‘ಇದನ್ನು ನೋಡೋಕೆ ಅಮ್ಮ ಇಲ್ಲ ಅಂತ ದುಃಖವಾಯ್ತು’; ‘ಘೋಸ್ಟ್​’ ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಭಾವುಕ

ಶಿವರಾಜ್​ಕುಮಾರ್​ ಅವರ ವೃತ್ತಿಜೀವನ ತುಂಬ ಚೆನ್ನಾಗಿ ರೂಪುಗೊಳ್ಳುವಲ್ಲಿ ತಾಯಿ ಪಾರ್ವತಮ್ಮ ರಾಜ್​ಕುಮಾರ್​ ಅವರ ಕೊಡುಗೆ ಸಾಕಷ್ಟು ಇದೆ. ‘ಘೋಸ್ಟ್​’ ಸಿನಿಮಾದ ಟ್ರೇಲರ್​ ನೋಡಿದ ಬಳಿಕ ಎಲ್ಲರೂ ‘ಆನಂದ್​’ ಚಿತ್ರದ ಗೆಟಪ್​ ನೆನಪಿಸಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಮಾತನಾಡುವಾಗ ಶಿವಣ್ಣ ಕೊಂಚ ಎಮೋಷನಲ್​ ಆದರು.

‘ಇದನ್ನು ನೋಡೋಕೆ ಅಮ್ಮ ಇಲ್ಲ ಅಂತ ದುಃಖವಾಯ್ತು’; ‘ಘೋಸ್ಟ್​’ ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಭಾವುಕ
ಶಿವರಾಜ್​ಕುಮಾರ್​, ಪಾರ್ವತಮ್ಮ ರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on: Oct 16, 2023 | 2:39 PM

ಅಕ್ಟೋಬರ್​ 19ಕ್ಕೆ ಶಿವರಾಜ್​ಕುಮಾರ್ಅಭಿಮಾನಿಗಳ ಪಾಲಿಗೆ ನಿಜಕ್ಕೂ ಹಬ್ಬ. ಅಂದು ‘ಘೋಸ್ಟ್​’ ಸಿನಿಮಾ (Ghost Movie) ಬಿಡುಗಡೆ ಆಗಲಿದೆ. ಈ ಬಹುನಿರೀಕ್ಷಿತ ಚಿತ್ರದ ಮೇಲೆ ಭರ್ಜರಿ ಹೈಪ್​ ಸೃಷ್ಟಿ ಆಗಿದೆ. ಅದಕ್ಕೆ ಹಲವಾರು ಕಾರಣಗಳಿವೆ. ನಿರ್ದೇಶಕ ಶ್ರೀನಿ ಅವರು ಶಿವರಾಜ್​ಕುಮಾರ್​ ಅವರನ್ನು ತುಂಬ ಸ್ಟೈಲಿಶ್​ ಆಗಿ ಈ ಚಿತ್ರದಲ್ಲಿ ತೋರಿಸಿದ್ದಾರೆ. ಅದರ ಝಲಕ್​ ಈಗಾಗಲೇ ಟ್ರೇಲರ್​ನಲ್ಲಿ ಕಾಣಿಸಿದೆ. ಇಡೀ ಟ್ರೇಲರ್​ನಲ್ಲಿ ಹೆಚ್ಚು ಗಮನ ಸೆಳೆದಿದ್ದು ಶಿವರಾಜ್​ಕುಮಾರ್​ (Shivarajkumar) ಅವರ ಯಂಗ್​ ಗೆಟಪ್​. ಅದರ ಬಗ್ಗೆ ಫ್ಯಾನ್ಸ್​ ವಲಯದಲ್ಲಿ ಸಖತ್​ ಚರ್ಚೆ ಆಗುತ್ತಿದೆ. ದೊಡ್ಡ ಪರದೆಯಲ್ಲಿ ಆ ಲುಕ್​ ನೋಡಬೇಕು ಎಂಬ ಕಾರಣದಿಂದಲೇ ಅನೇಕರು ಕಾದಿದ್ದಾರೆ. ಅದೇ ಗೆಟಪ್​ ಬಗ್ಗೆ ಮಾತನಾಡುತ್ತ ಶಿವಣ್ಣ ಕೊಂಚ ಎಮೋಷನಲ್​ ಆಗಿದ್ದಾರೆ. ಈ ವೇಳೆ ಅವರು ಪಾರ್ವತಮ್ಮ ರಾಜ್​ಕುಮಾರ್ (Parvathamma Rajkumar)​ ಅವರನ್ನು ನೆನಪಿಸಿಕೊಂಡಿದ್ದಾರೆ.

