Prashanth Sambargi: ಹೆಚ್ಚಾದ ಆಕ್ರೋಶ; ಶಿವರಾಜ್ಕುಮಾರ್ ಬಗ್ಗೆ ಹೇಳಿದ ಮಾತು ಹಿಂಪಡೆದ ಪ್ರಶಾಂತ್ ಸಂಬರ್ಗಿ
ಪ್ರಶಾಂತ್ ಸಂಬರ್ಗಿ ಹೇಳಿಕೆಗೆ ಶಿವರಾಜ್ಕುಮಾರ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು. ಪ್ರಶಾಂತ್ ಸಂಬರ್ಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಈಗ ಸಂಬರ್ಗಿ ಮಾತನ್ನು ಹಿಂಪಡೆದಿದ್ದಾರೆ.
‘ಬಿಗ್ ಬಾಸ್ ಕನ್ನಡ’ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಶಿವರಾಜ್ಕುಮಾರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಶಿವಣ್ಣ (Shivanna) ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಹಲವು ರೀತಿಯಲ್ಲಿ ಅವರು ಟೀಕೆ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯ ಪೋಸ್ಟ್ಗಳನ್ನು ಹಾಕಿ, ನಾಲಿಗೆ ಹರಿಬಿಟ್ಟಿದ್ದರು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಪ್ರಶಾಂತ್ ಸಂಬರ್ಗಿ ತಾವು ಆಡಿದ ಮಾತನ್ನು ಹಿಂದಕ್ಕೆ ಪಡೆದಿದ್ದಾರೆ. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎನ್ನುವ ಮಾತನ್ನು ಪ್ರಶಾಂತ್ ಸಂಬರ್ಗಿಗೆ ಫ್ಯಾನ್ಸ್ ನೆನಪಿಸಿದ್ದಾರೆ.
ಪ್ರಶಾಂತ್ ಸಂಬರ್ಗಿ ಹೇಳಿದ್ದೇನು?
‘ಶಿವಣ್ಣ ಯಾವಾಗಲೂ ಸ್ಕ್ರಿಪ್ಟ್ ಕೇಳಲ್ಲ. ಅವರಿಗೆ ಹಣ ಅಷ್ಟೇ ಮುಖ್ಯ. ಸಿನಿಮಾ ಫ್ಲಾಪ್ ಆದರೂ ಅವರು ಕೇಳುವುದಿಲ್ಲ. ಮತ್ತೆ ಹಣ ತೆಗೆದುಕೊಂಡು ಮತ್ತೊಂದು ಸಿನಿಮಾ ಸಹಿ ಮಾಡುತ್ತಾರೆ. ರಾಜಕೀಯದಲ್ಲೂ ಅವರದ್ದು ಅದೇ ಸೂತ್ರ. ಅಭ್ಯರ್ಥಿ ಗೆಲ್ಲಲಿ, ಬಿಡಲಿ ಹಣ ಬಂದ್ರೆ ಆಯ್ತು’ ಎಂದಿದ್ದರು. ಜೊತೆಗೆ ಕರ್ನಾಟಕಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ದರು.
ಶಿವಣ್ಣನ ಎಚ್ಚರಿಕೆ
ಪ್ರಶಾಂತ್ ಸಂಬರ್ಗಿ ಹೇಳಿಕೆಗೆ ಶಿವರಾಜ್ಕುಮಾರ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದರು. ಪ್ರಶಾಂತ್ ಸಂಬರ್ಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಶಿವರಾಜ್ಕುಮಾರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ‘ನನಗೆ ಹಣ ಕಡಿಮೆ ಆಗಿದೆಯಾ? ನಾನು ಮನಸ್ಸಿನ ಮಾತು ಕೇಳಿ ಬಂದಿದ್ದೇನೆ. ಅವರು ಆ ರೀತಿ ಮಾತನಾಡೋದು ಸರಿ ಅಲ್ಲ. ಮಾತನ್ನು ಅವರು ಹಿಂಪಡೆಯಲಿ’ ಎಂದಿದ್ದರು.
ಮಾತು ಹಿಂಪಡೆದ ಪ್ರಶಾಂತ್ ಸಂಬರ್ಗಿ
‘ಶಿವಣ್ಣ ಹಾಗೂ ಇನ್ನೋರ್ವ ನಮ್ಮ ಆಪ್ತಮಿತ್ರನೊಂದಿಗೆ ಈಗತಾನೇ ಮಾತನಾಡಿದೆ. ಶಿವಣ್ಣ ಅವರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ತಂದೆಯ ಬಯಕೆಯಂತೆ ಶಿವಣ್ಣ ಅವರು ರಾಜಕೀಯದಿಂದ ದೂರವಾಗಿದ್ದರೆ. ನಾನು ಅವರ ಬಗ್ಗೆ ಬರೆದಿರುವ ನನ್ನ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ. ಶಿವಣ್ಣ ಮತ್ತು ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳಬಾರದು’ ಎಂದು ಪ್ರಶಾಂತ್ ಸಂಬರ್ಗಿ ಬರೆದುಕೊಂಡಿದ್ದಾರೆ. ಅವರು ಎಲ್ಲಿಯೂ ಕ್ಷಮೆ ಕೇಳಿಲ್ಲ ಎಂದು ಅನೇಕರು ತಕರಾರು ತೆಗೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ ಇದನ್ನೂ ಓದಿ:
Published On - 9:31 am, Mon, 8 May 23