‘ಕೆಜಿಎಫ್​ 2’ ಚಿತ್ರದ ‘ತೂಫಾನ್​..’ ವಿಡಿಯೋ ಸಾಂಗ್​ ಮೂಲಕ ಮತ್ತೆ ಧೂಳೆಬ್ಬಿಸಿದ ರಾಕಿ ಭಾಯ್​ ಯಶ್​

‘ಕೆಜಿಎಫ್​ 2’ ಚಿತ್ರದ ‘ತೂಫಾನ್​..’ ವಿಡಿಯೋ ಸಾಂಗ್​ ಮೂಲಕ ಮತ್ತೆ ಧೂಳೆಬ್ಬಿಸಿದ ರಾಕಿ ಭಾಯ್​ ಯಶ್​
ಯಶ್​

Toofan Video Song: ‘ತೂಫಾನ್​..’ ಹಾಡು ‘ಕೆಜಿಎಫ್​ 2’ ಸಿನಿಮಾದ ಕಥೆಯಲ್ಲಿ ಮುಖ್ಯ ಎನಿಸಿಕೊಂಡಿದೆ. ಅದರ ವಿಡಿಯೋ ಸಾಂಗ್​ ಈಗ ರಿಲೀಸ್​ ಆಗಿದೆ.

TV9kannada Web Team

| Edited By: Madan Kumar

May 18, 2022 | 4:34 PM

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಐಡೆಂಟಿಟಿ ಬಂದಿದೆ. ವಿಶ್ವಮಟ್ಟದಲ್ಲಿ ಈ ಚಿತ್ರ ಸೌಂಡು ಮಾಡಿದೆ. ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದೆ. ಇಂದಿಗೂ ವೀಕೆಂಡ್​ನಲ್ಲಿ ಕೆಲವು ಕಡೆಗಳಲ್ಲಿ ‘ಕೆಜಿಎಫ್​ 2’ (KGF Chapter 2) ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಒಟಿಟಿಗೂ ಈ ಚಿತ್ರ ಕಾಲಿಟ್ಟಿದೆ. ಆದರೆ ಸದ್ಯಕ್ಕೆ ಹಣ ನೀಡಿ ನೋಡಬೇಕು. ನಂತರದ ದಿನಗಳಲ್ಲಿ ಎಲ್ಲ ಚಂದಾದಾರರು ವೀಕ್ಷಿಸಬಹುದು. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾದ ಕಲೆಕ್ಷನ್ 1200 ಕೋಟಿ ರೂಪಾಯಿ ಆಗಿದೆ. ಇದು ಸಣ್ಣ ಸಾಧನೆಯಲ್ಲ. ಈ ಸಿನಿಮಾ ಮೂಲಕ ನಟ ಯಶ್​ (Yash) ಅವರ ಖ್ಯಾತಿ ಜಗದಗಲ ಹಬ್ಬಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರು ಬಹುಬೇಡಿಕೆಯ ತಂತ್ರಜ್ಞನಾಗಿ ಗುರುತಿಸಿಕೊಂಡಿದ್ದಾರೆ. ಅವರ ಬತ್ತಳಿಕೆಯಿಂದ ಬಂದ ಹಾಡುಗಳು ಸಖತ್​ ಮೋಡಿ ಮಾಡಿವೆ. ‘ಕೆಜಿಎಫ್​ 2’ ಚಿತ್ರದ ಗೆಲುವಿನಲ್ಲಿ ಸಾಂಗ್ಸ್​ ಮತ್ತು ಹಿನ್ನೆಲೆ ಸಂಗೀತದ ಕೊಡುಗೆ ಕೂಡ ದೊಡ್ಡದು. ಹೆಚ್ಚು ಗಮನ ಸೆಳೆದಿರುವ ‘ತೂಫಾನ್​..’ ಹಾಡಿನ ವಿಡಿಯೋ ವರ್ಷನ್​ ಈಗ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದೆ.

ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಮೂಡಿಬಂದಿರುವ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರಕ್ಕೆ ಎಲ್ಲ ಭಾಷೆಯ ಪ್ರೇಕ್ಷಕರೂ ಭೇಷ್​ ಎಂದಿದ್ದಾರೆ. ಎಲ್ಲ ಭಾಷೆಯಲ್ಲೂ ಹಾಡುಗಳು ಹಿಟ್​ ಆಗಿವೆ. ಅದರ ಕ್ರೆಡಿಕ್​ ರವಿ ಬಸ್ರೂರು ಅವರಿಗೆ ಸಲ್ಲಬೇಕು. ‘ತೂಫಾನ್​..’ ಹಾಡು ‘ಕೆಜಿಎಫ್​ 2’ ಸಿನಿಮಾದಲ್ಲಿ ಮುಖ್ಯ ಎನಿಸಿಕೊಂಡಿದೆ. ಮೊದಲ ಪಾರ್ಟ್​​ನಲ್ಲಿ ರಾಕಿ ಭಾಯ್​ ಏನು ಮಾಡಿದ್ದ ಎಂಬುದನ್ನು ಕಥಾನಾಯಕಿಗೆ ವಿವರಿಸುವ ರೀತಿಯಲ್ಲಿ ಈ ಹಾಡು ಮೂಡಿಬಂದಿದೆ. ಚಿತ್ರಮಂದಿರದಲ್ಲಿ ಈ ಗೀತೆ ಬಂದಾಗ ಎಲ್ಲರೂ ಹುಚ್ಚೆದ್ದು ಕುಣಿದಿದ್ದಾರೆ. ಈ ಮೊದಲು ಯೂಟ್ಯೂಬ್​ನಲ್ಲಿ ಕೇವಲ ಲಿರಿಕಲ್​ ವಿಡಿಯೋ ರಿಲೀಸ್​ ಆಗಿತ್ತು. ಈಗ ವಿಡಿಯೋ ಸಾಂಗ್​ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ‘ಕೆಜಿಎಫ್​ 2’ ನೋಡಿದ್ಮೇಲೆ ‘ಕೆಜಿಎಫ್​ 3’ ಬಗ್ಗೆ ಶಿವಣ್ಣ ಹೇಳಿದ್ದೇನು? ಇಲ್ಲಿದೆ ‘ಸೆಂಚುರಿ ಸ್ಟಾರ್​’ ಮಾತು

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಗೆಲುವಿಗೆ ಹಲವು ಕಾರಣಗಳಿವೆ. ರವಿ ಬಸ್ರೂರು ಅವರ ಸಂಗೀತದ ಜೊತೆ ಭುವನ್​ ಗೌಡ ಛಾಯಾಗ್ರಹಣ, ಶಿವಕುಮಾರ್​ ಅವರ ಕಲಾ ನಿರ್ದೇಶನ, ಯಶ್​ ಮ್ಯಾನರಿಸಂ, ಎಲ್ಲ ಕಲಾವಿದರ ನಟನೆ, ತಾಯಿ ಸೆಂಟಿಮೆಂಟ್​, ಮೈ ನವಿರೇಳಿಸುವ ಆ್ಯಕ್ಷನ್​ ಸನ್ನಿವೇಶ, ಸರಿಸಾಟಿ ಇಲ್ಲದ ಮೇಕಿಂಗ್​, ಬೃಹತ್​ ಸೆಟ್​ಗಳು ಸೇರಿದಂತೆ ಅನೇಕ ಅಂಶಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಜಯಭೇರಿ ಬಾರಿಸಿದೆ.

ಸಂಜಯ್​ ದತ್​, ರವೀನಾ ಟಂಡನ್​ ಅವರು ‘ಕೆಜಿಎಫ್​ 2’ ಸಿನಿಮಾದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು. ಹಿಂದಿ ಪ್ರೇಕ್ಷಕರಿಗೆ ಈ ಚಿತ್ರ ಆಪ್ತವಾಗಲು ಇದು ಕೂಡ ಒಂದು ಕಾರಣ. ಈ ಸಿನಿಮಾದಿಂದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರ್ಜರಿ ಲಾಭ ಆಗಿದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರ ಚಾರ್ಮ್​ ಹೆಚ್ಚಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶ್​ ಅವರು ತಮ್ಮ ಡಿಮ್ಯಾಂಡ್​ ಹೆಚ್ಚಿಸಿಕೊಂಡಿದ್ದಾರೆ. ಎಲ್ಲರ ಬಾಯಲ್ಲೂ ನಿರ್ದೇಶಕ ಪ್ರಶಾಂತ್​ ನೀಲ್​ ಹೆಸರು ಕೇಳಿಬರುವಂತಾಗಿದೆ. ನಟಿ ಶ್ರೀನಿಧಿ ಶೆಟ್ಟಿ ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕ್ಯೂ ನಿಲ್ಲುವಂತಾಗಿದೆ. ಅವರ ಮುಂಬರುವ ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada