ಸೆಟ್ಟೇರಿತು ನಾನಿ ಹೊಸ ಸಿನಿಮಾ: RRR ನಿರ್ಮಾಪಕರ ಬಂಡವಾಳ
Nani: ಮಾಸ್ ಮಸಾಲೆ ಸಿನಿಮಾಗಳ ನಡುವೆ ಕಂಟೆಂಟ್ ಆಧರಿತ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸುತ್ತಿರುವ ನಾನಿಯ ಹೊಸ ಸಿನಿಮಾ ಸೆಟ್ಟೇರಿದೆ.

ನ್ಯಾಚುರಲ್ ಸ್ಟಾರ್ ನಾನಿ (Nani) ಈಗ ತೆಲುಗಿನ ಅತ್ಯಂತ ಬ್ಯುಸಿ ನಾಯಕ ನಟರಲ್ಲಿ ಒಬ್ಬರು. ರೆಡಿಯೋ ಜಾಕಿ ಆಗಿ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಹೀಗೆ ಏನೇನೋ ಕಷ್ಟಗಳ ಅನುಭವಿಸಿ ನಾಯಕನಾಗಿರುವ ನಾನಿ, ತಮ್ಮ ವಾರಗೆಯ ಇತರೆ ತೆಲುಗು ನಾಯಕ ನಟರಿಗಿಂತ ಬಹಳ ಭಿನ್ನ. ವಾರಗೆಯ ನಟರು ಕೇವಲ ಮಾಸ್ ಸಿನಿಮಾಗಳನ್ನು ಮಾಡಿ ಅಭಿಮಾನಿಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿದ್ದರೆ ನಾನಿ ಮಾತ್ರ ಕಂಟೆಂಟ್ಗೆ ಮೊದಲ ಪ್ರಾಧಾನ್ಯತೆ ನೀಡುತ್ತಲೇ ಬರುತ್ತಿದ್ದಾರೆ. ಕೌಟುಂಬಿಕ, ಕಥಾ ಆಧರಿತ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸುತ್ತಾ ಸಾಗಿದ್ದಾರೆ.
ನಾನಿ ನಟನೆಯ ‘ದಸರಾ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಅವರು ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅವರ ನಟನೆಯ ‘ಐ ಲವ್ ಯು ನಾನ್ನ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದರ ಬೆನ್ನಲ್ಲೆ ಇದೀಗ ನಾನಿ ಅವರ 31ನೇ ಸಿನಿಮಾ ಘೋಷಣೆ ಆಗಿದೆ.
ಈ ಹಿಂದೆ ನಾನಿ ನಾಯಕನಾಗಿದ್ದ ‘ಅಂಟೆ ಸುಂದರಾನಿಕಿ’ ಎಂಬ ಹಾಸ್ಯ ಪ್ರಧಾನ ಕೌಟುಂಬಿಕ ಪ್ರೇಮಕತಾ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಆತ್ರೇಯಾ ಮತ್ತೊಮ್ಮೆ ನಾನಿ ಜೊತೆ ಕೈ ಜೋಡಿಸಿದ್ದಾರೆ. ದಸರಾ ಹಬ್ಬದ ಅಂಗವಾಗಿ ಹೈದರಾಬಾದ್ ನಲ್ಲಿ ’ಸರಿಪೋದಾ ಶನಿವಾರಂ’ ಹೆಸರಿನ ಸಿನಿಮಾ ಸೆಟ್ಟೇರಿದೆ. ನಿರ್ಮಾಪಕ ಡಿವಿವಿ ದಾನಯ್ಯ ಚಿತ್ರಕಥೆಯನ್ನು ನಿರ್ದೇಶಕರಿಗೆ ಹಸ್ತಾಂತರಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ತೆಲುಗಿನ ಜನಪ್ರಿಯ ನಿರ್ಮಾಪಕ ದಿಲ್ ರಾಜು ಕ್ಯಾಮೆರಾಗೆ ಚಾಲನೆ ನೀಡಿದರೆ, ಜನಪ್ರಿಯ ನಿರ್ದೇಶಕ ವಿವಿ ವಿನಾಯಕ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ನಟ ಎಸ್.ಜೆ.ಸೂರ್ಯ ಸೇರಿದಂತೆ ಇಡೀ ಚಿತ್ರತಂಡ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:‘ನನಗೆ ರಾಜಕೀಯ ಬೇಡ, ಗೀತಾ ಜೊತೆ ಸದಾ ನಾನಿರ್ತೀನಿ’; ಅವಾರ್ಡ್ ಸ್ವೀಕರಿಸಿ ಮಾತನಾಡಿದ ಶಿವಣ್ಣ
’ಸರಿಪೋದಾ ಶನಿವಾರಂ’ ಪಕ್ಕಾ ಮಾಸ್ ಆಕ್ಷನ್ ಎಂಟರ್ ಟೈನರ್ ಸಿನಿಮಾ ಆಗಿದ್ದು, ಈ ಸಿನಿಮಾದ ಕಥೆ ಹಾಗೂ ಪಾತ್ರಕ್ಕಾಗಿ ನಾನಿ ಸಾಕಷ್ಟು ತರಬೇತಿ, ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಅರುಳ್ ಮೋಹನ್ ಈ ಸಿನಿಮಾಕ್ಕೆ ನಾಯಕಿ. ತಮಿಳು ಸ್ಟಾರ್ ನಟ ಎಸ್‌ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ, ಮುರಳಿ ಜಿ ಛಾಯಾಗ್ರಹಣವಿದೆ. ’ಸರಿಪೋದಾ ಶನಿವಾರಂ’ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ. ತ್ರಿಬಲ್ ಆರ್ ಸೇರಿದಂತೆ ಹಲವರು ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಡಿಡಿವಿ ಎಂಟರ್ ಟೈನರ್ ಬ್ಯಾನರ್ ನಡಿಯಲ್ಲಿ ದಾನಯ್ಯ ಹಾಗೂ ಕಲ್ಯಾಣ್ ದಾಸರಿ ’ಸರಿಪೋದಾ ಶನಿವಾರಂ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾವನ್ನು ಕನ್ನಡದಲ್ಲಿ ‘ಸೂರ್ಯನ ಶನಿವಾರ’ ಹೆಸರಿನಲ್ಲಿ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು.
ನಾನಿ ನಟನೆಯ ‘ಹಾಯ್ ನಾನ್ನ’ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ. ‘ಸರಿಪೋದಾ ಶನಿವಾರಂ’ ಸಿನಿಮಾ 2024ಕ್ಕೆ ತೆರೆಗೆ ಬರಲಿದೆ. ಸಿನಿಮಾದ ಬಗ್ಗೆ ನಾನಿಗೆ ಬಹಳ ವಿಶ್ವಾಸವಿದ್ದು, ‘ದಸರಾ’ ಸಿನಿಮಾದ ಮಾದರಿ ಇದರಲ್ಲಿಯೂ ಮಾಸ್ ಅವತಾರದಲ್ಲಿ ನಾನಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




