ನವೆಂಬರ್ ತಿಂಗಳಲ್ಲಿ ಹೊಸ ರೂಪದಲ್ಲಿ ರಿಲೀಸ್ ಆಗಲಿದೆ ರಾಜ್ಕುಮಾರ್ ನಟನೆಯ ‘ಭಾಗ್ಯವಂತರು’
ರಾಜ್ಕುಮಾರ್ ನಟನೆಯ ‘ಭಾಗ್ಯವಂತರು’ ಸಿನಿಮಾ ನವೆಂಬರ್ನಲ್ಲಿ ರೀ-ರಿಲೀಸ್ ಆಗುತ್ತಿದೆ. ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಅನೇಕ ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ಸಿನಿಮಾ ಮರು ಬಿಡುಗಡೆಯಾಗುತ್ತಿದೆ.

ರಾಜ್ಕುಮಾರ್ ನಟನೆಯ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಸಾಲಿನಲ್ಲಿವೆ. ಈ ಪೈಕಿ ಅನೇಕ ಸಿನಿಮಾಗಳನ್ನು ವಿನೂತನ ತಂತ್ರಜ್ಞಾನ ಬಳಸಿ ಹೊಸ ರೂಪದಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೆದಿದೆ. ಈಗ ರಾಜ್ಕುಮಾರ್ ನಟನೆಯ ‘ಭಾಗ್ಯವಂತರು’ ಸಿನಿಮಾ ನವೆಂಬರ್ನಲ್ಲಿ ರೀ-ರಿಲೀಸ್ ಆಗುತ್ತಿದೆ. ಡಿ.ಐ, 7.1 ಟ್ರ್ಯಾಕ್ ಸೇರಿದಂತೆ ಅನೇಕ ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಮುನಿರಾಜು ಈ ಚಿತ್ರವನ್ನು ಮತ್ತೆ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ.
ಎಚ್.ಆರ್. ಭಾರ್ಗವ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಭಾಗ್ಯವಂತರು’ ಚಿತ್ರದಲ್ಲಿ ರಾಜ್ಕುಮಾರ್ ಹಾಗೂ ಬಿ.ಸರೋಜಾದೇವಿ ಅವರು ನಟಿಸಿದ್ದರು. ದ್ವಾರಕೀಶ್ ಈ ಚಿತ್ರದ ನಿರ್ಮಾಪಕರು. ಸಿನಿಮಾ ರೀ-ರೀಲಿಸ್ ಆಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಭಾರ್ಗವ್, ‘ನಾನು ಆಗಲೇ ರಾಜ್ಕುಮಾರ್ ಅವರು ನಟಿಸಿದ್ದ ಬಬ್ರುವಾಹನ, ನಾ ನಿನ್ನ ಮರೆಯಲಾರೆ, ಜಗ ಮೆಚ್ಚಿದ ಮಗ ಸೇರಿದಂತೆ ಅನೇಕ ಚಿತ್ರಗಳಿಗೆ ಸಹ ನಿರ್ದೇಶನ ಮಾಡಿದ್ದೆ. ಹಾಗಾಗಿ ರಾಜ್ ಅವರಿಗೆ ನನ್ನ ಮೇಲೆ ವಿಶೇಷ ಪ್ರೀತಿ . ನನಗೂ ಅವರೆಂದರೆ ಅಷ್ಟೇ ಪ್ರೀತಿ. ನಿರ್ಮಾಪಕ ದ್ವಾರಕೀಶ್ ಹಾಗೂ ರಾಜ್ಕುಮಾರ್ ಇಬ್ಬರೂ ನೀವೆ ಈ ಚಿತ್ರ ನಿರ್ದೇಶನ ಮಾಡಬೇಕು ಎಂದರು. ಆಗ ನಾನು ‘ಭಾಗ್ಯವಂತರು’ ಚಿತ್ರವನ್ನು ನಿರ್ದೇಶಿಸಿದೆ. ನನ್ನ ಮೊದಲ ನಿರ್ದೇಶನದ ಚಿತ್ರವೇ ಸೂಪರ್ ಹಿಟ್ ಆಯಿತು. ಈಗ ಮುನಿರಾಜು ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ ಅವರಿಗೆ ಒಳ್ಳೆಯದಾಗಲಿ’ ಎಂದರು ಹಿರಿಯ ನಿರ್ದೇಶಕ ಭಾರ್ಗವ.
‘ನಾನು ಅಪ್ಪಟ ಅಣ್ಣಾವ್ರ ಅಭಿಮಾನಿ. ರಾಜ್ಕುಮಾರ್ ಎಂದರೆ ನನ್ನ ಪ್ರಾಣ. 1978ನೇ ಇಸವಿಯಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು. ಹದಿನೆಂಟು ವರ್ಷಗಳ ಕಾಲ ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಪಾರ್ವತಮ್ಮ ರಾಜ್ಕುಮಾರ್ ಅವರೇ ನನ್ನನ್ನು ಮೊದಲು ಚಿತ್ರಮಂದಿರದ ಆರ್.ಪಿ. ಯಾಗಿ ನೇಮಕ ಮಾಡಿ ಯಳಂದೂರಿಗೆ ಕಳುಹಿಸಿದ್ದರು. ನಾನು ಮೊದಲು ಮರು ಬಿಡುಗಡೆ ಮಾಡಿದ ಚಿತ್ರ ‘ಆಪರೇಷನ್ ಡೈಮಂಡ್ ರಾಕೆಟ್’. ನಂತರ ‘ನಾನೊಬ್ಬ ಕಳ್ಳ’ ಸೇರಿ ರಾಜ್ಕುಮಾರ್ ಅವರ ನಾಲ್ಕೈದು ಚಿತ್ರಗಳನ್ನು ಮರು ಬಿಡುಗಡೆ ಮಾಡಿದ್ದೇನೆ. ಈಗ ‘ಭಾಗ್ಯವಂತರು’ ಚಿತ್ರವನ್ನು ಸುಮಾರು ನೂರೈವತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು ಮುನಿರಾಜು.
ಇದನ್ನೂ ಓದಿ: ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್ಕುಮಾರ್
ಅಮಿತ್ ಶಾಗೆ ಬರ್ತ್‌ಡೇ ವಿಶ್ ಮಾಡಿ ಟ್ರೋಲ್ ಆದ ಸಾರಾ ಅಲಿ ಖಾನ್; ಇದರ ಹಿಂದಿದೆ ಡ್ರಗ್ ವಿಚಾರ
Published On - 9:52 pm, Fri, 22 October 21




