‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಮಿಲನಾ ಇರ್ತಾರಾ? ಡಾರ್ಲಿಂಗ್ ಕೃಷ್ಣ ಹೇಳೋದೇನು?
Love Mocktail 3: ‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟ್ ಶೀಘ್ರದಲ್ಲೇ ಚಿತ್ರೀಕರಣ ಆರಂಭಾಗಲಿದೆ ಎಂದು ಡಾರ್ಲಿಂಗ್ ಕೃಷ್ಣ ಘೋಷಿಸಿದ್ದಾರೆ. ಭಾವನಾತ್ಮಕ ಕಥಾಹಂದರದ ಸೀಕ್ವೆಲ್ ಮಾಡುವುದರಲ್ಲಿನ ಸವಾಲುಗಳನ್ನು ಅವರು ವಿವರಿಸಿದ್ದಾರೆ. ಮಿಲನಾ ಅವರು ಚಿತ್ರದಲ್ಲಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

2020ರಲ್ಲಿ ರಿಲೀಸ್ ಆದ ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ ‘ಲವ್ ಮಾಕ್ಟೇಲ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾಗೆ ಸೀಕ್ವೆಲ್ ಕೂಡ ಮಾಡಲಾಯಿತು. ಅದು ಕೂಡ ದೊಡ್ಡ ಯಶಸ್ಸು ಕಂಡಿತು. ಈಗ ಚಿತ್ರಕ್ಕೆ ಮೂರನೇ ಪಾರ್ಟ್ ಬರುತ್ತಿದೆ. ಕ್ರೈಮ್ ಕಥೆಗಳಾದರೆ ಸುಲಭದಲ್ಲಿ ಸೀಕ್ವೆಲ್ಗಳನ್ನು ಮಾಡಿಕೊಂಡು ಹೋಗಬಹುದು. ಆದರೆ, ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು, ಕಥೆಗೆ ಲಿಂಕ್ ಕೊಡುತ್ತಾ ಸಾಗೋದು ದೊಡ್ಡ ಚಾಲೆಂಜ್. ಈ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತನಾಡಿದ್ದಾರೆ.
‘ಲವ್ ಮಾಕ್ಟೇಲ್ 3’ ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಈ ಮೊದಲೇ ಘೋಷಣೆ ಮಾಡಿದ್ದರು. ಆದರೆ, ಈ ಚಿತ್ರ ಇನ್ನೂ ಸೆಟ್ಟೇರಿಲ್ಲ. ಈಗ ಮುಂದಿನ ತಿಂಗಳಿಂದ ಸಿನಿಮಾದ ಶೂಟ್ ಆರಂಭಿಸೋ ಆಲೋಚನೆ ಅವರಿಗೆ ಇದೆ. ಈಗ ಸದ್ಯ ತಂಡದವರು ಐದುರಿಂದ ಎಂಟು ವರ್ಷದ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅದು ಸಿಕ್ಕ ಬಳಿಕ ಶೂಟಿಂಗ್ ಆರಂಭ ಆಗಲಿದೆ.
‘ಮುಂದಿನ ತಿಂಗಳು ಶೂಟಿಂಗ್ ಆರಂಭಿಸೋ ಪ್ಲ್ಯಾನ್ ಇರಲಿದೆ. ಎರಡನೇ ಪಾರ್ಟ್ನಿಂದ ಕಂಟ್ಯುನಿಟಿ ಇರಲಿದೆ. ಮಿಲನಾ ಇರ್ತಾರಾ ಇರಲ್ವಾ ಎನ್ನುವ ಕುತೂಹಲ ಹಾಗೆಯೇ ಇರಲಿ. ಹೊಸ ಪಾತ್ರಗಳು ಯಾವುದೆಲ್ಲ ಬರುತ್ತೆ ಅನ್ನೋ ಕುತೂಹಲ ಇರಲಿ’ ಎನ್ನುತ್ತಾರೆ ಕೃಷ್ಣ.
View this post on Instagram
‘ಲವ್ ಮಾಕ್ಟೇಲ್ 3’ ಅನೌನ್ಸ್ ಆಗಿ ಸ್ವಲ್ಪ ಸಮಯ ಕಳೆದಿದೆ. ಆದರೆ, ಸಿನಿಮಾ ಸೆಟ್ಟೇರಿಲ್ಲ. ಇದಕ್ಕೆ ಕಾರಣವನ್ನು ಅವರು ವಿವರಿಸಿದ್ದಾರೆ. ‘ನಾನು ಈ ಮೊದಲು ಒಂದು ಕಥೆ ಬರೆದಿದ್ದೆ. ಅದು ಸಂತೃಪ್ತಿ ಕೊಡಲಿಲ್ಲ. ಕಳೆದ ತಿಂಗಳು ಬೇರೆ ರೀತಿಯ ಐಡಿಯಾ ಹೊಳೆಯಿತು. ಅದನ್ನು ಅಭಿವೃದ್ಧಿ ಮಾಡಿದೆ. ಬರೆದ ಕಥೆ ನಮಗೆ ಮೊದಲು ಎಗ್ಸೈಟ್ ನೀಡಬೇಕು. ಮೊದಲ ಸಿನಿಮಾ ಮಾಡೋದು ಸುಲಭ. ಆದರೆ, ಅದಕ್ಕೆ ಸೀಕ್ವೆಲ್ಗಳನ್ನು ಮಾಡೋದು ತುಂಬಾನೇ ಕಷ್ಟ. ಕ್ರೈಮ್ ಥ್ರಿಲ್ಲರ್ ಚಿತ್ರಗಳಿಗೆ ಅದು ಸುಲಭ. ಆದರೆ, ಈ ರೀತಿಯ ಭಾವನಾತ್ಮಕ ಸಿನಿಮಾಗಳಲ್ಲಿ ಸೀಕ್ವೆಲ್ ಕಷ್ಟ’ ಎಂಬುದು ಕೃಷ್ಣ ಅವರ ಅಭಿಪ್ರಾಯ.
ಇದನ್ನೂ ಓದಿ: ‘ಫಾದರ್’ ಚಿತ್ರತಂಡದಿಂದ ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ಬಿಡುಗಡೆ
ಕೃಷ್ಣ ಹಾಗೂ ಮಿಲನಾ ಈಗ ಪೋಷಕರಾಗಿದ್ದಾರೆ. ಅವರಿಗೆ ಹೆಣ್ಣು ಮಗು ಜನಿಸಿದ್ದು, ಅದಕ್ಕೆ ಪರಿ ಎಂದು ಹೆಸರು ಇಟ್ಟಿದ್ದಾರೆ. ಮಗು ಹುಟ್ಟಿದ ಬಳಿಕ ತಂದೆಯಾಗಿ ಮಾಡುವ ಒಂದಷ್ಟು ಜವಾಬ್ದಾರಿಗಳು ಇರುತ್ತವೆ. ಅದನ್ನು ಮಾಡೋದಕ್ಕೂ ಸ್ವಲ್ಪ ಸಮಯ ಹಿಡಿಯಿತು. ಈ ಕಾರಣಕ್ಕೂ ಸಿನಿಮಾ ವಿಳಂಬ ಆಯಿತಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:48 pm, Tue, 24 June 25








