AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಯಲ್ಲಿ ದಾಖಲೆ ಬರೆದ ಕನ್ನಡ ಸಿನಿಮಾ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’

ವಿಜಯ್ ರಾಘವೇಂದ್ರ ನಟನೆಯ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾ ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಪ್ರಸಾರವಾಗಿ ಯಶಸ್ಸು ಕಂಡಿದೆ. ಸಿನಿಮಾದಲ್ಲಿ ಇರುವ ಕೌತುಕಮಯ ಕಥೆ ಮತ್ತು ಕಲಾವಿದರ ನಟನೆಗೆ ಒಟಿಟಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಒಟಿಟಿಯಲ್ಲಿ ದಾಖಲೆ ಬರೆದ ಕನ್ನಡ ಸಿನಿಮಾ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’
Vijay Raghavendra
ಮದನ್​ ಕುಮಾರ್​
|

Updated on: Aug 14, 2026 | 10:52 PM

Share

ಕನ್ನಡದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಒಟಿಟಿಯಲ್ಲಿ ಕೂಡ ಕನ್ನಡದ ಸಿನಿಮಾಗಳಿಗೆ ದೊಡ್ಡ ಪ್ರೇಕ್ಷಕರ ವರ್ಗ ಸೃಷ್ಟಿ ಆಗಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case of Seetharam) ಸಿನಿಮಾ. ಒಟಿಟಿ ಅಂಗಳದಲ್ಲಿ ಈ ಸಿನಿಮಾ ಅಭೂತಪೂರ್ವ ಯಶಸ್ಸು ಪಡೆದಿದೆ. ‘ಅಮೆಜಾನ್ ಪ್ರೈಮ್ ವಿಡಿಯೋ’ ಮೂಲಕ ವೀಕ್ಷಣೆಗೆ ಲಭ್ಯವಾಗಿರುವ ಈ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ನಟನೆಯ ಈ ಸಿನಿಮಾ ಸದ್ಯಕ್ಕೆ ಒಟಿಟಿಯಲ್ಲಿ ಟ್ರೆಂಡಿಂಗ್​ನಲ್ಲಿದೆ.

‘ಅಮೇಜಾನ್ ಪ್ರೈಮ್ ವಿಡಿಯೋ’ ಒಟಿಟಿಯಲ್ಲಿ ಪ್ರಸಾರ ಆಗುತ್ತಿರುವ ಭಾರತದ ‘ಟಾಪ್ 10’ ಸಿನಿಮಾಗಳ ಪಟ್ಟಿಯಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾ ಕೂಡ ಇದೆ. ಸತತ 15 ವಾರಗಳಿಂದ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಬರೋಬ್ಬರಿ 250 ಮಿಲಿಯನ್‌ಗಿಂತಲೂ ಹೆಚ್ಚು (25 ಕೋಟಿಗೂ ಅಧಿಕ) ಸ್ಟ್ರೀಮಿಂಗ್ ನಿಮಿಷಗಳನ್ನು ಪೂರೈಸಿ ಒಟಿಟಿಯಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದಿದೆ.

ಕನ್ನಡ ಚಿತ್ರರಂಗದ ಹೆಮ್ಮೆ:

ಇಂದಿನ ಪೈಪೋಟಿ ಯುಗದಲ್ಲಿ ಒಟಿಟಿ ವೇದಿಕೆಯಲ್ಲಿ 250 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳನ್ನು ದಾಟುವುದು ಎಂದರೆ ಸುಲಭವಲ್ಲ. ಭಾರತದ ಟಾಪ್ 10 ಪಟ್ಟಿಯಲ್ಲಿ ಸತತ 15 ವಾರಗಳ ಕಾಲ ಮುಂದುವರಿಯುವುದು ಕೂಡ ಸಾಮಾನ್ಯ ವಿಷಯವಲ್ಲ. ಈ ಸಾಧನೆಯು ಭಾರತೀಯ ಚಿತ್ರರಂಗದ ಮಟ್ಟದಲ್ಲಿ ಕನ್ನಡ ಸಿನಿಮಾಗಳ ಗುಣಮಟ್ಟಕ್ಕೆ ಹಿಡಿದ ಕನ್ನಡಿ ಆಗಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.

ಪ್ರೇಕ್ಷಕರಿಗೆ ಇಷ್ಟವಾಯ್ತು ಕಥೆ, ಅಭಿನಯ:

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ, ಸಾಗರ್ ಪುರಾಣಿಕ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ತಮ್ಮ ನೈಜ ಅಭಿನಯದ ಮೂಲಕ ಈ ಕಲಾವಿದರು ಎಲ್ಲರ ಗಮನ ಸೆಳೆದಿದ್ದಾರೆ. ಉತ್ತಮವಾದ ಚಿತ್ರಕಥೆ ಹಾಗೂ ಅದಕ್ಕೆ ಪೂರಕವಾದ ಈ ಪಾತ್ರವರ್ಗದ ಅತ್ಯುತ್ತಮ ನಟನೆಯಿಂದಾಗಿ ಈ ಚಿತ್ರವು ವಾರದಿಂದ ವಾರಕ್ಕೆ ಒಟಿಟಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ.

ಇದನ್ನೂ ಓದಿ: ಸೆಕೆಂಡ್ ಕೇಸ್ ಆಫ್ ಸೀತಾರಾಮ್ ವಿಮರ್ಶೆ: ಕುತೂಹಲದ ಕಥೆ, ಕೊನೆವರೆಗೂ ರೋಚಕತೆ

ಈ ಸಿನಿಮಾಗೆ ದೇವಿಪ್ರಸಾದ್ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಸಸ್ಪೆನ್ಸ್, ಎಮೋಷನ್ ಮತ್ತು ನೈಜತೆ ತುಂಬಿರುವ ಕಥೆಯನ್ನು ಅವರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ವರ್ಷ ಒಟಿಟಿಯಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟ ಪ್ರಮುಖ ಕನ್ನಡ ಸಿನಿಮಾಗಳಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಕೂಡ ಒಂದಾಗಿದೆ. ಪವನ್ ಒಡೆಯರ್ ಅವರು ಈ ಚಿತ್ರವನ್ನು ಪ್ರಸ್ತುತಪಡಿಸಿದ್ದಾರೆ. ದೇವಿಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us