ಸೃಜನ್ ಲೋಕೇಶ್ ನಿರ್ದೇಶನದ ‘ಜಿಎಸ್ಟಿ’ ಸಿನಿಮಾ ವಿಮರ್ಶೆ

- Time - 129 Minutes
- Released - ನವೆಂಬರ್ 28,2025
- Language - ಕನ್ನಡ
- Genre - ಕಾಮಿಡಿ ಮತ್ತು ಹಾರರ್
ಕಥಾ ನಾಯಕನ (ಸೃಜನ್ ಲೋಕೇಶ್) ಹೆಸರಷ್ಟೇ ಲಕ್ಕಿ. ಆದರೆ, ಅವನು ಕಾಲಿಟ್ಟರೆ ಅಲ್ಲಿ ಲತ್ತೆಯೇ. ಆತ ಹುಟ್ಟುತ್ತಿದ್ದಂತೆ ಕುಟುಂಬ ಬೀದಿಗೆ ಬರುತ್ತದೆ. ಶಾಲೆಗೆ ಹೋದರೆ ಕಟ್ಟಡ ಕುಸಿಯುತ್ತದೆ. ಅಂಗಡಿ ಆರಂಭಿಸಿದಾಗ ಲಾಕ್ಡೌನ್. ತಾಯಿ ಸಾವಿಗೂ ಇತನೇ ಕಾರಣನಾಗುತ್ತಾನೆ. ಸಾಕಷ್ಟು ಕಷ್ಟಗಳನ್ನು ನೋಡಿ ಬೆಳೆದ ಲಕ್ಕಿ ಒಂದು ದಿನ ಸಾಯುವ ನಿರ್ಧಾರಕ್ಕೆ ಬರುತ್ತಾನೆ. ಸಾವಿನ ಕದ ಎಷ್ಟೇ ತಟ್ಟಿದರೂ ಅದು ತೆರೆದುಕೊಳ್ಳುವುದೇ ಇಲ್ಲ. ಅದಕ್ಕೆ ಕಾರಣ ಏನು? ಈ ಸಿನಿಮಾದಲ್ಲಿ ದೆವ್ವಗಳು ಹೇಗೆ ಬರುತ್ತವೆ? ಕಥೆಯಲ್ಲಿ ಏನೆಲ್ಲ ಆಗುತ್ತದೆ ಎಂಬುದೇ ಸಿನಿಮಾದ ಕಥೆ. ಸೃಜನ್ ಲೋಕೇಶ್ ಅವರು ತಮ್ಮ ಮೊದಲ ಚಿತ್ರದಲ್ಲೇ ಹಾರರ್ ವಿಷಯ ಎತ್ತಿಕೊಂಡಿದ್ದಾರೆ. ಹಾರರ್ ಸಿನಿಮಾ ಎಂದಾಕ್ಷಣ ನೆನಪಿಗೆ ಬರೋದುಚಿತ್ರ ವಿಚಿತ್ರವಾದ ದೆವ್ವದ ಮುಖಗಳು, ಭೂತ ಬಂಗಲೆ. ಆದರೆ, ಇದರಲ್ಲಿ ಹಾಗಿಲ್ಲ. ಈ ದೆವ್ವಗಳು ತುಂಬಾನೇ ಒಳ್ಳೆಯವು. ಅತೃಪ್ತ ಆತ್ಮವಾಗಿ ಓಡಾಡುವ ಇವರಿಗೆ ತೃಪ್ತಿ ಸಿಗಬೇಕು. ಈ ರೀತಿಯಲ್ಲಿ ತೃಪ್ತಿ ಪಡಿಸೋ ಕಥೆಯೇ ‘ಜಿಎಸ್ಟಿ’.
ಸೃಜನ್ ನಿರ್ದೇಶನದ ಮೊದಲ ಸಿನಿಮಾ ಇದು. ಅವರು ಮೊದಲ ಸಿನಿಮಾದಲ್ಲೇ ಸಾಕಷ್ಟು ಶ್ರಮ ಹಾಕಿದ್ದಾರೆ. ಸೃಜನ್ ಲೋಕೇಶ್ ಅವರು ‘ಮಜಾ ಟಾಕೀಸ್’ ರೀತಿಯ ಶೋಗಳನ್ನು ನಿರೂಪಣೆ ಮಾಡಿದ ಅನುಭವ ಅವರಿಗೆ ಇದೆ. ಆದರೆ, ಸಿನಿಮಾ ನಿರೂಪಣೆಯಲ್ಲಿ ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶ ಅವರಿಗೆ ಇತ್ತು.
ಸಿನಿಮಾ ಉದ್ದಕ್ಕೂ ಸೃಜನ್ ಲೋಕೇಶ್ ಕಾಣಿಸಿಕೊಳ್ಳುತ್ತಾರೆ. ದ್ವಿತೀಯಾರ್ಧದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ಅವರು ನಗಿಸುತ್ತಾರೆ. ಉಳಿದಂತೆ ಶರತ್ ಲೋಹಿತಾಶ್ವ, ವಿನಯಾ ಪ್ರಸಾದ್, ನಿವೇದಿತಾ ಗೌಡ, ತಬಲಾ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮೊದಲಾದವರು ತಮಗೆ ಸಿಕ್ಕ ಪಾತ್ರವನ್ನು ನಿರ್ವಹಿಸಿದ್ದಾರೆ.
ಇಡೀ ಸಿನಿಮಾದಲ್ಲಿ ನಗು ಉಕ್ಕಿಸೋದು ಎಂದರೆ ಗಿರೀಶ್ ಶಿವಣ್ಣ ಹಾಗೂ ಶೋಭರಾಜ್. ಕಳ್ಳನ ಪಾತ್ರದಲ್ಲಿ ಶೋಭರಾಜ್ ಮೆಚ್ಚುಗೆ ಪಡೆಯುತ್ತಾರೆ. ಅವರ ಪಾತ್ರ ನಗು ಉಕ್ಕಿಸುತ್ತದೆ. ಕಥಾ ನಾಯಕನ ಗೆಳೆಯನ ಪಾತ್ರದಲ್ಲಿ ಗಿರಿ ಮಿಂಚುತ್ತಾರೆ.
ಸಿನಿಮಾ ನಿರೂಪಣೆಯಲ್ಲಿ ಹಳೆಯ ವಿಧಾನ ಬಳಕೆ ಮಾಡಿಕೊಳ್ಳಲಾಗಿದ್ದು, ಯಾವುದೇ ಹೊಸತನವಿಲ್ಲ. ಸ್ಮಶಾನದ ಸೆಟ್ನ ಇನ್ನಷ್ಟು ಚಂದಗಾಣಿಸುವ ಅವಕಾಶವಿತ್ತು. ಆದರೆ, ಅದನ್ನು ಕೈಚೆಲ್ಲಲಾಗಿದೆ. ಬ್ಯಾಂಕ್ ರಾಬರಿ ದೃಶ್ಯ ಲಾಜಿಕ್ ಕೇಳುತ್ತದೆ. ಮೇಕಿಂಗ್ನಲ್ಲೂ ಹೊಸತನ ಬೇಕಿತ್ತು ಎನಿಸಿದೆ ಇರದು. ಸಿನಿಮಾದಲ್ಲಿ ಬರುವ ಹಾಡುಗಳು ಕಿವಿಯಲ್ಲಿ ಉಳಿದುಕೊಳ್ಳೋದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Fri, 28 November 25




