠೀರವ ಸ್ಟುಡಿಯೋಕ್ಕೆ ಭೇಟಿ ನೀಡಿದ್ದ ಜಾನಿ ಮಾಸ್ಟರ್ ಅಪ್ಪು ಹಾಗೂ ಅಣ್ಣಾವ್ರ ಸಮಾಧಿಗೆ ತೆರಳಿ ಆಶೀರ್ವಾದ ಪಡೆದರು. ಬೆಂಗಳೂರಿನಲ್ಲಿ ಪ್ರಮುಖ ಪ್ರಾಜೆಕ್ಟ್ ಒಂದನ್ನು ಜಾನಿ ಮಾಸ್ಟರ್ ಪ್ರಾರಂಭಿಸುತ್ತಿದ್ದು ಅದಕ್ಕಾಗಿ ಅವರು ಅಪ್ಪು ಹಾಗೂ ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರಂತೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಮುಖ ಪ್ರಾಜೆಕ್ಟ್ ಒಂದನ್ನು ಪ್ರಾರಂಭ ಮಾಡಲಿದ್ದು ಅದಕ್ಕೆ ಮುಂಚೆ ಅಪ್ಪು ಹಾಗೂ ಡಾ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಿ ಅವರ ಆಶೀರ್ವಾದವನ್ನು ಪಡೆದುಕೊಂಡೆ ಎಂದು ಟ್ವಿಟ್ಟರ್ನಲ್ಲಿ ಜಾನಿ ಮಾಸ್ಟರ್ ಬರೆದುಕೊಂಡಿದ್ದಾರೆ. ಜಾನಿ ಮಾಸ್ಟರ್, ಕನ್ನಡದಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು, ಇದೀಗ ಜಾನಿ ಮಾಸ್ಟರ್ ಟ್ವೀಟ್ ಬಳಿಕ ಈ ಸುದ್ದಿ ಬಹುತೇಕ ಖಾತ್ರಿ ಆಗಿದೆ. ಜಾನಿ ಮಾಸ್ಟರ್ ಬೆಂಗಳೂರಿನಲ್ಲಿ ಡ್ಯಾನ್ಸ್ ಅಕಾಡೆಮಿ ತೆರೆಯಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಜಾನಿ ಮಾಸ್ಟರ್, ತೆಲುಗು ಚಿತ್ರರಂಗದ ಬಲು ಬೇಡಿಕೆಯ ಹಾಗೂ ಪ್ರತಿಭಾವಂತ ಡ್ಯಾನ್ಸ್ ಕೊರಿಯೋಗ್ರಾಫರ್. ಮೆಗಾಸ್ಟಾರ್ ಚಿರಂಜೀವಿ, ಜೂ ಎನ್ಟಿಆರ್, ಅಲ್ಲು ಅರ್ಜುನ್, ಪ್ರಭಾಸ್ ಸೇರಿದಂತೆ ಹಲವು ಸ್ಟಾರ್ ನಟ-ನಟಿಯರಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ತೆಲುಗು ಮಾತ್ರವೇ ಅಲ್ಲದೆ ತಮಿಳು, ಹಿಂದಿ ಸಿನಿಮಾಗಳಿಗೂ ಜಾನಿ ಮಾಸ್ಟರ್ ಕೆಲಸ ಮಾಡಿದ್ದಾರೆ. ಆದರೆ ಕಳೆದ ವರ್ಷ ಜಾನಿ ಮಾಸ್ಟರ್ ಮೇಲೆ ಅವರ ತಂಡದಲ್ಲಿಯೇ ಕೆಲಸ ಮಾಡುವ ಯುವತಿಯೊಬ್ಬಾಕೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಹೀಗಾಗಿ ಜಾನಿ ಮಾಸ್ಟರ್ ಬಂಧನವಾಗಿತ್ತು.
ಇದನ್ನೂ ಓದಿ:
ಜಾನಿ ಮಾಸ್ಟರ್ ತಂಡದಲ್ಲಿದ್ದ ಯುವತಿಯೊಬ್ಬಾಕೆ ಹೈದರಾಬಾದ್ನ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಘಟನೆ ನಡೆದಾಗ ದೂರುದಾರ ಯುವತಿ ಇನ್ನೂ ಅಪ್ರಾಪ್ತೆ ಆಗಿದ್ದ ಕಾರಣ ಜಾನಿ ಮಾಸ್ಟರ್ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು. ಜಾನಿ ಮಾಸ್ಟರ್ ಅನ್ನು ಪೊಲೀಸರು ಗೋವಾನಲ್ಲಿ ಬಂಧಿಸಿದ್ದರು. 2024ರ ಸೆಪ್ಟೆಂಬರ್ 19 ರಂದು ಜಾನಿ ಮಾಸ್ಟರ್ ಬಂಧನವಾಗಿತ್ತು. ಅಕ್ಟೋಬರ್ 24ರಂದು ಜಾನಿ ಮಾಸ್ಟರ್ಗೆ ಜಾಮೀನು ದೊರಕಿತು.
ಲೈಂಗಿಕ ದೌರ್ಜನ್ಯ ಆರೋಪದ ಬಳಿಕ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಜಾನಿ ಮಾಸ್ಟರ್ಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಜಾನಿ ಮಾಸ್ಟರ್ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