‘ಪ್ರೇಮದ ಊರಲಿ ಚಿತ್ರಕ್ಕೆ ಸೀಕ್ವೆಲ್ ಮಾಡಲ್ಲ’; ಮುಂದಿನ ಪ್ಲ್ಯಾನ್ ರಿವೀಲ್ ಮಾಡಿದ ಮನೋಜ್ ಕುಮಾರ್
‘ಪ್ರೇಮದ ಊರಲಿ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕ ಮನೋಜ್ ಕುಮಾರ್ ಅವರು ಚಿತ್ರಕ್ಕೆ ಯಾವುದೇ ಸೀಕ್ವೆಲ್ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಥೆಗೆ ಒಂದು ನಿರ್ದಿಷ್ಟ ಅಂತ್ಯವಿರಬೇಕು ಮತ್ತು ಕೇವಲ ವ್ಯಾಪಾರದ ದೃಷ್ಟಿಯಿಂದ ಕಲೆಯನ್ನು ಹಾಳು ಮಾಡಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ನಿರ್ಧಾರಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಮುಖ್ಯಾಂಶಗಳು
- 'ಪ್ರೇಮದ ಊರಲಿ' ಚಿತ್ರಕ್ಕಿಲ್ಲ ಸೀಕ್ವೆಲ್
- ಕಲೆಗೆ ವ್ಯಾಪಾರವೇ ಎಲ್ಲವಲ್ಲ
- ನಿರ್ದೇಶಕ ಮನೋಜ್ ಕುಮಾರ್ ನೇರ ಮಾತು
‘ಪ್ರೇಮದ ಊರಲಿ’ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡವರು ನಿರ್ದೇಶಕ ಮನೋಜ್ ಕುಮಾರ್. ಈ ಮೊದಲು ‘ಅಕ್ಷಿ’ ಹೆಸರಿನ ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಅವರು ಆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಈಗ ‘ಪ್ರೇಮದ ಊರಲಿ’ ಚಿತ್ರದ ಮೂಲಕ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಅವರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
ಇಷ್ಟು ದೊಡ್ಡ ಗೆಲುವಿನಿಂದ ಸಿಕ್ಕಿರೋ ಜವಾಬ್ದಾರಿ ತುಂಬಾನೇ ದೊಡ್ಡದು ಎಂದು ಮನೋಜ್ ಕುಮಾರ್ ಹೇಳಿದ್ದಾರೆ.‘ಒಂದು ಹಿಟ್ ಸಿನಿಮಾ ಬಂದಾಗ ಅದನ್ನು ಮುಂದುವರಿಸಿಕೊಂಡು ಹೋಗೋದು ದೊಡ್ಡ ಜವಾಬ್ದಾರಿ. ಇಡೀ ತಂಡವನ್ನು ನಡೆಸಿಕೊಂಡು ಹೋಗೋದು ಮತ್ತೊಂದು ಜವಾಬ್ದಾರಿ. ಎಲ್ಲರೂ ಗೆಲ್ಲಲಿ ಎಂದೇ ಆಸೆಪಡುತ್ತಾರೆ. ಆದರೆ, ಅದು ಸಿಕ್ಕ ಬಳಿಕ ಅದನ್ನು ನಡೆಸಿಕೊಂಡು ಹೋಗೋದು ಮತ್ತೊಂದು ಜವಾಬ್ದಾರಿ’ ಎಂದು ಮನೋಜ್ ಕುಮಾರ್ ಹೇಳಿದ್ದಾರೆ.
