ಮುಂಬೈನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಶಿವಣ್ಣ, ಆರ್. ಚಂದ್ರು
ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಅವರು ‘ಕಬ್ಜ’ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ್ದಾರೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿಬರಲಿದೆ. ‘ಒರಿಜಿನಲ್ ಮಾನ್ಸ್ಟರ್’ ಹೆಸರಿನ ಈ ಸಿನಿಮಾದ ಸುದ್ದಿಗೋಷ್ಠಿ ಮುಂಬೈನಲ್ಲಿ ನಡೆದಿದೆ. ಇದರ ಕನ್ನಡ ವರ್ಷನ್ಗೆ ಶಿವರಾಜ್ಕುಮಾರ್ ಹೀರೋ ಆಗಿದ್ದಾರೆ.

ವಿನೂತನ ಪ್ರಯತ್ನಗಳಿಂದ ಹೆಸರಾಗಿರುವ ಕನ್ನಡದ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು (R Chandru) ಈಗ ಹಿಂದಿ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಅಡಿಯಿಟ್ಟಿದ್ದಾರೆ. ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆನಂದ್ ಪಂಡಿತ್ ಅವರೊಂದಿಗೆ ಕೈ ಜೋಡಿಸಿ ಹಿಂದಿ ಚಿತ್ರವನ್ನು ನಿರ್ಮಿಸಲು ಚಂದ್ರು ಮುಂದಾಗಿದ್ದಾರೆ. ಹಿಂದಿ ಮಾತ್ರವಲ್ಲದೇ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಶಿವರಾಜ್ಕುಮಾರ್ (Shivarajkumar) ಮತ್ತು ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ‘ಒರಿಜಿನಲ್ ಮಾನ್ಸ್ಟರ್’ (Original Monster) ಎಂದು ಶೀರ್ಷಿಕೆ ಇಡಲಾಗಿದೆ.
‘ಒರಿಜಿನಲ್ ಮಾನ್ಸ್ಟರ್’ ಸಿನಿಮಾದ ಹಿಂದಿ, ತಮಿಳು ಹಾಗೂ ಮಲಯಾಳಂ ವರ್ಷನ್ಗಳಲ್ಲೂ ಆಯಾ ಭಾಷೆಯ ಸ್ಟಾರ್ ನಟರು ನಾಯಕರಾಗಿ ನಟಿಸುತ್ತಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ತಿಳಿಯಲಿದೆ. ಎರಡೂವರೆ ವರ್ಷಗಳ ಹಿಂದೆ ಆರ್. ಚಂದ್ರು ನೂರಾರು ಕೋಟಿ ವೆಚ್ಚದಲ್ಲಿ ಆನಂದ್ ಪಂಡಿತ್ ಅವರೊಂದಿಗೆ ‘ಕಬ್ಜ’ ಸಿನಿಮಾ ಮಾಡಿದ್ದರು.
‘ಕಬ್ಜ’ ಚಿತ್ರದ ನಂತರ ಆರ್. ಚಂದ್ರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಸಿನಿಮಾದ ನಂತರ ಅದ್ದೂರಿಯಾಗಿ ‘ಒರಿಜಿನಲ್ ಮಾನ್ಸ್ಟರ್’ ಸಿನಿಮಾಗೆ ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈಗ ಆ ಸಿನಿಮಾವನ್ನು ಲಾಂಚ್ ಮಾಡಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಮುಂಬೈನಲ್ಲಿ ಲಾಂಚ್ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್, ಆರ್. ಚಂದ್ರು, ಆನಂದ್ ಪಂಡಿತ್ ಮುಂತಾದವರು ಭಾಗಿಯಾಗಿದ್ದಾರೆ. ಎಲ್ಲಾ ಭಾಷೆಗೂ ‘ಒರಿಜಿನಲ್ ಮಾನ್ಸ್ಟರ್’ ಶೀರ್ಷಿಕೆ ಹೊಂದಿಕೆಯಾಗುತ್ತದೆ. ಇದನ್ನು ಕಿರಿದಾಗಿ ‘OM’ ಎಂದು ಸಹ ಕರೆಯಬಹುದು. ‘OM’ ಎಂದರೆ ಶಿವಣ್ಣ ಅಭಿನಯದ ‘ಓಂ’ ಸಿನಿಮಾ ಕೂಡ ನೆನಪಾಗುತ್ತದೆ. ಹಾಗಾಗಿ ಅಭಿಮಾನಿಗಳಿಗೆ ಕುತೂಹಲ ಜಾಸ್ತಿ ಇದೆ.
ಇದನ್ನೂ ಓದಿ: ಕೆವಿಎನ್ ನಿರ್ಮಾಣದ ‘ಬೇಲ್’ ಸಿನಿಮಾ; ಟೀಸರ್ ಮೂಲಕ ಗಮನ ಸೆಳೆದ ಶಿವಣ್ಣ
ಯಶ್, ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ರೀತಿ ಆರ್. ಚಂದ್ರು ಅವರು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ದೊಡ್ಡ ಸಿನಿಮಾ ಸಾಸಹಗಳನ್ನು ಮಾಡುತ್ತಿದ್ದಾರೆ. ಸದ್ಯ ಅವರ ನಿರ್ಮಾಣದ ಇನ್ನೊಂದು ಸಿನಿಮಾ ‘ಫಾದರ್’ ಕೂಡ ಬಿಡುಗಡೆ ಹಂತದಲ್ಲಿದೆ. ಆ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ಪ್ರಮುಖ ಪಾತ್ರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