‘ಘೋಸ್ಟ್​’ ಸಿನಿಮಾದ ಸುದ್ದಿಗೋಷ್ಠಿ ಭಾನುವಾರ (ಅ.16) ಸಂಜೆ ಶಿವರಾಜ್​ಕುಮಾರ್​ ಅವರ ನಿವಾಸದಲ್ಲಿ ​ನಡೆಯಿತು. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು. ಟ್ರೇಲರ್​ನಲ್ಲಿ ತಮ್ಮ ಯಂಗ್​ ಗೆಟಪ್​ಗೆ ಜನರಿಂದ ಭರ್ಜರಿ ಮೆಚ್ಚುಗೆ ಕೇಳಿಬಂದಿರುವುದರ ಬಗ್ಗೆಯೂ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಈ ರೀತಿ ಕಾಣುವಂತೆ ಪ್ರಯತ್ನಿಸಿದ ನಿರ್ದೇಶಕ ಶ್ರೀನಿ ಮತ್ತು ತಂಡಕ್ಕೆ ಶಿವಣ್ಣ ಪ್ರಶಂಸೆ ವ್ಯಕ್ತಪಡಿಸಿದರು. ಇದನ್ನೆಲ್ಲ ನೋಡಲು ತಾಯಿ ಇರಬೇಕಾಗಿತ್ತು ಎಂದು ಕೂಡ ಅವರು ಹೇಳಿದ್ದಾರೆ.

ನಿಖಿಲ್​ ಕುಮಾರ್​ ಸಿನಿಮಾದ ಸೆಟ್​ಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಫೋಟೋ ವೈರಲ್​

ಶಿವರಾಜ್​ಕುಮಾರ್​ ಅವರ ವೃತ್ತಿಜೀವನ ತುಂಬ ಚೆನ್ನಾಗಿ ರೂಪುಗೊಳ್ಳುವಲ್ಲಿ ತಾಯಿ ಪಾರ್ವತಮ್ಮ ರಾಜ್​ಕುಮಾರ್​ ಅವರ ಕೊಡುಗೆ ಸಾಕಷ್ಟು ಇದೆ. ಆರಂಭದ ದಿನಗಳಲ್ಲಿ ‘ಆನಂದ್​’, ‘ರಘ ಸಪ್ತಮಿ’, ‘ಸಂಯುಕ್ತ’, ‘ರಣರಂಗ’ ಮುಂತಾದ ಚಿತ್ರಗಳಲ್ಲಿ ಶಿವಣ್ಣ ಹೇಗೆ ಕಾಣುತ್ತಿದ್ದರೋ ಅದೇ ರೀತಿಯ ಗೆಟಪ್​ ಈಗ ‘ಘೋಸ್ಟ್​’ ಸಿನಿಮಾದಲ್ಲಿ ಕಾಣಿಸಲಿದೆ. ಹಾಗಾಗಿ ಇದನ್ನು ಪಾರ್ವತಮ್ಮ ಅವರು ನೋಡಿದ್ದರೆ ತುಂಬ ಖುಷಿಪಡುತ್ತಿದ್ದರು. ಅವರು ಭೌತಿಕವಾಗಿ ಇಲ್ಲ ಎಂಬುದನ್ನು ನೆನೆದು ಶಿವಣ್ಣ ಕೊಂಚ ಎಮೋಷನಲ್​ ಆದರು.

‘ಮೊದಲಿಗೆ ಶ್ರೀನಿ ಅವರು ಸ್ಯಾಂಪಲ್​ ಮಾತ್ರ ಕಳಿಸಿದ್ದರು. ನಂತರ ನಾನು ನೋಡಿದ್ದು ಕೂಡ ನಿಮ್ಮ ಜೊತೆ. ಈಗ ನೋಡಿದಾಗ ಚೆನ್ನಾಗಿ ಎನಿಸಿತು, ಅಚ್ಚರಿ ಆಯಿತು. ನಾನೇ 1987ರ ಕಾಲಕ್ಕೆ ತೆರಳಿದಂತೆ ಭಾಸವಾಯ್ತು. ಆದರೆ ಇದನ್ನು ನೋಡೋಕೆ ನಮ್ಮ ತಾಯಿ ಇಲ್ಲ ಅಂತ ದುಃಖ ಆಯಿತು. ಯಾಕೆಂದರೆ ‘ಆನಂದ್​’ ಸಿನಿಮಾ ಶುರು ಮಾಡಿದ್ದು ಅವರೇ ತಾನೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ. ವಿದೇಶದಲ್ಲಿ ವಿಶೇಷ ತಂತ್ರಜ್ಞಾನ ಬಳಸಿ ಈ ಲುಕ್​ ಮಾಡಲಾಗಿದೆ. ಕಥೆಯಲ್ಲಿ ಈ ಗೆಟಪ್​ ಎಷ್ಟು ಮುಖ್ಯವಾಗಲಿದೆ ಎಂಬುದನ್ನು ತಿಳಿಯುವ ಕಾತರ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.