‘ಕ್ಯಾಪ್ಟನ್ ಮಿಲ್ಲರ್’ ಪ್ರೀ ರಿಲೀಸ್ ಕಾರ್ಯಕ್ರಮ: ಅನುಚಿತವಾಗಿ ವರ್ತಿಸಿದವನ ಹಿಡಿದು ಥಳಿಸಿದ ನಟಿ

|

Updated on: Jan 05, 2024 | 3:18 PM

Aishwarya Raghupathi: ಶಿವರಾಜ್ ಕುಮಾರ್-ಧನುಶ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್​ನಲ್ಲಿ ವ್ಯಕ್ತಿಯೊಬ್ಬ ನಟಿಯೊಟ್ಟಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದೆ.

‘ಕ್ಯಾಪ್ಟನ್ ಮಿಲ್ಲರ್’ ಪ್ರೀ ರಿಲೀಸ್ ಕಾರ್ಯಕ್ರಮ: ಅನುಚಿತವಾಗಿ ವರ್ತಿಸಿದವನ ಹಿಡಿದು ಥಳಿಸಿದ ನಟಿ
ಐಶ್ವರ್ಯಾ
Follow us on

ಶಿವರಾಜ್ ಕುಮಾರ್ (Shiva Rajkumar) ಅಭಿನಯಿಸುತ್ತಿರುವ ಎರಡನೇ ತಮಿಳು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ನ ಪ್ರೀ ರಿಲೀಸ್ ಕಾರ್ಯಕ್ರಮ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಧನುಶ್ ಸೇರದಂತೆ ಹಲವು ನಟ-ನಟಿಯರು ತಮಿಳು ಸಿನಿಮಾರಂಗದ ಪ್ರಮುಖರು ಸಹ ಭಾಗಿಯಾಗಿದ್ದರು. ಕಾರ್ಯಕ್ರಮವೇನೋ ಅದ್ಧೂರಿಯಾಗಿ ನಡೆಯಿತು, ಆದರೆ ಕಾರ್ಯಕ್ರಮದಲ್ಲಿ ನಟಿಯೊಬ್ಬರು ಕಿರುಕುಳ ಎದುರಿಸಿದ್ದು, ಕಿರುಕುಳ ನೀಡಿದವನ ಹಿಡಿದು ನಟಿಯೇ ಥಳಿಸಿದ್ದಾರೆ. ಆ ಘಟನೆಯ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿ ಐಶ್ವರ್ಯಾ ರಘುಪತಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಈ ನಟಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದ ನಿರೂಪಣೆಯನ್ನೂ ಸಹ ಐಶ್ವರ್ಯಾ ರಘುಪತಿ ಅವರೇ ನಡೆಸಿಕೊಟ್ಟರು. ಆದರೆ ಕಾರ್ಯಕ್ರಮ ಮುಗಿಸಿ ಹೊರಡುವಾಗ ವ್ಯಕ್ತಿಯೊಬ್ಬ ಐಶ್ವರ್ಯಾ ರಘುಪತಿ ಅವರೊಟ್ಟಿಗೆ ಅನುಚಿತವಾಗಿ ನಡೆದುಕೊಂಡಿದ್ದಾನೆ. ಐಶ್ವರ್ಯಾರ ದೇಹ ಭಾಗವನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಕೂಡಲೇ ಆಕ್ರೋಶಗೊಂಡ ನಟಿ, ಆತನನ್ನು ಹಿಡಿದು ಎಲ್ಲರೆದರು ಭಾರಿಸಿದ್ದಾರೆ. ಮಾತ್ರವಲ್ಲದೆ ಆತನನ್ನು ನಿಂದಿಸಿ, ಕಾಲಿಗೆ ಬೀಳುವಂತೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಂಚಿಕೊಂಡಿರುವ ಐಶ್ವರ್ಯಾ ರಘುಪತಿ, ‘ಆ ಜನಜಂಗುಳಿಯಲ್ಲಿ ಒಬ್ಬ ವ್ಯಕ್ತಿ ನನ್ನೊಟ್ಟಿಗೆ ಅನುಚಿತವಾಗಿ ವರ್ತಿಸಿದ. ಕೂಡಲೇ ನಾನು ಅವನನ್ನು ಹಿಡಿದುಕೊಂಡೆ. ನಾನು ಹೊಡೆಯುವ ವರೆಗೆ ನನ್ನ ಬಿಗಿ ಹಿಡಿತ ಸಡಿಸಲಿಲ್ಲ, ಅವನು ಓಡಿ ಹೋಗಲು ಯತ್ನಿಸಿದ, ಬಿಡದೆ ಬೆನ್ನಟ್ಟಿ ಹೊಡೆದು ಕೋಪ ತೀರಿಸಿಕೊಂಡೆ. ಮಹಿಳೆಯ ದೇಹದ ಭಾಗವನ್ನು ಹಿಡಿದುಕೊಳ್ಳು ಅದೆಷ್ಟು ಧೈರ್ಯ ಅವನಿಗೆ, ಇದು ನನಗೆ ಅತೀವ ಕೋಪ ತರಿಸಿತ್ತು, ಹಾಗಾಗಿಯೇ ನಾನು ಅವನನ್ನು ಎದುರಿಸಿದೆ’ ಎಂದಿದ್ದಾರೆ ನಟಿ.

ಇದನ್ನೂ ಓದಿ:‘ಕ್ಯಾಪ್ಟನ್ ಮಿಲ್ಲರ್’ ಹಾಡು ಬಿಡುಗಡೆ: ಈರಪ್ಪನ ನೆನೆಯುತ ಧನುಶ್ ಜೊತೆ ಶಿವಣ್ಣನ ಕುಣಿತ

ಮುಂದುವರೆದು, ‘ನನ್ನ ಸುತ್ತಲೂ ಬಹಳ ಒಳ್ಳೆಯ ಜನರಿದ್ದಾರೆ. ಜಗತ್ತಿನಲ್ಲಿ ಸಾಕಷ್ಟು ಮಂದಿ ಬಹಳ ವಿನಯವಂತ, ಜಂಟಲ್​ಮೆನ್​ ಇದ್ದಾರೆಂಬುದರ ಅರಿವು ನನಗೆ ಇದೆ. ಆದರೆ ಇಂಥಹಾ ಕೆಟ್ಟ ಕೊಳಕು ಮನಸ್ಥಿತಿಯ ಕೆಲವರು ಅವರ ನಡುವೆ ಸೇರಿಕೊಂಡಿದ್ದಾರೆ. ಇದರ ಬಗ್ಗೆ ನನಗೆ ಬಹಳ ಭಯವಿದೆ’ ಎಂದು ಐಶ್ವರ್ಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಐಶ್ವರ್ಯಾ ರಘುಪತಿ ತಮಿಳಿನ ಜನಪ್ರಿಯ ನಿರೂಪಕಿಯರಲ್ಲಿ ಒಬ್ಬರು ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕೆಲ ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕನೊಬ್ಬ ಐಶ್ವರ್ಯಾ ರಘುಪತಿಗೆ ಬಲವಂತದಿಂದ ಹಾರ ಹಾಕಿದ್ದು ವಿವಾದವಾಗಿತ್ತು. ಬಳಿಕ ಆ ವ್ಯಕ್ತಿ ಬಹಿರಂಗವಾಗಿ ಕ್ಷಮೆ ಕೇಳಿದ್ದ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