ಇನ್ನೂ ಮುಗಿದಿಲ್ಲ ‘ಕೆಜಿಎಫ್ 2’ ಚಿತ್ರದ ಶೂಟಿಂಗ್; ಫ್ಯಾನ್ಸ್ಗಾಗಿ ನಿರ್ಧಾರ ಬದಲಿಸಿದ ಪ್ರಶಾಂತ್ ನೀಲ್
ಯಶ್ ಅಭಿಮಾನಿಗಳಿಗೆ ಅತ್ಯುತ್ತಮವಾದದ್ದನ್ನೇ ನೀಡಬೇಕು ಎಂಬುದು ಪ್ರಶಾಂತ್ ನೀಲ್ ಆಶಯ. ಆ ಕಾರಣದಿಂದ ಅವರು ಒಂದು ಹಾಡಿನ ಮರುಚಿತ್ರೀಕರಣಕ್ಕೆ ತೀರ್ಮಾನಿಸಿದ್ದಾರೆ.

ಸಿನಿಪ್ರಿಯರು ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ‘ರಾಕಿಂಗ್ ಸ್ಟಾರ್’ ಯಶ್ (Yash) ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ದೇಶಾದ್ಯಂತ ಹೈಪ್ ಸೃಷ್ಟಿ ಆಗಿದೆ. ಟೀಸರ್ ಮೂಲಕ ಈ ಸಿನಿಮಾ ಸಖತ್ ನಿರೀಕ್ಷೆ ಮೂಡಿಸಿದೆ. ಏ.14ರಂದು ಸಿನಿಮಾ ತೆರೆಕಾಣಿಸಲು ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಸದ್ಯ ಈ ಚಿತ್ರದ ಕೆಲಸಗಳು ಯಾವ ಹಂತದಲ್ಲಿವೆ? ಅಚ್ಚರಿ ಏನೆಂದರೆ ‘ಕೆಜಿಎಫ್ 2’ ಸಿನಿಮಾದ ಶೂಟಿಂಗ್ ಇನ್ನೂ ಮುಗಿದಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. ರಿಲೀಸ್ ದಿನಾಂಕ ಸಮೀಪಿಸುತ್ತಿದ್ದರೂ ಕೂಡ ಚಿತ್ರೀಕರಣ ಮುಕ್ತಾಯ ಆಗಿಲ್ಲ. ಅದಕ್ಕೆ ಕಾರಣ ಕೂಡ ಇದೆ. ಗುಣಮಟ್ಟದ ವಿಚಾರದಲ್ಲಿ ಪ್ರಶಾಂತ್ ನೀಲ್ (Prashanth Neel) ರಾಜಿ ಆಗುವವರಲ್ಲ. ಹಾಗಾಗಿ ಅವರು ಈಗೊಂದು ಹೊಸ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀರೋ ಇಂಟ್ರೊಡಕ್ಷನ್ ಹಾಡನ್ನು ಮರು ಚಿತ್ರೀಕರಣ ಮಾಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಲ್ಲಿ ಚರ್ಚೆ ನಡೆದಿದೆ. ಈ ಹಾಡಿಗಾಗಿ ಇನ್ನೂ 5 ದಿನಗಳ ಕಾಲ ಶೂಟಿಂಗ್ ನಡೆಯಬೇಕಿದೆ.
‘ಕೆಜಿಎಫ್: ಚಾಪ್ಟರ್ 1’ ಚಿತ್ರದಲ್ಲಿ ಹಾಡುಗಳು ಮಹತ್ವದ ಪಾತ್ರ ವಹಿಸಿದ್ದವು. ರವಿ ಬಸ್ರೂರು ಸಂಗೀತ ನೀಡಿದ್ದ ಗೀತೆಗಳು ಸೂಪರ್ ಹಿಟ್ ಆಗಿದ್ದವು. ಅದೇ ರೀತಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿಯೂ ಕೂಡ ಹಾಡುಗಳಿಗೆ ಮಹತ್ವ ನೀಡಲಾಗಿದೆ. ಈ ಚಿತ್ರದ ಹೀರೋ ಇಂಟ್ರಡಕ್ಷನ್ ಹಾಡನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಆದರೆ ಆ ಗೀತೆ ಮೂಡಿಬಂದಿರುವ ಬಗ್ಗೆ ನಿರ್ದೇಶಕರಿಗೆ ಸಮಾಧಾನ ಆದಂತಿಲ್ಲ. ಹಾಗಾಗಿ ಆ ಹಾಡನ್ನು ಮತ್ತೊಮ್ಮೆ ಹೊಸದಾಗಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ ಎಂಬ ಮಾತು ಕೇಳಿಬಂದಿದೆ.
ಎ. ಹರ್ಷ ಅವರು ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಕೆಲವೇ ದಿನಗಳಲ್ಲಿ ಹೈದರಾಬಾದ್ನಲ್ಲಿ ಶೂಟಿಂಗ್ ಆರಂಭ ಆಗಲಿದೆ. ಅಂದಾಜು 5 ದಿನಗಳ ಕಾಲ ಹಾಡನ್ನು ಚಿತ್ರೀಕರಿಸಲು ಪ್ಲ್ಯಾನ್ ಮಾಡಲಾಗಿದೆ. ಯಶ್ ಅಭಿಮಾನಿಗಳಿಗೆ ಅತ್ಯುತ್ತಮವಾದದ್ದನ್ನೇ ನೀಡಬೇಕು ಎಂಬುದು ಪ್ರಶಾಂತ್ ನೀಲ್ ಆಶಯ. ಆ ಕಾರಣದಿಂದ ಅವರು ಹಾಡಿನ ಮರುಚಿತ್ರೀಕರಣಕ್ಕೆ ತೀರ್ಮಾನಿಸಿದ್ದಾರೆ. ಈ ಹಾಡು ಹೇಗೆ ಮೂಡಿಬರಬಹುದು ಎಂಬ ಕುತೂಹಲ ಈಗ ಸೃಷ್ಟಿ ಆಗಿದೆ.
ಹಲವು ಕಾರಣಗಳಿಂದಾಗಿ ‘ಕೆಜಿಎಫ್: ಚಾಪ್ಟರ್ 2’ ಚಿತ್ರ ನಿರೀಕ್ಷೆ ಮೂಡಿಸಿದೆ. ಬಾಲಿವುಡ್ ಸೆಲೆಬ್ರಿಟಿಗಳಾದ ಸಂಜಯ್ ದತ್, ರವೀನಾ ಟಂಡನ್ ಅವರು ಈ ಚಿತ್ರದಲ್ಲಿ ನಟಿಸಿರುವುದರಿಂದ ಹಿಂದಿ ಪ್ರೇಕ್ಷಕರ ವಲಯದಲ್ಲೂ ನಿರೀಕ್ಷೆ ಹೆಚ್ಚಿದೆ. ‘ಕೆಜಿಎಫ್ 2’ ಎದುರು ತೆರೆಕಾಣಲು ಪರಭಾಷೆಯ ಸ್ಟಾರ್ ಸಿನಿಮಾಗಳು ಕೂಡ ಹಿಂದೇಟು ಹಾಕುತ್ತಿವೆ. ಆ ಕಾರಣದಿಂದ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚೆಡ್ಡಾ’ ಸಿನಿಮಾ ಕೂಡ ತನ್ನ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ.
ಕುಂದಾಪುರದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸ್ಟುಡಿಯೋದಲ್ಲಿ ‘ಕೆಜಿಎಫ್ 2’ ಚಿತ್ರದ ಮ್ಯೂಸಿಕ್ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗೆ ‘ಕೆಜಿಎಫ್ 2’ ಸಿನಿಮಾ ತಂಡದ ಜತೆ ಯಶ್ ಕೂಡ ಅಲ್ಲಿಗೆ ತೆರಳಿದ್ದರು. ಈ ಮಧ್ಯೆ ಯಶ್ ಅವರು ಕುಂಬಾಶಿಯ ಆನೆಗುಡ್ಡೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದರು.
ಇದನ್ನೂ ಓದಿ:
‘ಸಲಾರ್’ಗೂ ‘ಕೆಜಿಎಫ್’ ಫಾರ್ಮುಲಾ; ಎರಡು ಪಾರ್ಟ್ನಲ್ಲಿ ಬರಲಿದೆ ಪ್ರಭಾಸ್-ಪ್ರಶಾಂತ್ ನೀಲ್ ಸಿನಿಮಾ
‘ಕೆಜಿಎಫ್ 2’ ಜತೆಗಿನ ರೇಸ್ನಿಂದ ಹಿಂದೆ ಸರಿದ ‘ಲಾಲ್ ಸಿಂಗ್ ಛಡ್ಡಾ’; ಆಮಿರ್ ಖಾನ್ ನೀಡಿದ ಕಾರಣ ಏನು?




