AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಂತಾರ’ ಸಿನಿಮಾ ಕಲಾ ನಿರ್ದೇಶಕ ಧರಣಿ ಗಂಗೆಪುತ್ರ ಸಂದರ್ಶನ

ಕಲಾ ನಿರ್ದೇಶಕನಿಗಿರುವ ಸವಾಲುಗಳೇನು? ಕಲಾ ನಿರ್ದೇಶನ ಸಿನಿಮಾಕ್ಕೆ ಏಕೆ ಅವಶ್ಯಕ? ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶಕನಕ್ಕಿರುವ ಮಹತ್ವ ಇನ್ನೂ ಹಲವು ಮಹತ್ವದ ವಿಷಯಗಳ ಬಗ್ಗೆ ‘ಕಾಂತಾರ’ ಸಿನಿಮಾದ ಕಲಾ ನಿರ್ದೇಶಕ ಧರಣಿ ಗಂಗೆಪುತ್ರ ಮಾತನಾಡಿದ್ದಾರೆ. ಇಲ್ಲಿದೆ ಧರಣಿ ಗಂಗೆಪುತ್ರ ಸಂದರ್ಶನ

‘ಕಾಂತಾರ’ ಸಿನಿಮಾ ಕಲಾ ನಿರ್ದೇಶಕ ಧರಣಿ ಗಂಗೆಪುತ್ರ ಸಂದರ್ಶನ
Follow us
ಮಂಜುನಾಥ ಸಿ.
|

Updated on:Apr 13, 2024 | 9:24 AM

‘ಮಣ್ಣಿನ ಗುಣವನ್ನು ನಮ್ಮ ಸಿನಿಮಾ ಹೊಂದಿತ್ತು, ಅದರಲ್ಲಿದ್ದ ಅಪ್ಪಟ ಗ್ರಾಮೀಣತೆಯ ಅಂಶವೇ ಸಿನಿಮಾವನ್ನು ಗ್ಲೋಬಲ್ ಮಾಡಿತು’; ‘ಕಾಂತಾರ’ ಸಿನಿಮಾಕ್ಕೆ ಪ್ಯಾನ್ ಇಂಡಿಯಾ ಮಟ್ಟದ ಪ್ರೇಕ್ಷಕರ ಆದರ ಧಕ್ಕಿದ್ದು ಹೇಗೆ? ಎಂಬುದಕ್ಕೆ ಉತ್ತರವಾಗಿ ಮೇಲಿನಂತೆ ರಿಷಬ್ ಶೆಟ್ಟಿ ಹೇಳಿದ್ದರು. ಅದು ನಿಜವೂ ಹೌದು. ಸಿನಿಮಾದಲ್ಲಿನ ಅಪ್ಪಟ ಗ್ರಾಮೀಣತೆ ನೋಡುಗರ ಸೆಳೆದಿತ್ತು. ಕಂಬಳದ ಅಂಕಣ, ಊರ ಜನರ ಮನೆಗಳು, ದೈವದ ಆಚರಣೆ, ಅದರ ಪರಿಸರ, ನಾಯಕನ ಮನೆ, ಮರದಲ್ಲೊಂದು ಮನೆ, ಕಮ್ಮಾರನ ಕೆಲಸದ ಸ್ಥಳ, ಊರ ಪ್ರಮುಖನ ದೊಡ್ಡ ಮನೆ, ಅರಣ್ಯಾಧಿಕಾರಿಯ ಕಚೇರಿ, ಕೆಸರು ಕಂಬಳ ಹೀಗೆ ಎಲ್ಲವೂ ಸೇರಿ ಸುಂದರ ಲೋಕ ಸೃಷ್ಟಿಯಾಗಿತ್ತು. ಈ ಲೋಕ ಸೃಷ್ಟಿಸಿದ್ದು ಕಲಾ ನಿರ್ದೇಶಕ ಧರಣಿ ಗಂಗೆಪುತ್ರ. ಕನ್ನಡದ ‘ಬೆಲ್ ಬಾಟಮ್’, ‘ಕೈವ’, ‘ಬನಾರಸ್’ ಇನ್ನೂ ಕೆಲವು ಸಿನಿಮಾಗಳಿಗೆ ಕೆಲಸ ಮಾಡಿರುವ ಧರಣಿ ಗಂಗೆಪುತ್ರ ಕಲಾ ನಿರ್ದೇಶನದ ಆಗು-ಹೋಗುಗಳ ಬಗ್ಗೆ ಮಾತನಾಡಿದ್ದಾರೆ.

ನೀವು ಕಲಾ ನಿರ್ದೇಶಕರಾಗಿದ್ದು ಹೇಗೆ? ಏಕೆ?

‘ಕಲಾ ನಿರ್ದೇಶನ ಎಂಬುದು ಬಹಳ ಸೃಜನಾತ್ಮಕ ಕಾರ್ಯ. ಅತ್ಯಂತ ಶ್ರಮ, ತಾಳ್ಮೆ, ಸಂಯಮ ಬೇಡುವ ಕೆಲಸ ಸಹ ಹೌದು. ನನಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇತ್ತು. ಜೊತೆಗೆ ಸೃಜನಶೀಲತೆಯನ್ನು ಒರೆಗೆ ಹಚ್ಚುವ ಕಾರ್ಯವನ್ನೇ ಮಾಡಬೇಕೆಂಬ ಆಸೆಯಿಂದ ಹಾಗೂ ಚಿತ್ರರಂಗದಲ್ಲಿ ಅದಕ್ಕೆ ವಿಫುಲ ಅವಕಾಶಗಳು ಇದ್ದ ಕಾರಣ ನಾನು ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡೆ. ಹಲವರಂತೆ ನಾನು ಉದ್ದೇಶಿಸಿದ್ದ ವಿಭಾಗದಲ್ಲಿ ನನಗೆ ಅವಕಾಶ ಸಿಗಲಿಲ್ಲ. ಆದರೆ ಕಲಾ ನಿರ್ದೇಶನದ ತಂಡ ಸೇರಿಕೊಳ್ಳುವ ಅವಕಾಶ ಒದಗಿಬಂದು, ನಾನು ಬಯಸಿದಂತೆ ಕೆಲಸ ಮಾಡಬಲ್ಲ ಅವಕಾಶ ಅದರಲ್ಲಿ ವಿಫುಲವಾಗಿ ಇದ್ದಿದ್ದರಿಂದ ನಾನು ಕಲಾನಿರ್ದೇಶವನ್ನೇ ವೃತ್ತಿಯಾಗಿ ಮಾಡಿಕೊಂಡೆ’

ಕಲಾ ನಿರ್ದೇಶಕನಿಗೆ ಇರುವ ಸವಾಲುಗಳು ಯಾವುವು?

‘ಕಲಾ ನಿರ್ದೇಶನ ಎಂಬುದು ಪ್ರತಿ ದಿನವೂ ಒಂದೊಂದು ಹೊಸ ಸವಾಲು ನೀಡುತ್ತದೆ. ಒಂದೇ ರೀತಿಯ ಕತೆಗಳುಳ್ಳ ಹಲವು ಸಿನಿಮಾಗಳು ಬಂದಿವೆ ಆದರೆ ಎಲ್ಲದರ ದೃಶ್ಯಗಳ ಹಿನ್ನೆಲೆ, ಕಲಾ ನಿರ್ದೇಶನ ಭಿನ್ನ. ಹಾಗಾಗಿ ಕಲಾ ನಿರ್ದೇಶಕ ಪ್ರತಿ ಸಿನಿಮಾಕ್ಕೂ ಭಿನ್ನವಾದುದನ್ನೇ ನೀಡಬೇಕು. ನಿರ್ದೇಶಕನ ಯೋಚನೆಯಲ್ಲಿರುವ ಪರಿಸರವನ್ನು ನಾವು ಕ್ಯಾಮೆರಾ ಮುಂದೆ ನಿಜವಾಗಿಯೂ ಸೃಷ್ಟಿ ಮಾಡಿಕೊಡಬೇಕು. ಪ್ರತಿ ಸಿನಿಮಾಕ್ಕೂ ಹೊಸತನ್ನೇ ನೀಡಬೇಕು. ಶಾಟ್​ನ ಪ್ರತಿ ಪ್ರೇಮ್ ಅಂದಗಾಣುವಂತೆ, ಕತೆಯ ಕಾಲಮಾನಕ್ಕೆ ತಕ್ಕಂತೆ, ಪಾತ್ರಗಳ ಹಿನ್ನೆಲೆಗೆ ಅನುಗುಣವಾಗಿ, ಬಜೆಟ್ ಮೀರದಂತೆ, ನೋಡುಗರಿಗೆ ಆಭಾಸವಾಗದಂತೆ ಪ್ರತಿಯೊಂದನ್ನು ಮಾಡಿ, ಕಲಾವಿದರು ಶಾಟ್​ಗೆ ರೆಡಿಯಾಗುವ ಮುನ್ನ ಸರಿಯಾದ ಸ್ಥಳದಲ್ಲಿ ಇಡುವುದು ಸುಲಭದ ಕೆಲಸವಲ್ಲ. ಇದಕ್ಕೇ ಹೇಳಿದ್ದು, ಕಲಾ ನಿರ್ದೇಶನ ಅತ್ಯಂತ ಶ್ರಮದಾಯಕ ಕೆಲಸವೆಂದು’

‘ಕಾಂತಾರ’ ಸಿನಿಮಾದ ಸವಾಲುಗಳು ಹೇಗಿದ್ದವು?

‘ಸೆಟ್​ಗಳ ನಿರ್ಮಾಣಕ್ಕೆ ಕೆಲವೊಮ್ಮೆ ತಿಂಗಳುಗಳು ಖರ್ಚಾಗುತ್ತವೆ. ‘ಕಾಂತಾರ’ದ ಸಮಯದಲ್ಲಿ ಮೂರು ಮೂರು ಬಾರಿ ಸೆಟ್ ನಿರ್ಮಾಣ ಮಾಡಿದ್ದೆವು, ಪ್ರತಿ ಬಾರಿಯೂ ಮಳೆ ಬಂದು ಎಲ್ಲವೂ ಹಾಳಾಗುತ್ತಿತ್ತು. ‘ಕಾಂತಾರ’ ಸಿನಿಮಾ ನನಗೆ ಬಹಳ ಸವಾಲಾಗಿತ್ತು. ಬೆಂಗಳೂರಿನಿಂದ ಬಹಳ ದೂರ ಸಣ್ಣ ಊರಿನಲ್ಲಿ ನಾವು ಸೆಟ್ ನಿರ್ಮಾಣ ಮಾಡಿದ್ದೆವು. ಅಲ್ಲಿಗೆ ಎಲ್ಲ ವಸ್ತುಗಳನ್ನು ಕೊಂಡೊಯ್ಯುವುದು ತ್ರಾಸದಾಯಕ, ಹಾಗಾಗಿ ಸ್ಥಳೀಯ ವಸ್ತುಗಳನ್ನೇ ಬಳಸಿ, ನಮ್ಮ ಕುಶಲಕರ್ಮಿ ತಂಡವನ್ನು ಬಳಸಿಕೊಂಡು ಹಲವಾರು ದಿನಗಳ ಕಾಲ ಕೆಲಸ ಮಾಡಿದೆವು. ಸಿನಿಮಾದಲ್ಲಿ ಬರುವ ಮರ ಬೀಳಿಸುವ ದೃಶ್ಯಕ್ಕೂ ಸಹ ಬಹಳ ಸಮಸ್ಯೆಯಾಯ್ತು, ನಾಯಕನ ಮನೆ ನಿರ್ಮಾಣಕ್ಕೂ ಸಹ ಸಾಕಷ್ಟು ಅಡೆ-ತಡೆಗಳು ಎದುರಾದವು, ಕ್ಲೈಮ್ಯಾಕ್ಸ್ ದೃಶ್ಯಕ್ಕೆ 500 ಕ್ಕೂ ಹೆಚ್ಚು ಪಂಜುಗಳನ್ನು ತಯಾರಿ ಮಾಡಿದ್ದೆವು. ಸಾಕಷ್ಟು ಶ್ರಮ ಹಾಕಿ ಆ ಸಿನಿಮಾಕ್ಕೆ ಕೆಲಸ ಮಾಡಿದ್ದೆವು. ನಾವು ಪಟ್ಟ ಶ್ರಮ ಸಿನಿಮಾದ ಯಶಸ್ಸಿನಿಂದ ಸಾರ್ಥಕವಾಯ್ತು’

ನಿಮ್ಮ ಮೊದಲ ಸಿನಿಮಾ ‘ಬೆಲ್ ಬಾಟಮ್’ಗೆ ಮಾಡಿಕೊಂಡಿದ್ದ ತಯಾರಿ ಹೇಗಿತ್ತು ವಿವರಿಸಿ

‘ನನ್ನ ಮೊದಲ ಸಿನಿಮಾ ‘ಬೆಲ್ ಬಾಟಮ್​’ಗೂ ಸಹ ಇದೇ ರೀತಿಯ ಸವಾಲುಗಳನ್ನು ಎದುರಿಸಿದ್ದೆ. ಆ ಸಿನಿಮಾ 80ರ ಕಾಲದ ಕತೆ ಹೊಂದಿತ್ತು. ಅದಕ್ಕೆ ಹೊಂದುವಂತೆ ಸೆಟ್ ಪ್ರಾಪರ್ಟಿಗಳನ್ನು ಮಾಡಬೇಕಿತ್ತು, ಎಲ್ಲಿಂದಲೋ ಸಂಗ್ರಹಿಸಬೇಕಿತ್ತು, ಆ ಕಾಲದ ಪೊಲೀಸ್ ಠಾಣೆ, ಮನೆಗಳು ಇತ್ಯಾದಿಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಪ್ರತಿಯೊಂದನ್ನೂ ಕೂಲಂಕುಶವಾಗಿ ಪರಿಶೀಲಿಸಿ ಪ್ರಾಪರ್ಟಿಗಳನ್ನು ರೆಡಿ ಮಾಡಿದ್ದೆವು. ಹಲವು ಪ್ರಾಪರ್ಟಿಗಳನ್ನು ಬೇರೆ-ಬೇರೆಯವರಿಂದ ಸಂಗ್ರಹಿಸಿ ಸಿನಿಮಾದ ಚಿತ್ರೀಕರಣಕ್ಕೆ ಬಳಸಿಕೊಂಡಿದ್ದೆವು. ಸಾಕಷ್ಟು ಹಳೆಯ ಸಿನಿಮಾಗಳನ್ನು ನೋಡಿ, ಹಳೆಯ ಪೇಪರ್, ಮ್ಯಾಗಜೀನ್​ಗಳನ್ನು ನೋಡಿ ಅದರಿಂದ ಚಿತ್ರಗಳನ್ನು ಸಂಗ್ರಹಿಸಿ ‘ಬೆಲ್ ಬಾಟಮ್’ ಸಿನಿಮಾಕ್ಕೆ ಪ್ರಾಪರ್ಟಿ ರೆಡಿ ಮಾಡಿದ್ದೆವು. ಆ ಸಿನಿಮಾ ಒಳ್ಳೆ ಹೆಸರು ತಂದುಕೊಟ್ಟಿತು’

ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶನಕ್ಕೆ ಆದ್ಯತೆ ಇಲ್ಲ ಎಂಬ ಮಾತಿದೆಯಲ್ಲ?

‘ಪರಭಾಷೆಗಳಲ್ಲಿ ಸೆಟ್​ಗಳಿಗೆ ಬಹಳ ಪ್ರಾಧಾನ್ಯತೆ ನೀಡುತ್ತಾರೆ. ರಾಜಮೌಳಿಯವರ ಸಿನಿಮಾಗಳಲ್ಲಿ ಸೆಟ್​ಗೆ ಮೊದಲ ಆದ್ಯತೆ, ಇತ್ತಿಚೆಗೆ ತೆರೆಕಂಡ ತೆಲುಗಿನ ‘ಆಚಾರ್ಯ’ ಸಿನಿಮಾದಲ್ಲಿ ಏಷ್ಯಾದಲ್ಲಿಯೇ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿತ್ತು. ಕನ್ನಡ ಚಿತ್ರರಂಗದಲ್ಲಿ ಸೆಟ್​ಗಳಿಗೆ ಅಥವಾ ಕಲಾ ನಿರ್ದೇಶನಕ್ಕೆ ಆದ್ಯತೆ ಇಲ್ಲವೆಂದು ಹೇಳಲಾಗದಾದರೂ ಸೆಟ್ ಅಥವಾ ಕಲಾ ನಿರ್ದೇಶನವನ್ನು ಸಿನಿಮಾದ ಜೀವಾಳದಂತೆ ನೋಡುವ ಕ್ರಮ ಇನ್ನೂ ಬಂದಿಲ್ಲ. ಆದರೆ ಇತ್ತೀಚೆಗೆ ಅದು ಬದಲಾಗುತ್ತಿದೆ. ‘ಕಾಟೇರ’ಗೆ ಒಂದು ಹಳ್ಳಿಯನ್ನೇ ಸೃಷ್ಟಿ ಮಾಡಿದ್ದರು, ‘ಕಾಂತಾರ’ಗೂ ಸಹ ನಾವು ಹಳ್ಳಿಯನ್ನು ರೆಡಿ ಮಾಡಿದ್ದೇವೆ. ‘ಕ್ರಾಂತಿ’ ಸಿನಿಮಾನಲ್ಲಿ ಆ ಸ್ಕೂಲ್ ಸೆಟ್​ ನಿರ್ಮಾಣ ಮಾಡಿದ್ದರು ಶಶಿಧರ ಅಡಪ ಸರ್. ‘ಯಜಮಾನ’ ಸಿನಿಮಾಕ್ಕೂ ಅದ್ಭುತವಾದ ಸೆಟ್ ಹಾಕಿದ್ದರು. ಇತ್ತೀಚೆಗೆ ಜನ ಸಿನಿಮಾದ ಸೆಟ್ ವರ್ಕ್, ಪ್ರಾಪರ್ಟಿಗಳನ್ನು ಗಮನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆಗಳನ್ನು ಬರೆಯುವಾಗ ಕಲಾ ನಿರ್ದೇಶನದ ಬಗ್ಗೆಯೂ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಕಲಾ ನಿರ್ದೇಶನಕ್ಕೆ ಇನ್ನಷ್ಟು ಪ್ರಾಧಾನ್ಯತೆ ಸಿಗಬಹುದು’

ಕಲಾ ನಿರ್ದೇಶಕ ಎದುರಿಸುವ ಸವಾಲುಗಳು ಏನೇನು?

‘ಆರಂಭದಲ್ಲಿಯೇ ಹೇಳಿದಂತೆ ಕಲಾ ನಿರ್ದೇಶನ ಎನ್ನುವುದು ಬಹಳ ಶ್ರಮದಾಯಕ ಕೆಲಸ. ಅದರಲ್ಲೂ ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ ಬಹಳ ಸವಾಲುಗಳು ಎದುರಾಗುತ್ತವೆ. ಹೊರಾಂಗಣ ಚಿತ್ರೀಕರಣದ ಜೊತೆ, ನೈಟ್ ಶೂಟ್ ಸೇರಿಕೊಂಡು ಬಿಟ್ಟಿತೆಂದರೆ ಕಲಾ ನಿರ್ದೇಶಕ ಹಾಗೂ ಅವನ ತಂಡ ಜೀವ ಪಣಕ್ಕಿಟ್ಟು ಕೆಲಸ ಮಾಡಬೇಕು. ಆದರೆ ಸ್ಟುಡಿಯೋಗಳಲ್ಲಿ ಕೆಲಸ ಸುಲಭ. ಅಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿರುತ್ತದೆ. ಹೊರಾಂಗಣಕ್ಕೆ ಹೋಲಿಸಿದರೆ, ಒಳಾಂಗಣದಲ್ಲಿ ಕೆಲಸ ಮಾಡುವುದು ತುಸು ಸುಲಭ. ನನ್ನ ಬಳಿ 30 ಜನರ ತಂಡವಿದೆ. ಸಿನಿಮಾ ಚಿತ್ರೀಕರಣದ ಬಹುತೇಕ ಅವಧಿ ನಾವು ಸೆಟ್​ನಲ್ಲಿಯೇ ಇರಬೇಕಾಗುತ್ತದೆ. ಸಿನಿಮಾಕ್ಕೆ ಒಂದು ನಿರ್ದಿಷ್ಟ ಬಜೆಟ್ ಇರುತ್ತದೆ. ನಮಗೂ ಸಹ ಕಡಿಮೆ ಬಜೆಟ್​ನಲ್ಲಿಯೇ ಸೆಟ್ ನಿರ್ಮಾಣದ ಗುರಿ ನೀಡಲಾಗಿರುತ್ತದೆ. ಅದಕ್ಕೆ ತಕ್ಕಂತೆ ನಾವು ಕಡಿಮೆ ಬಜೆಟ್​ನಲ್ಲಿಯೇ ನಮ್ಮ ಪ್ರತಿಭೆ ತೋರಿಸಬೇಕಾಗಿರುತ್ತದೆ’

