ಬೋಲ್ಟೆ ಇಲ್ಲ, ಟೈಟ್ ಮಾಡಿ ಏನು ಪ್ರಯೋಜನ? ಡಿಕೆಶಿ ಮಾತಿಗೆ ಜಗ್ಗೇಶ್ ಪ್ರತಿಕ್ರಿಯೆ
ಚಿತ್ರರಂಗದವರ ನಟ್ಟು ಬೋಲ್ಡು ಟೈಟ್ ಮಾಡಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಕ್ಕೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟ ಜಗ್ಗೇಶ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಡಿಕೆಶಿ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನೀಡಿದ್ದಾರೆ. ‘ಬೋಲ್ಟೆ ಇಲ್ಲ, ಟೈಟ್ ಮಾಡಿ ಏನು ಪ್ರಯೋಜನ’ ಎಂದು ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಿತ್ರರಂಗದವರ ಬಗ್ಗೆ ನೀಡಿದ ಹೇಳಿಕೆಗೆ ಜಗ್ಗೇಶ್ (Jaggesh) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಬರಹ ಇಲ್ಲಿದೆ. ‘ಕಾರ್ಯಕ್ರಮ 7 ಗಂಟೆಗೆ. ಆಹ್ವಾನ ಪತ್ರಿಕೆ ತಲುಪಿದ್ದು 6 ಗಂಟೆಗೆ. ಜೊತೆಗೆ ಒಗಟ್ಟಿಲ್ಲ, ಸಂವಾದವಿಲ್ಲ. ಒಟ್ಟಾರೆ ಕಲಾವಿದರ ಸಂಘವೇ ಕಣ್ಮರೆ. ಕನ್ನಡ ಚಿತ್ರರಂಗ ಅವಸಾನ ಕರ್ನಾಟಕದಲ್ಲಿ. ಯಾವ ಕಲಾವಿದರು ಏನಾಗಿದ್ದಾರೆ, ಕಲಾವಿದರಾದ ನಮಗೆ ಮಾಹಿತಿಯಿಲ್ಲ. ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲ. ಇನ್ನು ಟೈಟ್ ಮಾಡಿ ಏನು ಪ್ರಯೋಜನ’ ಎಂದು ಡಿಕೆ ಶಿವಕುಮಾರ್ ಅವರನ್ನು ಜಗ್ಗೇಶ್ ಪ್ರಶ್ನಿಸಿದ್ದಾರೆ.
‘ಕಲಾವಿದರು ಒಟ್ಟುಗೂಡಲೆಂದೇ ಡಾ. ರಾಜ್ಕುಮಾರ್ ಅವರು ಕಲಾವಿದರ ಸಂಘ ಮಾಡಿದ್ದರು. ದೌರ್ಭಾಗ್ಯ ಅದು ಇಂದು ನಿಷ್ಕ್ರಿಯಗೊಂಡಿದೆ. ಕೂಡಲೇ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ ಎಲೆಕ್ಷನ್ ಮಾಡಿಸಿ. ಕಲಾವಿದರು ಒಂದೆಡೆ ಕೂರುವಂತೆ ಮಾಡಿ. ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ. ಚಿತ್ರರಂಗದ ಸಮಸ್ಯೆ ಅನೇಕ. ನಿಮ್ಮ ಗಮನಕ್ಕಾಗಿ ತಂದಿರುವೆ’ ಎಂದು ಡಿಕೆಶಿಗೆ ಜಗ್ಗೇಶ್ ಹೇಳಿದ್ದಾರೆ.
‘ಒಂದು ಕಮಿಟಿ ಮಾಡಿ. ಅದರಲ್ಲಿ ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು ಇರುವಂತೆ ರಚಿಸಿ. ಈಗಿನ ಚಿತ್ರರಂಗದ ವಾಸ್ತವ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ ಬೆಳೆಯುವಂತೆ ಒಗ್ಗಟ್ಟಿನಿಂದ ಒಟ್ಟುಗೂಡುವಂತೆ ಚಿಂತನೆಯ ಚಾವಡಿ ರಚನೆಯಾಗಲಿ. ನಿಮಗೆ ದಿನ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲ. ಅನೇಕರಿದ್ದಾರೆ’ ಎಂದಿದ್ದಾರೆ ಜಗ್ಗೇಶ್.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಟ್ವೀಟ್ ಮಾಡಿದ್ದಾರೆ. ‘ರಾಜ್ಯದಲ್ಲಿ ಸರ್ವಾಧಿಕಾರಿ ಧೋರಣೆ, ಧಮ್ಕಿ ರಾಜಕೀಯ, ನಟ್ಟು-ಬೋಲ್ಟು ಟೈಟ್ ಮಾಡೋ ಆಟ ನಡೆಯುವುದಿಲ್ಲ ಸನ್ಮಾನ್ಯ ಡಿಕೆ ಶಿವಕುಮಾರ್ ಅವರೇ. ಕಲಾವಿದರು ಎಂದಿಗೂ ಕಲಾವಿದರೇ. ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕನ್ನಡ ನಾಡು ಮತ್ತು ಕನ್ನಡ ಭಾಷೆಯನ್ನು ಬೆಳೆಸುವ ಕೆಲಸಮಾಡುತ್ತಿದ್ದಾರೆ. ಪರ್ಮಿಷನ್ ಕೊಡದೇ ಆಟ ಆಡಿಸುವ ಧಮ್ಕಿ, ಇದೆಲ್ಲಾ ಯಾವ ರಾಜಕಾರಣ? ಸಿನಿಮಾ ಪೆಟ್ಟಿಗೆ ಹಿಡಿದು ನಿಮ್ಮ ಊರಿನಲ್ಲಿ ಸಿನಿಮಾ ತೋರಿಸಿಯೇ ನೀವು ಮುಂದೆ ಬಂದಿರೋದು ಅಂತ ನೀವೇ ಹೇಳಿ, ಇದೀಗ ದರ್ಪದಿಂದ ಮೆರೆಯೋದು ನಿಲ್ಲಿಸಿ. ನಿಮ್ಮ ನಟ್ಟು-ಬೋಲ್ಟ್ ರಾಜ್ಯದ ಜನರೇ ಟೈಟ್ ಮಾಡುವ ಸಮಯ ಬಂದಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದನ್ನು ಜಗ್ಗೇಶ್ ರಿಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.