ಒಂದು ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅದಕ್ಕೆ ಸೀಕ್ವೆಲ್ ಮಾಡಲು ಎಲ್ಲರೂ ಮುಂದಾಗುತ್ತಾರೆ. ಬಿಸ್ನೆಸ್ ದೃಷ್ಟಿಯಿಂದ ಇದು ತುಂಬಾನೇ ಲಾಭದಾಯಕ. ಆದರೆ, ಮನೋಜ್ ಅವರು ಕೇವಲ ಲಾಭ ನೋಡುತ್ತಿಲ್ಲ. ‘ಪ್ರತಿ ಕಥೆಗೂ ಒಂದು ಅಂತ್ಯ ಅಂತ ಇರುತ್ತದೆ. ಆ ಸಿನಿಮಾದ ಸೌಂದರ್ಯ ಯಾವಾಗಲೂ ಇರುತ್ತವೆ. ಬಂಗಾರದ ಮನುಷ್ಯ ಸಿನಿಮಾಗೆ ಇನ್ನೂ ಕೆಲವು ಪಾರ್ಟ್ ಮಾಡುವ ಅವಕಾಶ ಇತ್ತು. ಆದರೆ, ಅದನ್ನು ಮಾಡಿಲ್ಲ. ಆಗಿನ ಕಾಲದಲ್ಲಿ ಈ ರೀತಿಯ ಕಾನ್ಸೆಪ್ಟ್ ಇರಲಿಲ್ಲ ಎಂಬುದು ನಿಜ. ಆದಾಗ್ಯೂ ಈ ರೀತಿಯ ಸಿನಿಮಾಗಳು ನಮ್ಮ ಮನಸ್ಸಿನಲ್ಲೆ ಹಾಗೆಯೇ ಉಳಿದುಕೊಂಡಿವೆ ಎಂದರೆ ಅದರ ಸೌಂದರ್ಯ ಎಲ್ಲಿಯೂ ಹಾಳಾಗಿಲ್ಲ’ ಎಂದು ಲೆಜೆಂಡರಿ ಸಿನಿಮಾಗಳ ಉದಾಹರಣೆ ಕೊಟ್ಟರು.
‘ಪ್ರೇಮದ ಊರಲಿ ಸಿನಿಮಾದ ಕಥೆ ಇಲ್ಲಿಗೆ ಕೊನೆಯಾಗಬೇಕು ಹಾಗೂ ಜನರ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಳ್ಳಬೇಕು. ಕಲೆಯನ್ನು ವ್ಯಾಪಾರೀಕರಣ ಮಾಡೋದು ಬೇರೆ. ಆದರೆ, ಅದು ಕೇವಲ ವ್ಯಾಪಾರವೇ ಆಗಬಾರದು’ ಎಂಬುದು ನನ್ನ ಅಭಿಪ್ರಾಯ. ಇದರಿಂದ ‘ಪ್ರೇಮದ ಊರಲಿ’ ಸಿನಿಮಾಗೆ ಸೀಕ್ವೆಲ್ ಬರುವುದಿಲ್ಲ ಅನ್ನೋದು ಖಚಿತವಾಗಿದೆ.
‘ಪ್ರೇಮದ ಊರಲಿ’ ಸಿನಿಮಾಗೆ ಪ್ರಚಾರ ಮಾಡೋದನ್ನು ತಂಡ ಈಗಲೂ ಮುಂದುವರಿಸಿದೆ. ಶೀಘ್ರವೇ ತಂಡ 50ನೇ ದಿನದ ಸಂಭ್ರಮಾಚರಣೆ ಮಾಡಿಕೊಳ್ಳಲಿದೆ. ‘ರಾಮಾಯಣ’ ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗುತ್ತಿದ್ದು, ಶೋಗಳ ಸಂಖ್ಯೆ ಕಡಿಮೆ ಆಗುತ್ತಿದೆ. ‘ಹೊಸ ನೀರು ಬಂದಾಗ ಹಳೆಯ ನೀರು ಹೋಗಲೇಬೇಕು’ ಎಂಬುದು ಅವರ ಅಭಿಪ್ರಾಯ. ಸಿನಿಮಾ ಇಷ್ಟು ದಿನ ಚೆನ್ನಾಗಿ ರನ್ ಆಗುತ್ತಿದ್ದರಿಂದ ಒಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಬಗ್ಗೆ ತಂಡ ಹೆಚ್ಚು ಗಮನ ಹರಿಸಿರಲಿಲ್ಲ. ಈಗ ಆ ಬಗ್ಗೆ ಆಲೋಚಿಸಲು ತಂಡ ನಿರ್ಧರಿಸಿದೆ. ಮಾತುಕತೆಗಳು ಸದ್ಯ ಪ್ರಗತಿಯಲ್ಲಿವೆ.
ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ಗಳಿಸಿದ್ದು ನಿಜವೇ? ನಿರ್ದೇಶಕ ಹೇಳಿದ್ದೇನು?
ಸದ್ಯ ಮನೋಜ್ ಅವರು ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದಾರೆ. ಮುಂದಿನ ಸಿನಿಮಾ ಬಗ್ಗೆ ಕೆಲವು ಸಮಯದ ಬಳಿಕ ಯೋಚಿಸಲು ಅವರು ನಿರ್ಧರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:17 pm, Wed, 4 November 26




