Rashmika Mandanna: ರಶ್ಮಿಕಾ ಮಂದಣ್ಣ ನಟಿಸಿದ ಸ್ಟಾರ್ ಹೀರೋಗಳ ಪಟ್ಟಿ ಬಹುದೊಡ್ಡದಿದೆ
ರಶ್ಮಿಕಾ ಮಂದಣ್ಣ ಅವರು ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅವರು ರಕ್ಷಿತ್ ಶೆಟ್ಟಿ, ಪುನೀತ್ ರಾಜ್ಕುಮಾರ್, ದರ್ಶನ್, ಧ್ರುವ ಸರ್ಜಾ, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಮಹೇಶ್ ಬಾಬು, ಕಾರ್ತಿ, ವಿಜಯ್, ಧನುಷ್, ಸಿದ್ದಾರ್ಥ್ ಮಲ್ಹೋತ್ರ, ಅಮಿತಾಭ್ ಬಚ್ಚನ್, ವಿಕ್ಕಿ ಕೌಶಲ್, ರಣಬೀರ್ ಕಪೂರ್, ಮತ್ತು ಸಲ್ಮಾನ್ ಖಾನ್ ಮುಂತಾದ ಅನೇಕ ಪ್ರಮುಖ ನಟರೊಂದಿಗೆ ಅಭಿನಯಿಸಿದ್ದಾರೆ.

ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಇಂದು (ಏಪ್ರಿಲ್ 5) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರ ಅಭಿಮಾನಿ ಬಳಗ ಹಿರಿದಾಗಿರುವುದರಿಂದ ಅವರಿಗೆ ಎಲ್ಲರೂ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಸೃಷ್ಟಿ ಆಗಿರುವ ಫ್ಯಾನ್ ಪೇಜ್ಗಳಲ್ಲಿ ರಶ್ಮಿಕಾಗೆ ವಿಶ್ಗಳು ಬರುತ್ತಿವೆ. ಅವರ ಫೋಟೋನ ಹಾಕಿ ವಿಶ್ಗಳನ್ನು ತಿಳಿಸಲಾಗುತ್ತಿದೆ. ಈಗ ರಶ್ಮಿಕಾ ಮಂದಣ್ಣ ಅವರು ಯಾವ ಯಾವ ಸ್ಟಾರ್ ಹೀರೋ ಜೊತೆ ನಟಿಸಿದ್ದಾರೆ ಎಂಬುದನ್ನು ನೋಡೋಣ.
ರಶ್ಮಿಕಾ ನಟಿಸಿದ ಮೊದಲ ಸಿನಿಮಾ ಕನ್ನಡದ ‘ಕಿರಿಕ್ ಪಾರ್ಟಿ’. ಈ ಚಿತ್ರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆ ಅವರು ತೆರೆ ಹಂಚಿಕೊಂಡರು. ಆ ಬಳಿಕ ರಿಲೀಸ್ ಆದ ‘ಅಂಜನೀ ಪುತ್ರ’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ಅಭಿನಯಿಸಿದರು. ‘ಚಮಕ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದರು. ಈ ಸಿನಿಮಾ ಯಶಸ್ಸು ಕಂಡಿತ್ತು. ಕನ್ನಡದಲ್ಲಿ ಅವರು ‘ಯಜಮಾನ’ ಸಿನಿಮಾ ಮಾಡಿದ್ದು, ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅವರು ಮಾಡಿದ ಕನ್ನಡದ ಕೊನೆಯ ಸಿನಿಮಾ ‘ಪೊಗರು’. ಇದರಲ್ಲಿ ಧ್ರುವ ಜೊತೆ ನಟಿಸಿದರು.
ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಜೊತೆ ‘ದೇವದಾಸ್’ ಸಿನಿಮಾ ಮಾಡಿದ್ದಾರೆ. ‘ಗೀತ ಗೋವಿಂದಂ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ರಶ್ಮಿಕಾ ಅವರ ವೃತ್ತಿ ಜೀವನವನ್ನೇ ಬದಲಿಸಿತು ಎಂದರೂ ತಪ್ಪಾಗಲಾರದು. ತೆಲುಗಿನಲ್ಲಿ ರಶ್ಮಿಕಾಗೆ ಹೆಚ್ಚು ಜನಪ್ರಿಯತೆ ನೀಡಿತು. ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ರಶ್ಮಿಕಾ ನಟಿಸಿದ್ದಾರೆ. ‘ಪುಷ್ಪ’ ಹಾಗೂ ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದಾರೆ ಅವರು.
ತಮಿಳಿನಲ್ಲಿ ಕಾರ್ತಿ ಜೊತೆ ‘ಸುಲ್ತಾನ್’ ಸಿನಿಮಾ ಮಾಡಿದ್ದಾರೆ. ‘ವಾರಿಸು ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ನಟಿಸಿದ್ದಾರೆ. ಈಗ ಅವರು ‘ಕುಬೇರ’ ಚಿತ್ರದಲ್ಲಿ ಧನುಷ್ ಜೊತೆ ತೆರೆ ಹಂಚಿಕೊಳ್ಳುತ್ತಾ ಇದ್ದಾರೆ. ಇದು ಅವರ ತಮಿಳು ಸಿನಿಮಾಗಳು.
ಇದನ್ನೂ ಓದಿ: ಒಮನ್ನಲ್ಲಿ ಜಿಮ್ ಟ್ರೇನರ್ಗಳ ಕಣ್ಣು ಕೆಂಪು ಮಾಡಿದ ರಶ್ಮಿಕಾ ಮಂದಣ್ಣ
ಹಿಂದಿಯಲ್ಲಿ ‘ಮಿಷನ್ ಮಜ್ನು’ ಮಾಡಿದ್ದಾರೆ. ಇದರಲ್ಲಿ ಸಿದ್ದಾರ್ಥ್ ಮಲ್ಹೋತ್ರ ಜೊತೆ ಬಣ್ಣ ಹಚ್ಚಿದ್ದಾರೆ. ಅಮಿತಾಭ್ ಬಚ್ಚನ್ ನಟನೆಯ ‘ಗುಡ್ಬೈ’ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ‘ಛಾವಾ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆ, ‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಕಂಡ ‘ಸಿಕಂದರ್’ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದಾರೆ. ಇದರಲ್ಲಿ ಸಲ್ಮಾನ್ಗೆ ಜೊತೆಯಾಗಿದ್ದಾರೆ. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ ಎಂಬುದು ಬೇಸರದ ವಿಚಾರ. ಇವಿಷ್ಟು ರಶ್ಮಿಕಾ ನಟಿಸಿದ ಸ್ಟಾರ್ ಹೀರೋ ಸಿನಿಮಾಗಳು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.