‘ಆರ್ಆರ್ಆರ್’ ಎದುರು ‘ಬಚ್ಚನ್ ಪಾಂಡೆ’ ಕ್ಲ್ಯಾಷ್; ಬಾಕ್ಸ್ ಆಫೀಸ್ ಮುಖಾಮುಖಿ ತಪ್ಪಿಸಲು ಬೇರೆ ದಾರಿ ಏನು?
RRR Release Movie Date: ಇದು ಕೇವಲ ‘ಆರ್ಆರ್ಆರ್’ ಪರಿಸ್ಥಿತಿ ಮಾತ್ರವಲ್ಲ. ಕೊರೊನಾ ಹಾವಳಿಯಿಂದಾಗಿ ಬಹುತೇಕ ಎಲ್ಲ ಸಿನಿಮಾಗಳು ಕೂಡ ಇದೇ ಸಂಕಟವನ್ನು ಎದುರಿಸುತ್ತಿವೆ.
ಖ್ಯಾತ ನಿರ್ದೇಶಕ ರಾಜಮೌಳಿ (SS Rajamouli) ಅವರ ಹವಾ ಏನೆಂಬುದು ಗೊತ್ತೇ ಇದೆ. ಅವರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ ಅದರ ಎದುರು ಮುಖಾಮುಖಿಯಾಗಲು ಬೇರೆ ಯಾವುದೇ ಸಿನಿಮಾಗಳೂ ಧೈರ್ಯ ಮಾಡುವುದಿಲ್ಲ. ಆದರೂ ಕೆಲವೊಮ್ಮೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಅನಿವಾರ್ಯ ಆಗುತ್ತದೆ. ಈಗ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದ ಬಿಡುಗಡೆ ದಿನಾಂಕ (RRR Movie Release Date) ಗೊಂದಲಮಯ ಆಗಿದೆ. ಎರಡು ಸಂಭಾವ್ಯ ದಿನಾಂಕಗಳನ್ನು ಚಿತ್ರತಂಡ ಘೋಚಿಸಿದೆ. ಮಾರ್ಚ್ 18 ಅಥವಾ ಏಪ್ರಿಲ್ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಮಾ.18ರ ದಿನಾಂಕ ರಾಜಮೌಳಿ ಅವರ ಮೊದಲ ಆದ್ಯತೆ. ಆದರೆ ಅಷ್ಟರೊಳಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗದೇ ಇದ್ದರೆ ನಷ್ಟ ಆಗುತ್ತದೆ ಎಂಬ ಚಿಂತೆ ಕೂಡ ಅವರಿಗೆ ಇದೆ. ಹಾಗಾಗಿ ಎರಡನೇ ಆಯ್ಕೆಯಾಗಿ ಏ.28ರ ದಿನಾಂಕವನ್ನು ಅವರು ಲಾಕ್ ಮಾಡಿದ್ದಾರೆ. ಒಂದು ವೇಳೆ ಮಾ.18ರಂದು ‘ಆರ್ಆರ್ಆರ್’ ತೆರೆಕಂಡರೆ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಬಚ್ಚನ್ ಪಾಂಡೆ’ ಚಿತ್ರದ ಜೊತೆ ಕ್ಲ್ಯಾಷ್ ಏರ್ಪಡಲಿದೆ. ಯಾಕೆಂದರೆ, ಮಾ.18ರಂದು ಬಿಡುಗಡೆ ಆಗುವುದಾಗಿ ‘ಬಚ್ಚನ್ ಪಾಂಡೆ’ ಸಿನಿಮಾ ಈಗಾಗಲೇ ಘೋಷಣೆ ಮಾಡಿದೆ. ಒಂದು ವೇಳೆ ಈ ಕ್ಲ್ಯಾಷ್ ತಪ್ಪಿಸಬೇಕು ಎಂದು ಪ್ರಯತ್ನಿಸಿದರೆ ಅಜಯ್ ದೇವಗನ್ ನಟನೆಯ ‘ರನ್ ವೇ 34’ ಚಿತ್ರದ ಎದುರು ‘ಆರ್ಆರ್ಆರ್’ ಮುಖಾಮುಖಿ ಆಗಬೇಕಾಗುತ್ತದೆ.
