‘ಬದುಕಿದ್ದರೆ ಇನ್ಯಾವಗೋ ನನ್ನ ನೋಡ್ತೀರಾ’; ಕಾಲ್ತುಳಿತ ಘಟನೆ ಬಳಿಕ ದರ್ಶನ್ ಹಳೆಯ ವಿಡಿಯೋ ವೈರಲ್
Darshan: ಬೆಂಗಳೂರಿನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ. 47ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಯ ಬಳಿಕ ದರ್ಶನ್ ಅವರ ಹಳೆಯ ವೀಡಿಯೋ ವೈರಲ್ ಆಗಿದ್ದು, ಅತಿಯಾದ ಅಭಿಮಾನದಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಸುತ್ತದೆ.

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟು, 47ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಆತಂಕ ಇದೆ. ಇದಕ್ಕೆಲ್ಲ ಕಾರಣ ಆಗಿದ್ದು ಅತಿಯಾದ ಅಭಿಮಾನ. ಐಪಿಎಲ್ ಕಪ್ ಗೆದ್ದ ಖುಷಿಯಲ್ಲಿ ಬೆಂಗಳೂರಿಗೆ ಬಂದ ಆರ್‌ಸಿಬಿ ತಂಡವನ್ನು ನೋಡುವ ಭರದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ (Darshan) ಹಳೆಯ ವಿಡಿಯೋ ವೈರಲ್ ಆಗಿದೆ. ಈ ಸಂದರ್ಭಕ್ಕೆ ವಿಡಿಯೋ ಸೂಕ್ತವಾಗಿದೆ.
ದರ್ಶನ್ ಅವರು ಅಭಿಮಾನಿಗಳನ್ನು ತುಂಬಾನೇ ಪ್ರೀತಿಸುತ್ತಾರೆ. ಇನ್ನು ಅವರ ಅಭಿಮಾನಿಗಳು ಕೂಡ ದರ್ಶನ್ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಕೆಲವೊಮ್ಮೆ ಸಾರ್ವಜನಿಕವಾಗಿ ದರ್ಶನ್ ಕಾಣಿಸಿದಾಗ ಅವರನ್ನು ನೋಡಬೇಕು ಎನ್ನುವ ತವಕದಲ್ಲಿ ಅಭಿಮಾನಿಗಳು ಪ್ರಾಣವನ್ನು ಲೆಕ್ಕಿಸದೆ ನಡೆದುಕೊಳ್ಳೋದು ಇದೆ. ದರ್ಶನ್ ಕಾರು ತೆರಳುತ್ತಿದ್ದರೆ ಫ್ಯಾನ್ಸ್ ವೇಗವಾಗಿ ಬಂದು ಅವರ ಕಾರನ್ನು ಚೇಸ್ ಮಾಡಲು ಪ್ರಯತ್ನಿಸುತ್ತಾರೆ. ಆ ರೀತಿ ಆಗಬಾರದು ಎಂಬುದು ದರ್ಶನ್ ಕೋರಿಕೆ. ಕಾರ್ಯಕ್ರಮ ಒಂದರಲ್ಲಿ ದರ್ಶನ್ ಈ ಬಗ್ಗೆ ಮಾತನಾಡಿದ್ದರು.
View this post on Instagram
‘ಬದುಕಿದ್ದರೆ ಮತ್ತೊಂದ ಸಲ ನನ್ನ ನೋಡ್ತೀರಾ. ನನ್ನ ನೋಡದೇ ಇದ್ದರೂ ತೊಂದರೆ ಇಲ್ಲ. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇರುತ್ತಾರೆ. ಆಗತಾನೇ ಮದುವೆ ಮಾಡಿಕೊಂಡ ಗಂಡ-ಹೆಂಡತಿ ನೀವಾಗಿರುತ್ತೀರಿ. ಆಗತಾನೇ ಹುಟ್ಟಿದ ಮಗು ಇರುತ್ತದೆ. ನಿಮಗೇನಾದರೂ ಹೆಚ್ಚು ಕಮ್ಮಿ ಆದರೆ ಸಾಯೋತನಕ ನಮ್ಮನ್ನು ದೂಷಿಸುತ್ತಾರೆ. ಇದು ನಿಮಗೆ ಇಷ್ಟನಾ’ ಎಂದು ದರ್ಶನ್ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ದರ್ಶನ್ ಹೆಸರು ಹೇಳಿ ವಿನೋದ್ ಪ್ರಭಾಕರ್ ಅವರ ಕೊಂಡಾಡಿದ ಶ್ರುತಿ
ದರ್ಶನ್ ಹೇಳಿದ ಮಾತು ಈ ಸಂದರ್ಭಕ್ಕೆ ಸರಿಯಾಗಿ ಹೊಂದಿಕೆ ಆಗುತ್ತಿದೆ ಎಂದು ಅನೇಕರು ಹೇಳಿದ್ದಾರೆ. ಅಭಿಮಾನದ ಹುಮ್ಮಸಿನಲ್ಲಿ ಈ ರೀತಿ ಪ್ರಾಣಕ್ಕೆ ಹಾನಿ ಮಾಡಿಕೊಳ್ಳಬಾರದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಮಾತು ಕೇವಲ ದರ್ಶನ್ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರವಲ್ಲ ಅಂಧಾಭಿಮಾನ ತೋರಿಸುವ ಎಲ್ಲರಿಗೂ ಹೋಲುತ್ತದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:53 am, Thu, 5 June 25








