‘ತರ್ಕ’ ಸಿನಿಮಾಗೆ 400ಕ್ಕೂ ಹೆಚ್ಚು ಜನರ ಬಂಡವಾಳ; ರಿಲೀಸ್ ಆಯ್ತು ಟ್ರೇಲರ್
ಕನ್ನಡದಲ್ಲಿ ಕ್ರೌಡ್ ಫಂಡಿಂಗ್ ಮೂಲಕ ಬಂದ ಸಿನಿಮಾಗಳ ಸಂಖ್ಯೆ ಕಡಿಮೆ. ಅಂಥ ಚಿತ್ರಗಳ ಸಾಲಿಗೆ ‘ತರ್ಕ’ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಅನಾವರಣ ಮಾಡಲಾಗಿದೆ. ಆ ಮೂಲಕ ಕಥೆಯ ಸುಳಿವನ್ನು ನೀಡಲಾಗಿದೆ. ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಹಾನಿ ಈ ಸಿನಿಮಾದಲ್ಲಿ ಇದೆ.

‘ತರ್ಕ’ ಎಂಬ ಟೈಟಲ್ ಕೇಳುತ್ತಿದ್ದಂತೆಯೇ 1989ರಲ್ಲಿ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡಿದ ಸಿನಿಮಾ ನೆನಪಾಗುತ್ತದೆ. ಆ ಸಿನಿಮಾದಲ್ಲಿ ಶಂಕರ್ ನಾಗ್, ದೇವರಾಜ್ ಮುಂತಾದವರು ನಟಿಸಿದ್ದರು. ಈಗ ಮತ್ತೆ ‘ತರ್ಕ’ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಆದರೆ ಹಳೇ ಸಿನಿಮಾಗೂ ಈಗಿನ ಹೊಸ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ನಿರ್ದೇಶಕ ಪುನೀತ್ ಮಾನವ ಅವರು ಈಗ ‘ತರ್ಕ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.
ಬಹುತೇಕ ಹೊಸ ಕಲಾವಿದರೇ ‘ತರ್ಕ’ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವು ಅನುಭವಿ ಕಲಾವಿದರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೊದಲು ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಪುನೀತ್ ಅವರು ‘ತರ್ಕ’ ಸಿನಿಮಾ ಮೂಲಕ ಚೊಚ್ಚಲ ನಿರ್ದೇಶನದ ಪ್ರಯತ್ನ ಮಾಡಿದ್ದಾರೆ. ವಿಶೇಷ ಏನೆಂದರೆ, ಈ ಸಿನಿಮಾಗೆ 400ಕ್ಕೂ ಹೆಚ್ಚು ಜನರು ಕ್ರೌಡ್ ಫಂಡಿಂಗ್ ಮೂಲಕ ಹಣ ಹೂಡಿದ್ದಾರೆ.
‘ಗಂಧರ್ವ ಎಂಟರ್ಪ್ರೈಸಸ್’ ಮೂಲಕ ‘ತರ್ಕ’ ಸಿನಿಮಾ ಮೂಡಿಬಂದಿದೆ. ಅಂಜನ್, ಪ್ರತಿಮಾ, ನಿವಾಸ್, ಶ್ವೇತಾ ಶ್ರೀನಿವಾಸ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಾಯಕಿ ಪ್ರತಿಮಾ ಮಾತನಾಡಿ, ‘ಈ ಚಿತ್ರದ ಕಥೆ ಏನೆಂದು ನನಗೂ ಸಂಪೂರ್ಣವಾಗಿ ತಿಳಿದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ’ ಎಂದು ಹೇಳಿದರು. ‘ತರ್ಕ’ ಚಿತ್ರಕ್ಕೆ ಸೂರಜ್ ಜೋಯಿಸ್ ಅವರು ಸಂಗೀತ ಸಂಯೋಜಿಸಿದ್ದಾರೆ. ಉಜ್ವಲ್ ಅವರು ಸಂಕಲನ ಮಾಡಿದ್ದಾರೆ. ಫೆಬ್ರವರಿ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ ‘ಚೇಸರ್’ ಸಿನಿಮಾ ಮಾಡಿದ್ದಕ್ಕೆ ಶಾಕ್ ಆದ ಧ್ರುವ ಸರ್ಜಾ; ಕಾರಣ?
ಕ್ರೌಡ್ ಫಂಡಿಂಗ್ ಬಗ್ಗೆ ನಿರ್ದೇಶಕ ಪುನೀತ್ ಮಾನವ ಅವರು ಮಾತನಾಡಿದರು. ‘ಇದು ಕ್ರೌಡ್ ಫಂಡಿಂಗ್ ಮೂಲಕ ಬರುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಮೊದಲು ಹಣ ಹಾಕಿದ್ದು ಅಮ್ಮ ಹಾಗೂ ಅಜ್ಜಿ. ಬಳಿಕ ಅನೇಕರು ದುಡ್ಡು ಹಾಕಿದರು. ಸಿನಿಮಾದ ಕ್ಲೈಮ್ಯಾಕ್ಸ್ ಬಹಳ ಚೆನ್ನಾಗಿದೆ. ಯಾರೂ ಕೂಡ ಊಹಿಸದಂತಹ ಟ್ವಿಸ್ಟ್ ಇದೆ’ ಎಂದು ಅವರು ಹೇಳಿದ್ದಾರೆ.

Tarka Movie Team
ನಟ ಅಂಜನ್ ಅವರು ಮಾತನಾಡಿ, ‘ಈ ಚಿತ್ರಕ್ಕೆ ಹಣ ಹೊಂದಿಸುವುದೇ ಕಷ್ಟವಾಗಿತ್ತು. ನಾವು ಯಾರೆಂಬುದೇ ಗೊತ್ತಿಲ್ಲ. ಆದರೂ ಕೂಡ ನಮಗೆ ಹಲವರು ಹಣ ನೀಡಿದ್ದಾರೆ. ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.