ಸಂಪೂರ್ಣ AI ಮೂಲಕವೇ ಸಿದ್ಧವಾಯ್ತು ಕನ್ನಡದ ‘ಲವ್ ಯೂ’ ಸಿನಿಮಾ
ಎಲ್ಲ ಕ್ಷೇತ್ರದಲ್ಲಿಯೂ ಎಐ ತಂತ್ರಜ್ಞಾನ ಬಳಕೆ ಆಗುತ್ತಿದೆ. ವಿಶೇಷ ಏನೆಂದರೆ, ಸಂಪೂರ್ಣ ಎಐ ಮೂಲಕವೇ ಕನ್ನಡದಲ್ಲಿ ‘ಲವ್ ಯೂ’ ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಕೂಡ ಸಿಕ್ಕಿದೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ‘ಲವ್ ಯೂ’ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..

ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಎಷ್ಟೋ ಕೆಲಸಗಳು ಸುಲಭವಾಗಿವೆ. ಈ ತಂತ್ರಜ್ಞಾನ ಈಗ ಸಿನಿಮಾ ರಂಗದಲ್ಲೂ ಹೇರಳವಾಗಿ ಬಳಕೆ ಆಗುತ್ತಿದೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಕನ್ನಡದ ‘ಲವ್ ಯೂ’ ಸಿನಿಮಾ. ಈ ಸಿನಿಮಾವನ್ನು ಸಂಪೂರ್ಣವಾಗಿ ಎಐ ಮೂಲಕ ನಿರ್ಮಾಣ ಮಾಡಲಾಗಿದೆ. ಕನ್ನಡದಲ್ಲಿ (Kannada Film Industry) ಸಂಪೂರ್ಣ ಎಐ ಮೂಲಕ ಸಿದ್ಧವಾಗಿ, ಸೆನ್ಸಾರ್ ಪ್ರಮಾಣ ಪತ್ರ ಪಡೆದಿರುವ ಮೊದಲ ಸಿನಿಮಾ ಎಂಬ ಖ್ಯಾತಿಗೆ ‘ಲವ್ ಯೂ’ (Love You) ಚಿತ್ರ ಪಾತ್ರವಾಗುತ್ತಿದೆ. ಈ ಬಗ್ಗೆ ನಿರ್ಮಾಪಕ, ನಿರ್ದೇಶಕ ಎಸ್. ನರಸಿಂಹ ಮೂರ್ತಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಲವ್ ಯೂ ಸಿನಿಮಾದ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಹೊರತುಪಡಿಸಿದರೆ ಉಳಿದ ಎಲ್ಲ ಕೆಲಸಗಳನ್ನು ಎಐ ತಂತ್ರಜ್ಞಾನವೇ ಮಾಡಿದೆ. ಈ ಸಿನಿಮಾದಲ್ಲಿನ ಪ್ರತಿ ಪಾತ್ರ, ಅವುಗಳ ಡೈಲಾಗ್, ಸಂಗೀತ ಸಂಯೋಜನೆ, ಸೌಂಡ್ ಡಿಸೈನ್, ಛಾಯಾಗ್ರಹಣ, ಹಿನ್ನೆಲೆಯಲ್ಲಿ ಬರುವ ಲೊಕೇಷನ್, ಕಲರಿಂಗ್ ಮುಂತಾದ ಎಲ್ಲಾ ಕೆಲಸಗಳಿಗೂ ಎಐ ಬಳಕೆ ಮಾಡಲಾಗಿದೆ. ನೂತನ್ ಎಂಬ ಎಐ ಇಂಜಿನಿಯರ್ ಅವರ ತಾಂತ್ರಿಕ ನಾಯಕತ್ವ ಹಾಗೂ ಸುಂದರ್ ರಾಜ್ ಗುಂಡೂರಾವ್ ಯೋಜನೆಯ ನೇತೃತ್ವದಲ್ಲಿ ಈ ಸಿನಿಮಾ ಸಿದ್ಧವಾಗಿದೆ’ ಎಂದಿದ್ದಾರೆ ಎಸ್. ನರಸಿಂಹ ಮೂರ್ತಿ.
ಈ ಸಿನಿಮಾದ ಅವಧಿ 95 ನಿಮಿಷಗಳು. ಈ ಚಿತ್ರದಲ್ಲಿ 12 ಹಾಡುಗಳಿವೆ. ಆ ಎಲ್ಲ ಹಾಡುಗಳು ಕೂಡ ಎಐ ಮೂಲಕ ಸಂಯೋಜಿಸಲ್ಪಟ್ಟು, ಮುದ್ರಣಗೊಂಡಿವೆ! ‘ಲವ್ ಯು’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ‘ಯು/ಎ’ ಪ್ರಮಾಣಪತ್ರ ನೀಡಿದೆ. ‘ಇದು ಬರೀ ಸಿನಿಮಾ ಅಲ್ಲ, ಇದೊಂದು ಕ್ರಾಂತಿ. ಕಥೆ ಹೇಳುವಿಕೆ ಹಾಗೂ ತಂತ್ರಜ್ಞಾನ ಸರಾಗವಾಗಿ ಬೆರೆಯುವ ಹೊಸ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ’ ಎಂದು ನಿರ್ದೇಶಕ ಮತ್ತು ನಿರ್ಮಾಪಕ ಎಸ್. ನರಸಿಂಹ ಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: ಅಗಲಿದ ತಾರೆಯರ ಹೋಲಿ ಸಂಭ್ರಮ, ಎಐ ಕರಾಮತ್ತಿನ ವಿಡಿಯೋ
‘ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಇಂಥದ್ದೊಂದು ಬದಲಾವಣೆಗೆ ಉದಾಹರಣೆ ಆಗಿದೆ. ಭವಿಷ್ಯದಲ್ಲಿ ಈ ಬದಲಾವಣೆಗೆ ಹೊಂದಿಕೊಂಡು ನಮ್ಮ ಚಿತ್ರರಂಗವು ಉಳಿದ ಭಾಷೆಯ ಚಿತ್ರರಂಗಗಳನ್ನು ಮುನ್ನಡೆಸುತ್ತಿದೆ ಎಂಬ ನಂಬಿಕೆ ನಮಗೆ ಇದೆ. ಇಂಥದ್ದೊಂದು ಕೆಲಸ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ ಎಸ್. ನರಸಿಂಹ ಮೂರ್ತಿ. ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದಿರುವ ‘ಲವ್ ಯೂ’ ಸಿನಿಮಾವನ್ನು ಮೇ ಅಥವಾ ಜೂನ್ ತಿಂಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.