ಹೌದು, ಅಜಯ್ ದೇವಗನ್, ಅಮಿತಾಭ್ ಬಚ್ಚನ್, ರಾಕುಲ್ ಪ್ರೀತ್ ಸಿಂಗ್ ಅಭಿನಯದ ‘ರನ್ ವೇ 34’ ಚಿತ್ರ ಏ.29ರಂದು ಬಿಡುಗಡೆಗೆ ಸಿದ್ಧವಾಗಿದೆ. ಅದಕ್ಕೂ ಒಂದು ದಿನ ಮುನ್ನ, ಅಂದರೆ ಏಪ್ರಿಲ್ 28ರಂದು ‘ಆರ್ಆರ್ಆರ್’ ತೆರೆಕಂಡರೆ ಚಿತ್ರಮಂದಿರಗಳ ಹಂಚಿಕೆ ವಿಚಾರದಲ್ಲಿ ಕ್ಲ್ಯಾಶ್ ಏರ್ಪಡಲಿದೆ. ಅಲ್ಲದೇ ‘ಆರ್ಆರ್ಆರ್’ ಮತ್ತು ‘ರನ್ ವೇ 34’ ಈ ಎರಡೂ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸಿರುವುದರಿಂದ ಎರಡರಲ್ಲಿ ಒಂದು ಸಿನಿಮಾ ಬೇರೆ ರಿಲೀಸ್ ದಿನಾಂಕವನ್ನು ನೋಡಿಕೊಳ್ಳಬೇಕಿರುವುದು ಅನಿವಾರ್ಯ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ಆರಂಭದಲ್ಲಿಯೇ ‘ಆರ್ಆರ್ಆರ್’ ಅಬ್ಬರಿಸಬೇಕಿತ್ತು. ಜ.7ರಂದು ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿತ್ತು. ಆದರೆ ಕೊರೊನಾ ಹಾವಳಿ ಹೆಚ್ಚಿದ್ದರಿಂದ ರಿಲೀಸ್ ಡೇಟ್ ಮುಂದೂಡಲ್ಪಟ್ಟಿತು. ಇದು ಕೇವಲ ‘ಆರ್ಆರ್ಆರ್’ ಪರಿಸ್ಥಿತಿ ಮಾತ್ರವಲ್ಲ, ಬಹುತೇಕ ಎಲ್ಲ ಸಿನಿಮಾಗಳು ಕೂಡ ಇದೇ ಸಂಕಟವನ್ನು ಎದುರಿಸುತ್ತಿವೆ. ಕೊರೊನಾ ಹೆಚ್ಚಾದರೆ ನಾಳೆ ಪರಿಸ್ಥಿತಿ ಏನಾಗಬಹುದೋ ಎಂಬ ಅನಿಶ್ಚಿತತೆ ಎಲ್ಲರನ್ನೂ ಕಾಡುತ್ತಿದೆ. ‘ರಾಧೆ ಶ್ಯಾಮ್’, ‘ಸರ್ಕಾರು ವಾರಿ ಪಾಟ’, ‘ಕೆಜಿಎಫ್: ಚಾಪ್ಟರ್ 2’, ‘ವಿಕ್ರಾಂತ್ ರೋಣ’ ಮುಂತಾದ ಹೈ ಬಜೆಟ್ ಸಿನಿಮಾಗಳು ಸಾಲುಗಟ್ಟಿ ನಿಂತಿವೆ. ಅವುಗಳ ಜೊತೆಗೂ ‘ಆರ್ಆರ್ಆರ್’ ಚಿತ್ರ ಕ್ಲ್ಯಾಶ್ ತಪ್ಪಿಸಿಕೊಳ್ಳಬೇಕಿರುವುದು ಅನಿವಾರ್ಯ. ಈ ನಡುವೆ ಅನೇಕ ಸಣ್ಣ ಸಿನಿಮಾಗಳು ಬಿಡುಗಡೆಗಾಗಿ ಸಜ್ಜಾಗಿವೆ. ಎಲ್ಲರಿಗೂ ರಿಲೀಸ್ ಡೇಟ್ ಗೊಂದಲವಾಗಿ ಉಳಿದುಕೊಂಡಿದೆ.
‘ಆರ್ಆರ್ಆರ್’ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗಿವೆ. ‘ನಾಟು ನಾಟು..’ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ‘ಬಾಹುಬಲಿ’ ಚಿತ್ರದಿಂದ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ರಾಜಮೌಳಿ ಅವರು ‘ಆರ್ಆರ್ಆರ್’ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡುವುದು ಖಚಿತ ಎಂಬುದಕ್ಕೆ ಈ ಚಿತ್ರದ ಟ್ರೇಲರ್ ಸಾಕ್ಷಿ ಒದಗಿಸಿದೆ. ಅದ್ದೂರಿ ಸೆಟ್ಗಳು, ಭರ್ಜರಿ ಆ್ಯಕ್ಷನ್ ದೃಶ್ಯಗಳು, ಅತ್ಯಾಧುನಿಕ ವಿಎಫ್ಎಕ್ಸ್ ಸೇರಿದಂತೆ ಹಲವು ಅಂಶಗಳು ‘ಆರ್ಆರ್ಆರ್’ ಸಿನಿಮಾದಲ್ಲಿ ಹೈಲೈಟ್ ಆಗಲಿವೆ.
ಇದನ್ನೂ ಓದಿ:
ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್ ನೀಡಬೇಕು ಆರ್ಆರ್ಆರ್ ನಿರ್ಮಾಪಕರು; ಹೀಗಾದ್ರೆ ಚಿತ್ರದ ಭವಿಷ್ಯ ಏನು?
ಅಕ್ಷಯ್ ಕುಮಾರ್ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್
Published On - 9:26 am, Sun, 23 January 22