ಹೊಸಬನೊಬ್ಬ ಕಲಾ ನಿರ್ದೇಶಕನಾಗಬೇಕು ಎಂದರೆ ಆತನಿಗೆ ಇರಬೇಕಾದ ಅರ್ಹತೆ ಏನು?

ಕಲಾ ನಿರ್ದೇಶನ, ಸೆಟ್ ಡಿಸೈನಿಂಗ್, ಪ್ರೊಡಕ್ಷನ್ ಡಿಸೈನ್ ಕೋರ್ಸ್​ಗಳು ಈಗ ಕೆಲವೆಲ್ಲ ಬಂದಿವೆ. ನನ್ನ ಪ್ರಕಾರ, ಕಲಾ ನಿರ್ದೇಶನಕ್ಕೆ ಬೇಕಾಗಿರುವುದು ಅನುಭವ. ಯಾರಾದರೂ ನುರಿತ ಕಲಾವಿದರ ಬಳಿ ಕೆಲ ವರ್ಷಗಳ ಕಾಲ ದುಡಿದು, ಆನ್​ ಫೀಲ್ಡ್​ನಲ್ಲಿ ಅನುಭವ ಪಡೆಯದೇ ಇದ್ದರೆ ಒಳ್ಳೆಯ ಕಲಾ ನಿರ್ದೇಶಕ ಆಗುವುದು ಕಷ್ಟ. ಜಾಹೀರಾತುಗಳಲ್ಲಿ ಹಾಗೋ-ಹೀಗೋ ನಡೆದು ಹೋಗುತ್ತದೆ. ಆದರೆ ಸಿನಿಮಾಗಳಿಗೆ ಕೆಲಸ ಮಾಡಲು ಅನುಭವ, ಚಾಕಚಕ್ಯತೆ, ತಾಳ್ಮೆ, ನಿರಂತರವಾಗಿ ಕೆಲಸ ಮಾಡುವ ಶಕ್ತಿ ಬೇಕೇ ಬೇಕು. ನಾನು ಆರಂಭ ಹಲವು ವರ್ಷ ಚೈತ್ರಾ ಪತ್ರಾಯ, ಉಲ್ಲಾಸ್ ಐದೂರು, ವರದರಾಜ ಕಾಮತ್ ಅವರುಗಳ ಬಳಿ ಕೆಲಸ ಮಾಡಿದ್ದೇನೆ. ಕನ್ನಡದಲ್ಲಿ ಈಗ ಹಲವಾರು ಅತ್ಯುತ್ತಮ, ಹಿರಿಯ ಕಲಾ ನಿರ್ದೇಶಕರಿದ್ದಾರೆ. ಹೊಸದಾಗಿ ಕಲಾ ನಿರ್ದೇಶನ ಮಾಡಬಯಸುವವರಿಗೆ ಅವಕಾಶವೂ ಸಾಕಷ್ಟಿದೆ’

Published On - 9:24 am, Sat, 13 April 24

ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್