Uday Huttinagadde: ಚಂದನವನದಲ್ಲಿ ಗುರುತಿಸಿಕೊಂಡಿದ್ದ ಪ್ರತಿಭಾವಂತ ನಟ ಉದಯ್ ಹುತ್ತಿನಗದ್ದೆ ನಿಧನ
Uday Huttinagadde Passes Away: ಕನ್ನಡ ಚಿತ್ರರಂಗದ ಹಿರಿಯ ನಟ ಉದಯ್ ಹುತ್ತಿನಗದ್ದೆ ಗುರುವಾರ ನಿಧನರಾಗಿದ್ದಾರೆ. ಹಲವು ಖ್ಯಾತ ಕಲಾವಿದರೊಂದಿಗೆ ಬಣ್ಣ ಹಚ್ಚಿದ್ದ ಅವರು ಪ್ರಸ್ತುತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ ಉದಯ್ ಹುತ್ತಿನಗದ್ದೆ (Uday Huttinagadde) ರಾಜಾಜಿನಗರದ ಅವರ ಮನೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಆನಂದ್ ರಾವ್ ಸರ್ಕಲ್ ಬಳಿ ಇರುವ ಉದಯ್ ವಿಡಿಯೋ (ಉದಯ್ ಕಲರ್ ಲ್ಯಾಬ್)ನಿಂದ ಪ್ರಸ್ತುತ ಅವರು ಹೆಸರುವಾಸಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಬಸರಿಕಟ್ಟೆ ಸಮೀಪದ ಹುತ್ತಿನಗದ್ದೆಯವರಾದ ಉದಯ್ ಹಲವಾರು ದಶಕಗಳಿಂದ ವೃತ್ತಿಪರ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಚಿತ್ರಗಳ ವಿಚಾರಕ್ಕೆ ಬಂದರೆ ಅವರು, ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಟೈಗರ್ ಪ್ರಭಾಕರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ‘ದೇವತಾ ಮನುಷ್ಯ’ ಚಿತ್ರದಲ್ಲಿ ರಾಜಕುಮಾರ್ ಅವರೊಂದಿಗೆ, ‘ಜಯಭೇರಿ’ಯಲ್ಲಿ ಅಂಬರೀಶ್ ಅವರೊಂದಿಗೆ, ‘ಉಂಡೂ ಹೋದ, ಕೊಂಡೂ ಹೋದ’ ಚಿತ್ರದಲ್ಲಿ ಅನಂತನಾಗ್ ಜೊತೆ ತೆರೆಹಂಚಿಕೊಂಡಿದ್ದರು.
‘ಆರಂಭ’ ಚಿತ್ರದ ಮೂಲಕ ಉದಯ್ ಅವರು ನಿರ್ಮಾಪಕರಾಗಿ ಹಾಗೂ ನಾಯಕರಾಗಿ ಚಂದನವನದಲ್ಲಿ ಗುರುತಿಸಿಕೊಂಡರು. ಮುಂದೆ ಅವರು ‘ಅಗ್ನಿಪರ್ವ’, ‘ಶುಭಮಿಲನ’, ‘ಉದ್ಭವ’, ‘ಶಿವಯೋಗಿ ಅಕ್ಕಮಹಾದೇವಿ’, ‘ಅಮೃತ ಬಿಂದು’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು. ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಅವರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು.
ಚಿಕ್ಕಮಗಳೂರು ಮೂಲದ ಉದಯ್ ಹುತ್ತಿನಗದ್ದೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ‘ಅಭಿನಯ ತರಂಗ’ದಲ್ಲಿ ನಟನೆಯ ತರಬೇತಿ ಪಡೆದಿದ್ದರು. ಆ ಬಳಿಕ ಚಿತ್ರರಂಗಕ್ಕೆ ಕಲಾವಿದನಾಗಿ ಪದಾರ್ಪಣೆ ಮಾಡಿದ್ದರು. ಖ್ಯಾತ ನಾಮರೊಂದಿಗೆ ತೆರೆ ಹಂಚಿಕೊಂಡಿದ್ದರೂ ಕೂಡ ಅವರು ಕೆಲ ವರ್ಷಗಳ ನಂತರ ಚಿತ್ರರಂಗದಿಂದ ದೂರ ಉಳಿದರು.
ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿಯಲ್ಲಿ ಪರಿಣತಿ ಹೊಂದಿದ್ದ ಉದಯ್ ಅವರು ಬೆಂಗಳೂರಿನಲ್ಲಿ ಅದೇ ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿಯಾದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಅವರು ಅದರಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ತಮ್ಮ ಪ್ರತಿಭೆಯಿಂದ ಅಪಾರ ಜನಮನ್ನಣೆ ಗಳಿಸಿದ್ದ ಉದಯ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ನೆರವೇರಿತು ಗಾಯಕ ಕೆಕೆ ಅಂತ್ಯಸಂಸ್ಕಾರ; ತಂದೆಗೆ ಗುಡ್ ಬೈ ಹೇಳಿದ ಪುತ್ರಿ ತಮಾರಾ
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