‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ಗೆ ಜೊತೆಯಾದ ರುಕ್ಮಿಣಿ ವಸಂತ್; ಕನಕವತಿ ಪೋಸ್ಟರ್ ರಿಲೀಸ್
Rukmini Vasanth In Kantara: ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿರುವ 'ಕಾಂತಾರ: ಚಾಪ್ಟರ್ 1' ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಅವರ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಈ ಸುದ್ದಿಯಿಂದ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ರುಕ್ಮಿಣಿ ವಸಂತ್ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ.

‘ಕಾಂತಾರ’ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ ಆಗಿದ್ದರು. ಈ ಚಿತ್ರದ ಮೂಲಕ ಅವರಿಗೆ ಬೇಡಿಕೆ ಹೆಚ್ಚಿತು. ಈ ಚಿತ್ರದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾಗೆ ನಾಯಕಿ ಯಾರು ಎಂಬ ವಿಚಾರ ಈವರೆಗೆ ರಿವೀಲ್ ಆಗಿರಲಿಲ್ಲ. ಈಗ ಈ ವಿಷಯದ ಬಗ್ಗೆ ತಂಡದಿಂದ ಅಧಿಕೃತ ಅಪ್ಡೇಟ್ ಸಿಕ್ಕಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಕನಕವತಿ ಪಾತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.
‘ಕಾಂತಾರ: ಚಾಪ್ಟರ್ 1’ ರಿಲೀಸ್ಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿವೆ. ಹೀಗಾಗಿ, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಆರಂಭಿಸಲು ತಂಡ ರೆಡಿ ಆಗಿದೆ. ಇದರ ಭಾಗವಾಗಿ ಸಿನಿಮಾದ ನಾಯಕಿ ಪಾತ್ರದ ಪರಿಚಯವನ್ನು ನೀಡಲಾಗಿದೆ. ರುಕ್ಮಿಣಿ ವಸಂತ್ ಈ ಚಿತ್ರದ ನಾಯಕಿ ಎಂಬ ವಿಚಾರ ತಿಳಿದು ಅನೇಕರಿಗೆ ಖುಷಿ ಆಗಿದೆ.
ರುಕ್ಮಿಣಿ ವಸಂತ್ ಅವರು ಚಿತ್ರದಲ್ಲಿ ಯುವರಾಣಿ ರೀತಿ ಕಾಣಿಸಿದ್ದಾರೆ. ಅವರ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಪೋಸ್ಟರ್ ಹಿಂಭಾಗ ನೋಡಿದರೆ ಅದು ರಾಜರ ಆಸ್ಥಾನದ ರೀತಿಯೇ ಕಾಣಿಸುತ್ತದೆ. ಅಲ್ಲದೆ, ಇದು ಕದಂಬರ ಕಾಲದ ಕಥೆ ಆಗಿರುವುದರಿಂದ ರುಕ್ಮಿಣಿ ರಾಣಿ ಅಥವಾ ಯುವ ರಾಣಿಯ ಪಾತ್ರ ಮಾಡಿದ್ದರೂ ಅಚ್ಚರಿ ಏನಿಲ್ಲ.
ಕನಕವತಿ ಪೋಸ್ಟರ್
#ಕಾಂತಾರ Chapter-1 ಕನಕವತಿಯ ಪರಿಚಯ ನಿಮ್ಮ ಮುಂದೆ… Introducing @rukminitweets as ‘KANAKAVATHI’ from the world of #KantaraChapter1.
In Cinemas #KantaraChapter1onOct2 🔥#Kantara @hombalefilms @KantaraFilm @shetty_rishab @VKiragandur @ChaluveG #ArvindKashyap @AJANEESHB… pic.twitter.com/irB9Lg4Qk7
— Rishab Shetty (@shetty_rishab) August 8, 2025
‘ಕಾಂತಾರ: ಚಾಪ್ಟರ್ 1’ ಚಿತ್ರದ ನಾಯಕಿ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಂತೆ ಆಗಿದೆ. ರುಕ್ಮಿಣಿ ವಸಂತ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇದೆ. ಹೀಗಾಗಿ, ರುಕ್ಮಿಣಿ ಅವರು ಈ ಚಿತ್ರದ ಭಾಗವಾಗುತ್ತಿದ್ದಾರೆ ಎಂದಾಗ ಸಹಜವಾಗಿಯೇ ನಿರೀಕ್ಷೆ ಕೂಡ ಹೆಚ್ಚಿದೆ.
ರುಕ್ಮಿಣಿ ವಸಂತ್ ಅವರು ಈಗಾಗಲೇ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಅವರಿಗೆ ಸಾಕಷ್ಟು ಖ್ಯಾತಿ ನೀಡಿತು. ಆ ಬಳಿಕ ಗಣೇಶ್, ಶ್ರೀಮುರಳಿ, ಶಿವರಾಜ್ಕುಮಾರ್ ಜೊತೆ ನಟಿಸಿದರು. ಈವರೆಗೆ ಅವರು ‘ಕಾಂತಾರ’ದ ಭಾಗವಾಗಿದ್ದಾರೆ ಎಂಬ ವಿಚಾರ ಎಲ್ಲಿಯೂ ರಿವೀಲ್ ಆಗಿರಲಿಲ್ಲ.
ಇದನ್ನೂ ಓದಿ: ‘ಕಾಂತಾರ’ ಚಿತ್ರಕ್ಕೆ ಬರಲಿದೆ ಮತ್ತೊಂದು ಪಾರ್ಟ್? ಟಾಲಿವುಡ್ ಖ್ಯಾತ ಹೀರೋಗೆ ಮಣೆ?
‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಿಷಬ್ ಅವರು ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಅಕ್ಟೋಬರ್ 2ರಂದು ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:38 am, Fri, 8 August 25








