ಸಾಹಸ ಸಂಯೋಜಕ ಕೌರವ ವೆಂಕಟೇಶ್ ನಿರ್ದೇಶನದಲ್ಲಿ 2ನೇ ಸಿನಿಮಾ ‘ಪೈನಾ’
ಹಾರರ್, ಥ್ರಿಲ್ಲರ್ ಕಹಾನಿ ಇರುವ ‘ಪೈನಾ’ ಸಿನಿಮಾಗೆ ಕೌರವ ವೆಂಕಟೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಲೀಲಾ ಮೋಹನ್, ಚಿರಾಗ್ ಚಾಲುಕ್ಯ, ಮಧುಶ್ರೀ, ತೃಪ್ತಿ ಬಸವರಾಜು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ‘ಪೈನಾ’ ಸಿನಿಮಾದಲ್ಲಿ ಶೇಕಡ 50ರಷ್ಟು ಗ್ರಾಫಿಕ್ಸ್ ಇರಲಿದೆ ಎಂದು ನಿರ್ದೇಶಕ ಕೌರವ ವೆಂಕಟೇಶ್ ಹೇಳಿದ್ದಾರೆ.

ಕೌರವ ವೆಂಕಟೇಶ್ ಅವರು ಸಾಹಸ ನಿರ್ದೇಶಕನಾಗಿ (Stunt Choreographer) ಖ್ಯಾತಿ ಗಳಿಸಿದ್ದಾರೆ. ಅಲ್ಲದೇ, ಸಿನಿಮಾ ನಿರ್ದೇಶನದಲ್ಲೂ ಅವರಿಗೆ ಆಸಕ್ತಿ ಇದೆ. ಈಗಾಗಲೇ ಅವರು 1800ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಆ ಮೂಲಕ ಅಪಾರ ಅನುಭವ ಪಡೆದುಕೊಂಡಿದ್ದಾರೆ. ಕೌರವ ವೆಂಕಟೇಶ್ (Kaurava Venkatesh) ಅವರು ‘ನೋ ಕೋಕೇನ್’ ಸಿನಿಮಾದ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದ್ದರು. ಈಗ ತಮ್ಮ ನಿರ್ದೇಶನದಲ್ಲಿ 2ನೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗೆ ‘ಪೈನಾ’ (Paina) ಎಂದು ಶೀರ್ಷಿಕೆ ಇಡಲಾಗಿದೆ.
‘ಪೈನಾ’ ಚಿತ್ರಕ್ಕೆ ಕೌರವ ವೆಂಕಟೇಶ್ ಅವರೇ ಚಿತ್ರಕಥೆ ಬರೆದಿದ್ದಾರೆ. ಸಾಹಸ ಸಂಯೋಜನೆ ಕೂಡ ಅವರದ್ದೇ. ‘ಕಾನಿಷ್ಕ ಪಿಕ್ಚರ‍್ಸ್’ ಸಂಸ್ಥೆಯ ಮೂಲಕ ಆರ್. ಕನಿಷ್ಕ ಹಾಗೂ ಆರ್. ವೇದಿಶ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕೌರವ ವೆಂಕಟೇಶ್ ಶಿಷ್ಯರಾಗಿದ್ದ ಡಿ.ಎಸ್.ಎಸ್. ಗೋವಿಂದರಾಜು ದೇವನಹಳ್ಳಿ ಮತ್ತು ‘ಲಾಫಿಂಗ್ ಪೀಕಾಕ್ ಪ್ರೊಡಕ್ಷನ್’ ಈ ಸಿನಿಮಾದ ಸಹ-ನಿರ್ಮಾಪಕರಾಗಿದ್ದಾರೆ.
ಇತ್ತೀಚೆಗೆ ಸಾಣೆಗುರನಹಳ್ಳಿಯ ಶ್ರೀ ಗಣೇಶ ದೇವಸ್ಥಾನದಲ್ಲಿ ‘ಪೈನಾ’ ಸಿನಿಮಾಗೆ ಮುಹೂರ್ತ ಮಾಡಲಾಯಿತು. ‘ಜಂಬದ ಹುಡುಗಿ’ ಖ್ಯಾತಿಯ ನಟಿ ಪ್ರಿಯಾ ಹಾಸನ್ ಅವರು ಈ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಬಳಿಕ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರಕ್ಕೆ ಕಲ್ಕಿ ಅಭಿಷೇಕ್ ಸಂಗೀತ ನೀಡುತ್ತಿದ್ದಾರೆ. ಮುಂಜಾನೆ ಮಂಜು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.
ರವಿಚಂದ್ರನ್ ಅವರು ‘ಪೈನಾ’ ಸಿನಿಮಾಗೆ ಕಥೆ ಬರೆದಿದ್ದಾರೆ. ಲೋಹಿತ್ ಅವರು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸಾಹಿತ್ಯ ‘ಭರ್ಜರಿ’ ಚೇತನ್ ಕುಮಾರ್ ಹಾಗೂ ವಿಕ್ರಂ ಅವರು ಸಾಹಿತ್ಯ ಬರೆಯುತ್ತಿದ್ದಾರೆ. ಡಾ. ಲೀಲಾ ಮೋಹನ್ ಮತ್ತು ಚಿರಾಗ್ ಚಾಲುಕ್ಯ ಅವರು ಈ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ನಟ ಪ್ರಥಮ್ ಜೊತೆ ಫೈಟ್ ಮಾಸ್ಟರ್ ಕೌರವ ವೆಂಕಟೇಶ್ ಹೊಸ ಸಿನಿಮಾ ‘ಕೊಕೇನ್’
‘ಪೈನಾ’ ಸಿನಿಮಾಗೆ ಇಬ್ಬರು ನಾಯಕಿಯರು. ಮಧುಶ್ರೀ ಮತ್ತು ತೃಪ್ತಿ ಬಸವರಾಜು ಅವರು ಆ ಪಾತ್ರಗಳನ್ನು ಮಾಡುತ್ತಿದ್ದಾರೆ. ಯೋಗರಾಜ್ ಭಟ್, ರಂಗಾಯಣ ರಘು, ಸಾಧುಕೋಕಿಲ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ‘ಈ ಸಿನಿಮಾದಲ್ಲಿ ಐದು ಫೈಟಿಂಗ್ ದೃಶ್ಯಗಳು, ಎರಡು ಹಾಡುಗಳು ಇರಲಿವೆ. ಶೇಕಡ 50ರಷ್ಟು ಗ್ರಾಫಿಕ್ಸ್ ಇರಲಿದೆ’ ಎಂದು ನಿರ್ದೇಶಕ ಕೌರವ ವೆಂಕಟೇಶ್ ಮಾಹಿತಿ ನೀಡಿದರು.
‘ಪೈನಾ’ ಎಂಬುದು ಮಗುವಿನ ಹೆಸರು. ಇದರಿಂದಲೇ ಕಥೆ ಶುರುವಾಗುತ್ತದೆ. ಹಾರರ್, ಥ್ರಿಲ್ಲರ್ ಅಂಶಗಳು ಈ ಸಿನಿಮಾದಲ್ಲಿ ಹೆಚ್ಚಾಗಿವೆ. ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಶೂಟಿಂಗ್ ಮಾಡಲಾಗುವುದು’ ಎಂದು ಹೇಳಿದ್ದಾರೆ ಕೌರವ ವೆಂಕಟೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








