‘45’ ಸಿನಿಮಾ ಹಾಡಿನಲ್ಲಿ ಶಿವಣ್ಣ, ಉಪ್ಪಿ, ರಾಜ್ ಶೆಟ್ಟಿ ಜತೆ ಉಗಾಂಡ ಮಕ್ಕಳ ಡ್ಯಾನ್ಸ್
ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ‘45’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಈಗ ಈ ಚಿತ್ರಕ್ಕೆ ಬಹಳ ಅದ್ದೂರಿಯಾಗಿ ಪ್ರಮೋಷನಲ್ ಸಾಂಗ್ ಶೂಟಿಂಗ್ ಮಾಡಲು ಸಿದ್ಧತೆ ನಡೆದಿದೆ. ಈ ಹಾಡಿನಲ್ಲಿ ಶಿವರಾಜ್ಕುಮಾರ್, ರಾಜ್ ಬಿ. ಶೆಟ್ಟಿ, ಉಪೇಂದ್ರ ಜೊತೆ ಉಗಾಂಡದ ಡ್ಯಾನ್ಸರ್ಸ್ ಹೆಜ್ಜೆ ಹಾಕಲಿರುವುದು ವಿಶೇಷ.

‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar), ‘ರಿಯಲ್ ಸ್ಟಾರ್’ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅವರು ‘45’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ (Arjun Janya) ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಇದು. ಎಂ. ರಮೇಶ್ ರೆಡ್ಡಿ ಅವರು ‘ಸೂರಜ್ ಪ್ರೊಡಕ್ಷನ್ಸ್’ ಮೂಲಕ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ‘45’ ಕೂಡ ಇದೆ. ಆರಂಭದಿಂದಲೂ ಈ ಸಿನಿಮಾ ಕೌತುಕ ಮೂಡಿಸುತ್ತಿದೆ. ಈ ಪ್ರಚಾರವನ್ನು ಕೂಡ ಅದ್ದೂರಿಯಾಗಿ ಮಾಡಲಾಗುತ್ತಿದೆ. ‘45’ ಸಿನಿಮಾ (45 Kannada Movie) ಪ್ರಮೋಷನ್ ಸಾಂಗ್ ಚಿತ್ರೀಕರಣ ನಡೆಸಲು ಸಕಲ ಸಿದ್ಧತೆ ನಡೆದಿದೆ.
ಪ್ರಮೋಷನಲ್ ಹಾಡಿನಲ್ಲಿ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಜೊತೆ ಡ್ಯಾನ್ಸ್ ಮಾಡಲು ಉಗಾಂಡದಿಂದ ‘ಜಿಟೊ ಕಿಡ್ಸ್’ ಎಂದೇ ಫೇಮಸ್ ಆಗಿರುವ ನೃತ್ಯಗಾರರ ತಂಡ ಆಗಮಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ನೃತ್ಯಗಾರರನ್ನು ಸ್ವಾಗತಿಸಿದ್ದಾರೆ. ಈ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಅಷ್ಟಕ್ಕೂ ಈ ಪ್ರಮೋಷನ್ ಸಾಂಗ್ ಯಾವ ರೀತಿ ವಿಶೇಷವಾಗಿರಲಿದೆ ಎಂಬ ಬಗ್ಗೆ ಅರ್ಜುನ್ ಜನ್ಯ ಮಾಹಿತಿ ನೀಡಿದ್ದಾರೆ. ‘ಸಾಮಾನ್ಯವಾಗಿ ಎಲ್ಲ ಸಿನಿಮಾಗಳಲ್ಲೂ ಪ್ರಮೋಷನಲ್ ಸಾಂಗ್ಸ್ ಇರುತ್ತದೆ. ಆದರೆ ನಾವು ಸ್ವಲ್ಪ ಡಿಫರೆಂಟ್ ಆಗಿ ಮಾಡೋಣ ಎಂದುಕೊಂಡಿದ್ದೇವೆ. ತಮ್ಮ ಅಮೋಘ ನೃತ್ಯದಿಂದ ಇಡೀ ಪ್ರಪಂಚದಲ್ಲೇ ಫೇಮಸ್ ಆಗಿರುವ ಉಗಾಂಡದ ಜಿಟೊ ಕಿಡ್ಸ್ ಎಂಬ ನೃತ್ಯಗಾರರ ತಂಡ ಈ ಗೀತೆಯಲ್ಲಿ ಡ್ಯಾನ್ಸ್ ಮಾಡಲು ಆಗಮಿಸಿದ್ದಾರೆ. ಇವರು ಭಾರತಕ್ಕೆ ಆಗಮಿಸಿರುವುದು ಇದೇ ಮೊದಲು’ ಎಂದಿದ್ದಾರೆ ಅರ್ಜುನ್ ಜನ್ಯ.
‘ಈ ಪ್ರಮೋಷನಲ್ ಸಾಂಗ್ ಶೂಟಿಂಗ್ನಲ್ಲಿ ಶಿವರಾಜ್ಕುಮಾರ್, ರಾಜ್ ಬಿ. ಶೆಟ್ಟಿ, ಉಪೇಂದ್ರ ಜೊತೆ ಉಗಾಂಡದ ಜಿಟೊ ಕಿಡ್ಸ್ ಪಾಲ್ಗೊಳ್ಳಲ್ಲಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗಿದೆ. ಕನ್ನಡದಲ್ಲಿ ಎಂ.ಸಿ. ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ’ ಎಂದು ಅರ್ಜುನ್ ಜನ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಹಾಡಿನ ಬಗ್ಗೆ ಹಾಗೂ ಸಿನಿಮಾ ಬಗ್ಗೆ ನಿರ್ಮಾಪಕ ರಮೇಶ್ ರೆಡ್ಡಿ ಮಾತಾಡಿದ್ದಾರೆ. ‘ನಮ್ಮ ನಿರ್ದೇಶಕರು ಸಿನಿಮಾವನ್ನು ಪ್ರೀತಿಸುವ ರೀತಿ ನೋಡಿದರೆ ತುಂಬಾ ಖುಷಿ ಆಗುತ್ತಿದೆ. ಈಗ ಪ್ರಮೋಷನಲ್ ಹಾಡನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಉಗಾಂಡದಿಂದ ಹೆಸರಾಂತ ನೃತ್ಯಗಾರರು ಆಗಮಿಸಿದ್ದಾರೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ‘45’ ಸಿನಿಮಾ ಭಾರತದಾಚೆಗೂ ಯಶಸ್ವಿ ಆಗಲಿದೆ ಎಂಬ ನಂಬಿಕೆ ನನಗಿದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








